ಶಹಾಬಾದ: ಕೊರೊನಾ ಸೋಂಕು ತೊಲಗಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಬುಧವಾರ ನಸುಕಿನ ಜಾವ ಹೋಮ-ಹವನ ಮಾಡಿ ನಗರದ ಬಡಾವಣೆಯ ಗಲ್ಲಿಗಳಲ್ಲಿ ಹೊಗೆ ಹಾಕಿದ್ದಾರೆ.
ಸಮರ್ಥನೆ: ಹೋಮ-ಹವನ ಮಾಡಿ ಹೊಗೆ ಹಾಕುವುದು ಪ್ರಾಕೃತಿಕ ಸ್ಯಾನಿ ಟೈಸರ್ ಇದ್ದಂತೆ. ಇದರಿಂದ ಕೊರೊನಾ ಸೋಂಕು ಸಾಯುತ್ತದೆ. ಹಿಂದಿನ ಕಾಲದಲ್ಲಿ ಇದೇ ರೀತಿ ಮಾಡುತ್ತಿದ್ದರು. ಅದನ್ನು ನಾವು ಮಾಡಿದ್ದೇವೆ ಎಂದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಸುಭಾಷ ಜಾಪೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವಾಸದಿಂದ ಮಾಡಿದ್ದೇವೆ: ಹೋಮ- ಹವನ ಭಾರತೀಯ ಸಂಸ್ಕೃತಿಯ ಪ್ರಾಚೀನ ಕಾಲದ ಪದ್ಧತಿಯಾಗಿದೆ. ಇದರಿಂದ ವಾತಾವರಣ ಶುದ್ಧಿ ಆಗುತ್ತದೆ. ಹಿಂದಿನ ಕಾಲದಲ್ಲಿ ಮನೆ ಶುದ್ಧಿ ಮಾಡಲು ಈ ರೀತಿಯ ಹೋಮ-ಹವನ ಮಾಡುತ್ತಿದ್ದರು. ಇದನ್ನೇ ನಾವು ಕೊರೊನಾ ಸೋಂಕು ಹೊಡೆದೋಡಿಸಲು ಉತ್ತಮ ಮಾರ್ಗ ಎಂದು ನಂಬಿ ಮಾಡಿದ್ದೇವೆ ಎಂದು ಸಂಘದ ಸ್ವಯಂಸೇವಕ ದಿನೇಶ ಗೌಳಿ ತಿಳಿಸಿದ್ದಾರೆ.
ಸೇಡಂ: ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ಕೊರೊನಾ ಮಹಾಮಾರಿಯಿಂದ ಮುಕ್ತಿ ಹೊಂದಲು ಪುರೋಹಿತರಾದ ದೇವೆಂದ್ರಾಚಾರ್ಯ ಅವರು ಕೈಗೊಂಡ 15 ದಿನಗಳ ಮಹಾ ಮೃತ್ಯುಂಜಯ ಹೋಮ ಸಂಪನ್ನಗೊಂಡಿದೆ. ನಿರಂತರ 15 ದಿನಗಳಿಂದ ತಮ್ಮ ಮನೆಯಲ್ಲಿ ಕಳೆದ ಅಕ್ಷರದತ್ತ ಅಮಾವಾಸ್ಯೆಯಿಂದ ಪುರೋಹಿತ ದೇವೇಂದ್ರಾಚಾರ್ಯರು ಶ್ರೀ ಮೃತ್ಯುಂಜಯ, ಶ್ರೀ ರುದ್ರಾಯ, ಶ್ರೀ ವಿಶ್ವಕರ್ಮ, ಶ್ರೀ ಜಯಾದಿ, ಹೋಮ-ಹವನ, ಅಖಂಡ ನಂದಾದೀಪ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳನ್ನು ಪೂರೈಸಿದ್ದಾರೆ. ಗುರುವಾರ ಹೋಮ ಸಂಪನ್ನಗೊಂಡಿದೆ.
ನಾಡಿನ ಸಮಸ್ತ ಜನತೆ ಸಂಕಷ್ಟ ಪರಿಹಾರವಾಗಲೆಂದು ಹಾಗೂ ರೈತರು, ಸೈನಿಕರು, ಕೊರೂನಾ ವಾರಿಯರ್ಸ್‌ಗಳಿಗೆ ಧೈರ್ಯದಿಂದ ಈ ಸಂಕಷ್ಟ ಎದುರಿಸುವ ಸಾಮರ್ಥ್ಯ ನೀಡಲೆಂದು ಶ್ರೀ ಕಾಳಿಕಾದೇವಿಯಲ್ಲಿ ಪ್ರಾರ್ಥಿಸಿ, ಮಹಾ ಮೃತ್ಯುಂಜಯ ಹೋಮ ಕೈಗೊಂಡಿರುವುದಾಗಿ ಪುರೋಹಿತರು ತಿಳಿಸಿದ್ದಾರೆ. ವೀರಭದ್ರಪ್ಪ ಬಡಿಗೇರ ತೆಂಗಳಿ, ಶಿವಪ್ರಸಾದ ವಿಶ್ವಕರ್ಮ ಈ ಸಂದರ್ಭದಲ್ಲಿದ್ದರು.