ಸಿಂದಗಿ: ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಬವಣೆ ತಪ್ಪಿಸಲು ಹಾಗೂ ಆ ಭಾಗದ ರೈತರ ಜಮೀನಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕ್ಷೇತ್ರದಲ್ಲಿನ ಕೆರೆ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಸಾಸಾಬಾಳ ಗ್ರಾಮದ ಹತ್ತಿರದ ಸಾಬಾಬಾಳ-ಯಂಕಂಚಿ ಕೆರೆ ಶನಿವಾರ ವೀಕ್ಷಿಸಿ ಅವರು ಮಾತನಾಡಿದರು.
ಕೆರೆ ವಿಶಾಲ ವ್ಯಾಪ್ತಿ ಹೊಂದಿದೆ. ಬಹುಹಳ್ಳಿ ಕುಡಿವ ನೀರಿನ ಯೋಜನೆಯಡಿ ಗುಬ್ಬೇವಾಡ, ಕಣ್ಣಗುಡ್ಡಿಹಾಳ, ಹಂದಿಗನೂರ, ಸಾಬಾಬಾಳ, ಬಸ್ತಿಹಾಳ ಮುಂತಾದ ಹಳ್ಳಿಗಳಿಗೆ ಈ ಕೆರೆ ನೀರು ಬಳಸಲಾಗುತ್ತಿದೆ. ಸಾಸಾಬಾಳ-ಯಂಕಂಚಿ ಕೆರೆಗೆ ನೀರು ಹರಿದು ಬರಲು ತಗ್ಗು ಅಗೆದಿದ್ದಾರೆ. ಬರುವ ದಿನಗಳಲ್ಲಿ ಕೆರೆಗೆ ನೀರು ತುಂಬಲು ಸುಸಜ್ಜಿತ ಲ್ಯಾಟ್ರಲ್ ಅಭಿವೃದ್ಧಿ ಪಡಿಸಿ ರೈತರಿಗೆ ಅನುಕೂಲ ಮಾಡುವುದಾಗಿ ತಿಳಿಸಿದರು.
ಕೆರೆಗೆ ನೀರು ತುಂಬಿಸುವುದರಿಂದ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಸಾವಿರಕ್ಕೂ ಅಧಿ ಕ ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಾವರಿಗೆ ಅನುಕೂಲವಾಗಲಿದೆ. ಇದರಿಂದ ರೆತರಿಗೆ ನೀರಾವರಿ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿನ ಕೆರೆಗಳ ಅಭಿವೃದ್ದಿ ಮಾಡುವ ಮೂಲಕ ಆಯಾ ಭಾಗದ ರೈತರಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು.
ಬಿಜೆಪಿ ಸಿಂದಗಿ ಮಂಡಳ ಅಧ್ಯಕ್ಷ ಈರಣ್ಣ ರಾವೂರ ಮಾತನಾಡಿ, ಶಾಸಕ ರಮೇಶ ಭೂಸನೂರ ಗ್ರಾಮೀನಾಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಜೊತೆಗೆ ರೈತರ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.
ಈ ವೇಳೆ ಬಿಜೆಪಿ ಮುಖಂಡರಾದ ಸಿದ್ದು ಬುಳ್ಳಾ, ಶ್ರೀಶೈಲ ಚಳ್ಳಗಿ, ಗೌಡಣ್ಣ ಆಲಮೇಲ, ರವಿ ನಾಯ್ಕೋಡಿ, ಮಲ್ಲನಗೌಡ ಬಗಲಿ, ಪೀರು ನಾಯ್ಕೋಡಿ ಸೇರಿದಂತೆ ಇತರರಿದ್ದರು.