Advertisement

ದಾಳಿಂಬೆ ಬೆಳೆಗೆ ಸಿಕ್ಕಿದ್ದು 3 ಕೋಟಿ! ಶಾಂತವೀರ ಸ್ವಾಮೀಜಿಯ ಸಾಹಸಗಾಥೆ

12:51 PM May 22, 2017 | Harsha Rao |

ದಾಳಿಂಬೆಗೆ ಮಿತ ಔಷಧಿ ಬಳಕೆ, ರೋಗ ಬಂದರೂ ಗಿಡ ಕೀಳದೆ ಶೂನ್ಯ ನಿರ್ವಹಣೆ ಮಾಡುವುದು, ಫ‌ಸಲಿನಿಂದ ಫ‌ಸಲಿಗೆ ಕನಿಷ್ಠ ಒಂದು ವರ್ಷ ಗ್ಯಾಪ್‌ ನೀಡುವುದು ಈ ಮೂರು ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ದಾಳಿಂಬೆ ತೋಟ ಮಾಡಿದರೆ ಎಂದೂ ರೈತರಿಗೆ ಹೊರೆಯಾಗುವುದಿಲ್ಲ, ಸಾಲದ ಸುಳಿಗೆ ಸಿಲುಕುವುದಿಲ್ಲ ಎನ್ನುವುದನ್ನು ಹೊಸದುರ್ಗದ ಕಾಯಕಯೋಗಿ ಸ್ವಾಮೀಜಿ ತೋರಿಸಿಕೊಟ್ಟಿದ್ದಾರೆ.

Advertisement

ಎಲ್ಲ ರೈತರ ದಾಳಿಂಬೆ ತೋಟಗಳಿಗೆ ರೋಗ ಕಾಡಿದಂತೆ ಸ್ವಾಮೀಜಿಗಳ ದಾಳಿಂಬೆಗೂ ಬ್ಯಾಕ್ಟೀರಿಯಲ್‌ ಬ್ಲೆ„ಟ್‌ ದುಂಡಾಣು ಅಂಗಮಾರಿ ರೋಗ ಆವರಿಸಿತು. ಆದರೆ ಅವರು ಗಿಡಗಳನ್ನು ಕೀಳಲಿಲ್ಲ. ಆಧುನಿಕ ತಜ್ಞರ ಸಲಹೆ ಕೇಳಲಿಲ್ಲ. ಮಿತ ಔಷಧಿ ಬಳಕೆ ಮಾಡಿ, ಶೂನ್ಯ ನಿರ್ವಹಣೆಯಲ್ಲಿ ಕಡಿಮೆ ಖರ್ಚು ಮಾಡಿ ರಸಭರಿತ ಹೊಳಪುಳ್ಳ ದಾಳಿಂಬೆ ಹಣ್ಣು ಬೆಳೆದು ಕಾಯಕ ಯೋಗಿ ರೈತರಿಗೆ ಮಾದರಿಯಾಗಿದ್ದಾರೆ. 

ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ ಏನು ಮಾಡಿದರೂ ಬದ್ಧತೆ ಮತ್ತು ಭಿನ್ನವಾಗಿ ಮಾಡುತ್ತಾರೆ ಎನ್ನುವುದಕ್ಕೆ ರೋಗ ಪೀಡಿತ ದಾಳಿಂಬೆಯಲ್ಲಿ ಸಮೃದ್ಧಿ ಫ‌ಲ ಪಡೆದಿರುವುದೇ ಸಾಕ್ಷಿ.

ಹೊಸದುರ್ಗ ತಾಲೂಕಿನ ಹೊಸಕೆರೆ ಗ್ರಾಮದ ಚನ್ನಬಸವೇಶ್ವರ ದೇವಸ್ಥಾನಕ್ಕೆ ಸೇರಿದ 20 ಎಕರೆ ಜಮೀನನ್ನು 2010ರಲ್ಲಿ ಪ್ರತಿ ಎಕರೆಗೆ ವಾರ್ಷಿಕ ಒಂದು ಸಾವಿರ ರೂ.ನಂತೆ ಗುತ್ತಿಗೆ ಪಡೆದು ಆಧುನಿಕ ಪದ್ಧತಿಯಲ್ಲಿ ದಾಳಿಂಬೆ ಕೃಷಿ ಕಾಯಕ ಆರಂಭಿಸಿದರು. ನಿರಂತರವಾಗಿ ಐದು ಬೆಳೆ ಪಡೆದರು. ಆ ಐದು ಬೆಳೆಯಲ್ಲಿ ಮೊದಲ ಮೂರು ಬೆಳೆಗಳು ಬಂಪರ್‌ ಲಾಭ ತಂದುಕೊಟ್ಟವು. ಉಳಿದ ಎರಡು ಬೆಳೆಗಳು ರೋಗ ಬಾಧೆಯಿಂದ ಸೊರಗಿ ಹೋಗಿ ಕೂಲಿ, ಖರ್ಚು ಅಷ್ಟೇ ಹುಟ್ಟಿತ್ತು. ಈ ವೇಳೆಗೆ ಹೊಸದುರ್ಗ ತಾಲೂಕಿನಲ್ಲಿ ಏಳು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ದಾಳಿಂಬೆ ಬೆಳೆದು ರೋಗ ಬಾಧೆಯಿಂದ ಸಾಕಷ್ಟು ರೈತರು ದಾಳಿಂಬೆ ಕಿತ್ತು ಬೇರೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. 

ಆದರೆ ಆ ಕೆಲಸವನ್ನು ಶಾಂತವೀರ ಸ್ವಾಮೀಜಿಗಳು ಮಾಡಲಿಲ್ಲ. ಅವರು ಭಿನ್ನವಾಗಿ ಯೋಚಿಸಿ ತಾವೇಕೆ ದಾಳಿಂಬೆ ಫ‌ಸಲಿಗೆ ಒಂದೆರಡು ವರ್ಷ ಗ್ಯಾಪ್‌ ನೀಡಿ ಮತ್ತೆ ದಾಳಿಂಬೆ ಬೆಳೆಯಬಾರದು ಎಂದು ಚಿಂತಿಸಿದರು. ಒಂದು ವರ್ಷ ಪೂರ್ತಿ ದಾಳಿಂಬೆ ಗಿಡಕ್ಕೆ ಹನಿ ನೀರನ್ನೂ ತಾಗಿಸಲಿಲ್ಲ. ಕಳೆ ತೆಗೆಯಲಿಲ್ಲ. ದಾಳಿಂಬೆ ಸಂಪೂರ್ಣವಾಗಿ ಒಣಗಿ ಕಡ್ಡಿಯಂತಾಯಿತು. ಒಂದು ವರ್ಷ ಪೂರ್ತಿ ಗಿಡಗಳನ್ನು ಸಂಪೂರ್ಣ ಒಣಗಿ ಬಿಟ್ಟು ನಂತರ ಒಣಗಿದ ದಾಳಿಂಬೆ ಗಿಡಗಳಿಗೆ ನೀರುಣಿಸಿ ಚಿಗುರಿಗೆ ಬಿಟ್ಟರು. 

Advertisement

ಸ್ವಾಮೀಜಿಗಳು ದಾಳಿಂಬೆ ಕೃಷಿಯಲ್ಲಿ ಮೂರು ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಆ ಹಣದಲ್ಲಿ 3.50 ಕೋಟಿ ರೂ.ಗಳ ವೆಚ್ಚದಲ್ಲಿ ಅಖೀಲ ಕುಂಚಿಟಿಗ ಮಹಾಸಂಸ್ಥಾನ ಹೈಟೆಕ್‌ ಶ್ರೀಮಠವನ್ನು ನಿರ್ಮಾಣ ಮಾಡಿದ್ದಾರೆ. ಮಠ ನಿರ್ಮಾಣಕ್ಕೆ ಭಕ್ತರಿಂದ ಒಂದು ರೂ. ಪಡೆಯಲಿಲ್ಲ. ಇದಕ್ಕಾಗಿ ಕೆಲ ಸಂಘ ಸಂಸ್ಥೆಗಳು ಅವರಿಗೆ ಕಾಯಕ ಯೋಗಿ, ದಾಳಿಂಬೆ ಸ್ವಾಮೀಜಿ ಮತ್ತಿತರ ಬಿರುದುಗಳನ್ನು ನೀಡಿ ಗೌರವಿಸಿವೆ.

ಅಂತರ- ಕೆಂಪು ಮಿಶ್ರಿತ ಮರಳು ಭೂಮಿಯಲ್ಲಿ ಸಾಲಿನಿಂದ ಸಾಲಿಗೆ 12×12 ಅಡಿ ಅಂತರ ಮತ್ತು ಗಿಡದಿಂದ ಗಿಡಕ್ಕೆ 12×12 ಅಡಿ ಗ್ಯಾಪ್‌ ನಲ್ಲಿ ದಾಳಿಂಬೆ ನಾಟಿ ಮಾಡಲು 2×2 ಅಡಿ ಗುಣಿ ತೆಗೆದು ಅದಕ್ಕೆ ದನಗಳ ಕೊಟ್ಟಿಗೆ ಗೊಬ್ಬರ, ತರಗೆಲೆ, ಕುರಿಗೊಬ್ಬರ ತುಂಬಿ ಸಾವಯವ ವಿಧಾನವನ್ನು ಅಳವಡಿಸಲಾಗಿದೆ. ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಲಾಗಿದೆ. 

ಖರ್ಚು- ಭೀಕರ ಬರ, ಬತ್ತಿದ ಅಂತರ್ಜಲದ ಮಧ್ಯೆ 12 ಎಕರೆ ಪ್ರದೇಶದ ದಾಳಿಂಬೆ ಬೆಳೆ ಬೆಳೆಯಲು ಒಟ್ಟು ಖರ್ಚು ಮಾಡಿದ್ದು ಕೇವಲ 1.50-2 ಲಕ್ಷ ರೂ.ಗಳು. ಪ್ರತಿ ಎಕರೆಗೆ 12- 15 ಸಾವಿರ ರೂ. ಖರ್ಚು ಮಾಡಿ ಸಮೃದ್ಧಿ ದಾಳಿಂಬೆ ಫ‌ಸಲು ತೆಗೆದದ್ದು ಸ್ವಾಮೀಜಿಯ ಹೆಚ್ಚುಗಾರಿಕೆ. 

ಇಳುವರಿ-12 ಎಕರೆ ಜಮೀನಿನಲ್ಲಿ ಮೂರು ಸಾವಿರ ದಾಳಿಂಬೆ ಗಿಡಗಳಿವೆ. ಪ್ರತಿ ದಾಳಿಂಬೆ ಗಿಡದಲ್ಲಿ 350 ಗ್ರಾಂ ನಿಂದ 700 ಗ್ರಾಂ ತನಕ ತೂಗುವ 50 ರಿಂದ 100 ರಸಭರಿತ ಹೊಳಪುಳ್ಳ ದಾಳಿಂಬೆ ಹಣ್ಣುಗಳಿವೆ. ಇಡೀ ಹೊಸಕೆರೆ ಗ್ರಾಮದ ಜನರಿಗೆ ಕುಡಿಯಲು ನೀರಿಲ್ಲ. ಗ್ರಾಮಸ್ಥರಿಗಾಗಿ ನೀರು ಪೂರೈಸಲು 22 ಕೊಳವೆ ಬಾವಿ ಕೊರೆಯಲಾಗಿದೆ. ಆದರೂ ನೀರಿಲ್ಲ. ಸುತ್ತಮುತ್ತಲ ಎಲ್ಲ ತೋಟಗಳು ನೀರಿಲ್ಲದೆ ಒಣಗಿವೆ. ಆದರೆ ದೇವರ ಜಮೀನಿನಲ್ಲಿ ಕೊರೆಸಲಾಗಿರುವ ಏಳು ಕೊಳವೆ ಬಾವಿಗಳಲ್ಲೂ ನೀರಿದೆ. ಒಂದು ಕೊಳವೆ ಬಾವಿ ಮಾತ್ರ ಬಳಕೆ ಮಾಡಿ 12 ಎಕರೆ ದಾಳಿಂಬೆಗೆ ನೀರುಣಿಸಲಾಗುತ್ತಿದೆ. ಸ್ವಾಮೀಜಿಗಳಿಗೆ ಜಲ ದೇವತೆಯ ಕೃಪೆಯೂ ಒಲಿದಿದೆ.

3000 ದಾಳಿಂಬೆ ಗಿಡ 72 ಲಕ್ಷ ರೂ. ಆದಾಯ!
ಇಳುವರಿ- ಮೂರು ಸಾವಿರ ದಾಳಿಂಬೆ ಗಿಡ ಇದ್ದು ಪ್ರತಿ ಗಿಡಕ್ಕೆ 10 ಕೆ.ಜಿ. ಸಾಮರ್ಥಯದ ಕನಿಷ್ಠ 3-4 ಬಾಕ್ಸ್‌ ದಾಳಿಂಬೆ ಹಣ್ಣುಗಳು ಸಿಗುತ್ತವೆ. ಮಾವು ಸುಗ್ಗಿ ಆಗಿರುವುದರಿಂದ ದಾಳಿಂಬೆಗೆ ಪ್ರತಿ ಬಾಕ್ಸ್‌ಗೆ 600 ರೂ. ಮಾರುಕಟ್ಟೆ ದರವಿದೆ. ಕನಿಷ್ಠ 72 ಲಕ್ಷ ರೂ.ಗಳು ಆದಾಯ ಬರಲಿದೆ. ಖರ್ಚು ಮಾಡಿರುವ 2 ಲಕ್ಷ ರೂ. ಕಳೆದರೆ ಇನ್ನೂ 70 ಲಕ್ಷ ರೂ. ಸ್ವಾಮೀಜಿಗೆ ದಾಳಿಂಬೆ ಲಾಭ ತಂದುಕೊಡಲಿದೆ. 

ಶೂನ್ಯ ನಿರ್ವಹಣೆ- ದಾಳಿಂಬೆ ತೋಟದಲ್ಲಿ ಯಾವುದೇ ಕಳೆ ತೆಗೆಯಲಿಲ್ಲ. ತೋಟದಲ್ಲಿ ಬೇಸಾಯ ಮಾಡಲಿಲ್ಲ. ಹನಿ ನೀರಾವರಿ ಪದ್ಧತಿಯಲ್ಲಿ ನೀರು ನಿರ್ವಹಣೆ ಮಾಡಿದರು. ಶೂನ್ಯ ಪದ್ಧತಿಯಲ್ಲಿ ಅತ್ಯಂತ ಕಡಿಮೆ ಖರ್ಚು ಮಾಡಿದರು. ದುಂದು ವೆಚ್ಚಕ್ಕೆ ಕಡಿವಾಣ ಹಾಕಿದರು.

ರೋಗ ಬಂತೆಂದು ದಾಳಿಂಬೆ ಗಿಡ ಕೀಳಲಿಲ್ಲ. ಒಂದು ವರ್ಷ ಹನಿ ನೀರು ಬಿಡದೆ ಗ್ಯಾಪ್‌ ನೀಡಿ ಸಂಪೂರ್ಣ ಒಣಗಿಸಿದೆ. ಕಮಿಷನ್‌ ದಂಧೆ ನಡೆಸುವ ತಜ್ಞರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ಕಳೆ ತೆಗೆಯಲಿಲ್ಲ. ಕಡಿಮೆ ಔಷಧಿ ಸಿಂಪರಣೆ ಮಾಡಿ 12 ಎಕರೆಗೆ ಕೇವಲ 2 ಲಕ್ಷ ರೂ. ಖರ್ಚು ಮಾಡಿದೆ. ರೈತರ್ಯಾರೂ ರೋಗ ಬಂದಿದೆ ಎಂದು ದಾಳಿಂಬೆ ಕೀಳಬಾರದು. ಫ‌ಸಲಿಂದ ಫ‌ಸಲಿಗೆ ಒಂದೆರಡು ವರ್ಷ ಗ್ಯಾಪ್‌ ನೀಡಿ ಮತ್ತೆ ಹಣ್ಣು ಬೆಳೆದರೆ ಯಾವುದೇ ನಷ್ಟವಾಗುವುದಿಲ್ಲ.
– ಶಾಂತವೀರ ಸ್ವಾಮೀಜಿ, ದಾಳಿಂಬೆ ಬೆಳೆಗಾರರು, 
ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ, ಹೊಸದುರ್ಗ

ಸಂಗೀತ ಕೇಳಿಸಿದರೆ ಪಕ್ಷಿಗಳು ಪರಾರಿ!
ಪಕ್ಷಿ ನಿಯಂತ್ರಣ- ಹಣ್ಣಿಗೆ ಬಂದಿರುವ ದಾಳಿಂಬೆ ತೋಟಕ್ಕೆ ಗಿಣಿ ಮತ್ತಿತರ ಹಣ್ಣು ತಿನ್ನುವ ಪಕ್ಷಿಗಳನ್ನು ನಿಯಂತ್ರಣ ಮಾಡಲು ಸ್ವಾಮೀಜಿಗಳು ಜೋರಾಗಿ ಶಬ್ದ ಮಾಡುವ ಸಂಗೀತಕ್ಕೆ ಮೊರೆ ಹೋಗಿದ್ದಾರೆ. ವೀರಗಾಸೆ ಸೇರಿದಂತೆ ಬಗೆಬಗೆಯಸಂಗೀತವನ್ನು ನಿತ್ಯ ಕೇಳಿಸುವುದರಿಂದ ಆ ಶಬ್ದಕ್ಕೆ ಹೆದರಿ ಹಕ್ಕಿ- ಪಕ್ಷಿಗಳು ದಾಳಿಂಬೆ ಹಣ್ಣಿಗೆ ದಾಳಿ ಮಾಡುತ್ತಿಲ್ಲ. ಇದರಿಂದಾಗಿ ಸುಲಭವಾಗಿ ಪಕ್ಷಿಗಳಿಂದ ತೋಟ ರಕ್ಷಣೆ ಮಾಡುತ್ತಿದ್ದಾರೆ.

– ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next