ಆ್ಯಂಟಿಗಾ: ಅದು ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಟಿ20 ಪಂದ್ಯ. ವಿಂಡೀಸ್ ಬ್ಯಾಟಿಂಗ್ ವೇಳೆ ನಾಲ್ಕನೇ ಓವರ್ ಎಸೆಯಲು ಬಂದ ಅಖಿಲ ಧನಂಜಯ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ಲೂಯಿಸ್, ಗೇಲ್, ಪೂರನ್ ನಂತಹ ಟಿ20 ಸ್ಪೆಷಲಿಸ್ಟ್ ಗಳು ವಿಕೆಟ್ ಕಳೆದುಕೊಂಡಿದ್ದರು. ಲಂಕಾ ಗೆದ್ದೇ ಬಿಟ್ಟಿತು ಎನ್ನುವ ಪರಿಸ್ಥಿತಿ. ಸ್ಪಿನ್ನರ್ ಅಖಿಲ ಧನಂಜಯ ಸಂತೋಷದ ಅಲೆಯಲ್ಲಿ ತೇಲುತಿದ್ದರು. ಆಗಲೇ ಕ್ರೀಡಾಂಗಣಕ್ಕೆ ಎಂಟ್ರಿಯಾಗಿದ್ದು ವಿಂಡಿಸ್ ನಾಯಕ, ಟಿ20 ದೈತ್ಯ ಕೈರನ್ ಪೊಲಾರ್ಡ್. ಧನಂಜಯರ ಮುಂದಿನ ಓವರ್ ನ ಎಲ್ಲಾ ಆರು ಎಸೆತಗಳನ್ನು ಪೊಲಾರ್ಡ್ ಮೈದಾನದ ಮೂಲೆ ಮೂಲೆಗೆ ಅಟ್ಟಿದ್ದರು! ವಿಶ್ವದಾಖಲೆಯ ಕ್ಷಣಕ್ಕೆ ಸಾಕ್ಷಿಯಾಗಿತ್ತು ಆ್ಯಂಟಿಗಾ!
ಹೌದು. 2007ರಲ್ಲಿ ಭಾರತದ ಯುವರಾಜ್ ಸಿಂಗ್ ನಿರ್ಮಿಸಿದ್ದ ದಾಖಲೆಯನ್ನು ಪೊಲಾರ್ಡ್ ಸರಿಗಟ್ಟಿದ್ದಾರೆ. ಓವರ್ ನ ಆರು ಎಸೆತಗಳನ್ನು ಸಿಕ್ಸರ್ ಬಾರಿಸಿ ಮೆರೆದಾಡಿದ್ದಾರೆ.
ಇದನ್ನೂ ಓದಿ:ಕಂಬಳ ಕರೆಗೆ ಇಳಿದ ಬಾಲಕಿ : ಆರನೇ ತರಗತಿ ವಿದ್ಯಾರ್ಥಿನಿ ಚೈತ್ರಾಳ ಚಿತ್ತ ಕಂಬಳದತ್ತ!
ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ 20 ಓವರ್ ಗಳಲ್ಲಿ ಗಳಿಸಿದ್ದು ಕೇವಲ 131 ರನ್. ಸುಲಭ ಗುರಿ ಬೆನ್ನಟ್ಟಿದ ವಿಂಡೀಸ್ ಸ್ಪೋಟಕ ಆರಂಭ ಪಡೆಯಿತಾದರೂ ಸತತ ವಿಕೆಟ್ ಕಳೆದುಕೊಂಡಿತು. ಅಖಿಲ ಧನಂಜಯ ಹ್ಯಾಟ್ರಿಕ್ ಸಾಧನೆ ಮಾಡಿದರು. ಆದರೆ ಈ ಸಾಧನೆಯ ಖುಷಿಯನ್ನು ಪೊಲಾರ್ಡ್ ಕೆಲವೇ ನಿಮಿಷದಲ್ಲಿ ಮಣ್ಣುಪಾಲು ಮಾಡಿದ್ದರು.
ಪಂದ್ಯದ ಆರನೇ ಓವರ್ ಎಸೆಯಲು ಬಂದ ಅಖಿಲ ಧನಂಜಯರ ಬೌಲಿಂಗ್ ನಲ್ಲಿ ಪೊಲಾರ್ಡ್ ಆರು ಸಿಕ್ಸರ್ ಬಾರಿಸಿದರು. ಈ ಮೂಲಕ ಯುವಿ ದಾಖಲೆಯನ್ನು ಸರಿ ಗಟ್ಟಿದರು. ಪೊಲಾರ್ಡ್ ಕೇವಲ 11 ಎಸೆತದಲ್ಲಿ 38 ರನ್ ಬಾರಿಸಿ ಔಟಾದರು. ವಿಂಡೀಸ್ 13.1 ಓವರ್ ನಲ್ಲಿ 134 ರನ್ ಗುರಿ ತಲುಪಿ ವಿಜಯ ಸಾಧಿಸಿತು.