ನವದೆಹಲಿ/ಬೆಂಗಳೂರು: ದೇಶದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ಸೋಮವಾರ(ಜುಲೈ 18) ನಡೆದ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಸ್ಪರ್ಧಿಸಿದ್ದು, ಸಂಜೆ 5ಗಂಟೆಗೆ ಮತದಾನ ಮುಕ್ತಾಯಗೊಂಡಿದೆ. ಜುಲೈ 21ರಂದು ಮತಎಣಿಕೆ ನಡೆಯಲಿದ್ದು, ರಾತ್ರಿ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ:ಏಕದಿನ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ ಬೆನ್ ಸ್ಟೋಕ್ಸ್: ನಾಳೆ ಕೊನೆಯ ಪಂದ್ಯ
ರಾಷ್ಟ್ರಪತಿ ಚುನಾವಣೆಯಲ್ಲಿ ದೇಶಾದ್ಯಂತ ಸುಮಾರು 4,800 ಸಂಸದರು, ಶಾಸಕರು ಗುಪ್ತ ಮತದಾನದ ಮೂಲಕ ಮತಚಲಾಯಿಸಿದ್ದರು. ಕರ್ನಾಟಕ ವಿಧಾನಸಭೆಯಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯ 122, ಕಾಂಗ್ರೆಸ್ ಪಕ್ಷದ 70 ಹಾಗೂ ಜೆಡಿಎಸ್ ನ 32 ಶಾಸಕರು ಮತ ಚಲಾಯಿಸಿದ್ದರು.
ಜೆಡಿಎಸ್ ನ ಹಿರಿಯ ಮುಖಂಡ, ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ(94ವರ್ಷ)ರು ಅನಾರೋಗ್ಯದಿಂದಾಗಿ ದೆಹಲಿಗೆ ತೆರಳದೆ ಬೆಂಗಳೂರಿನಲ್ಲಿಯೇ ವ್ಹೀಲ್ ಚೇರ್ ನಲ್ಲಿ ಬಂದು ಮತಚಲಾಯಿಸಿದ್ದರು. ಸಂಸದ ಶ್ರೀನಿವಾಸ್ ಪ್ರಸಾದ್ ಕೂಡಾ ವಿಧಾನಸಭೆಯಲ್ಲಿ ಮತಚಲಾಯಿಸಿದ್ದರು. ಇಂದು ರಾತ್ರಿ 9.20ಕ್ಕೆ ವಿಮಾನದ ಮೂಲಕ ಮತಪೆಟ್ಟಿಗೆ ರವಾನೆಯಾಗಲಿದೆ ಎಂದು ವರದಿ ತಿಳಿಸಿದೆ.
ದೆಹಲಿ ವಿಧಾನಸಭೆಯಲ್ಲಿ ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ 70 ಶಾಸಕರುಗಳ ಪೈಕಿ 68 ಶಾಸಕರು ಮತಚಲಾಯಿಸಿದ್ದು, ಆಮ್ ಆದ್ಮಿ ಪಕ್ಷದ ಸತ್ಯೇಂದ್ರ ಜೈನ್ ಮತ್ತು ಹಾಜಿ ಯೂನೂಸ್ ತಮ್ಮ ಮತ ಚಲಾಯಿಸಿಲ್ಲ ಎಂದು ವರದಿ ಹೇಳಿದೆ. ಜೈನ್ ಪ್ರಸ್ತುತ ದೆಹಲಿ ಜೈಲಿನಲ್ಲಿದ್ದು, ಶಾಸಕ ಯೂನುಸ್ ಯಾಕೆ ಮತ ಚಲಾಯಿಸಿಲ್ಲ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ.
ರಾಷ್ಟ್ರಪತಿ ಚುನಾವಣೆಯ ನಿಟ್ಟಿನಲ್ಲಿ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಶಶಿ ತರೂರ್, ಮಲ್ಲಿಕಾರ್ಜುನ್ ಖರ್ಗೆ, ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಸೇರಿದಂತೆ ದೇಶಾದ್ಯಂತ ಸಿಎಂ, ಸಂಸದರು, ಶಾಸಕರು ಮತಚಲಾಯಿಸಿದ್ದರು.