Advertisement

ರಾಮನಗರ: ದೇವರ ಹೆಸರಲ್ಲಿ ರಾಜಕೀಯ ದಾಳ!

04:59 PM Dec 14, 2022 | Team Udayavani |

ರಾಮನಗರ: ಜಿಲ್ಲೆಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ವಿಶೇಷವಾಗಿ ಘಟಾನುಘಟಿಗಳ ತವರು ಕ್ಷೇತ್ರವಾದ ರಾಮನಗರ ಜಿಲ್ಲೆ ಚುನಾವಣಾ ಜಿದ್ದಾಜಿದ್ದಿಗೆ ವೇದಿಕೆಯಾಗಿದೆ.

Advertisement

ಅತ್ತ ಮದಗಜಗಳೆಂದೇ ಜಿದ್ದಾಜಿದ್ದಿಗೆ ಬಿದ್ದಿರುವ ನಾಯಕರ ನಡುವೆ ದೇವರ ಹೆಸರಲ್ಲಿ ಮತ ಸೆಳೆಯುವ ತಂತ್ರಗಾರಿಕೆ ಜೋರಾಗಿದೆ.

ಹೌದು. ರಾಮನಗರ ಜಿಲ್ಲೆ ಅಂದಾಕ್ಷಣ ಹಲವು ವಿಶೇಷಗಳು ಕಾಣಿಸುತ್ತದೆ. ರಾಜಕಾರಣದಲ್ಲಂತೂ ವಿಶಿಷ್ಠ ಸ್ಥಾನ ಗಳಿಸಿರುವ ರಾಮನಗರ ಮೂವರು ಮುಖ್ಯಮಂತ್ರಿ ನೀಡಿದ ಕ್ಷೇತ್ರ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರ ತವರು ಜಿಲ್ಲೆ ಕೂಡ ಹೌದು. ರಾಜಕೀಯವಾಗಿ ನೋಡುವುದಾದರೆ ಮೂವರೂ ಕೂಡ ಜಿದ್ದಾಜಿದ್ದಿನ ವೈರತ್ವದವರು. ವಿಶೇಷವಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಶಾಸಕರಾಗಿದ್ದು, ಅದೇ ಕ್ಷೇತ್ರದಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳಬೇಕೆಂಬ ಕಾರಣಕ್ಕೆ ಜಿದ್ದಾಜಿದ್ದಿಗೆ ಬಿದ್ದಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ನಡುವೆ ಮದಗಜಗಳ ಕಾಳಗವೇ ಕಾದಿದೆ ಎಂದರೂ ತಪ್ಪಲ್ಲ.

ದೇವರ ಹೆಸರಲ್ಲಿ ರಾಜಕಾರಣ: ಹೌದು, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸಿ.ಪಿ.ಯೋಗೇಶ್ವರ್‌ ಪ್ರಬಲ ಪ್ರತಿಸ್ಪರ್ಧಿಯಾಗಿದ್ದು, ತಂತ್ರ- ರಣತಂತ್ರಗಳನ್ನ ಇಬ್ಬರೂ ನಾಯಕರು ಹೆಣೆಯುವಲ್ಲಿ ನಿರತರಾಗಿ ದ್ದಾರೆ. ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಸಿ.ಪಿ. ಯೋಗೇಶ್ವರ್‌ ರಾಮನ ಹೆಸರಲ್ಲಿ ಈ ಚುನಾವಣೆ ಎನ್ನುವ ಮಾತನ್ನು ಹೇಳಿಕೊಂಡಿದ್ದು, ಅದಕ್ಕೆ ಪೂರಕ ಎಂಬಂತೆ ಇತ್ತೀಚಿಗಷ್ಟೇ ರಾಮ ಮಂದಿರ ನಿರ್ಮಾಣಕ್ಕಾಗಿ ಬೆಳ್ಳಿ ಇಟ್ಟಿಗೆ ಕಳುಹಿಸುವ ಪೂಜಾ ಕಾರ್ಯಕ್ರಮವನ್ನೂ ಅದ್ಧೂರಿಯಾಗಿಯೇ ನಡೆಸಿದ್ದರು.

ಮಾಜಿ ಸಿ.ಎಂ ಕುಮಾರಸ್ವಾಮಿ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಡಿ.16ರಂದು ರಾಮ ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಅದ್ಧೂರಿಯಾಗಿ ತಿರುಪತಿಯ ತಿಮ್ಮಪ್ಪನ ವಿಗ್ರಹವನ್ನೇ ತರಿಸುವ ಮೂಲಕ ಶ್ರೀನಿವಾಸ ಕಲ್ಯಾಣಕ್ಕೆ ವೇದಿಕೆ ಸಿದ್ಧಗೊಳಿಸಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಮೂಲದೇವರ ವಿಗ್ರಹ ಮೆರವಣಿಗೆ ಮಾಡಿಸುವ ಮೂಲಕ ಐತಿಹಾಸಿಕ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಇದು ದೇವರ ಹೆಸರಲ್ಲಿ ಇಬ್ಬರು ನಾಯಕರು ಚುನಾವಣಾ ಪ್ರಕ್ರಿಯೆ ಶುರುವಿಟ್ಟಿದ್ದಾರೆ ಎಂಬ ಗುಸುಗುಸು ಶುರುವಾಗಿದೆ.

Advertisement

ಏಸು ಹೆಸರಲ್ಲಿ ರಾಜಕೀಯ ಗಾಳ: ಇನ್ನು ಡಿ,ಕೆ. ಬ್ರದರ್ ಕೂಡ ಹೊರತಾಗಿಲ್ಲ ಎನ್ನುವಂತೆ ಅವರು ಸದ್ದಿಲ್ಲದೆ ಸರ್ವಧರ್ಮದ ಪಾಲಕರೆಂಬಂತೆ ಏಸು ಪ್ರತಿಮೆ ವಿವಾದದ ಸ್ಥಳದಲ್ಲಿ ಸ್ವತಃ ಆಸಕ್ತಿವಹಿಸಿ ಅತಿ ದೊಡ್ಡ ಏಸು ವಿಗ್ರಹ ಸ್ಥಾಪನೆಗೆ ಮುಂದಾಗಿದ್ದುದು ಇದೀಗ ಸ್ವಲ್ಪ ಹಳೆಯದಾದರು ದೇವರ ಹೆಸರಲ್ಲಿ ರಾಜಕೀಯದ ಗಾಳ ಬೀಸುವಲ್ಲಿ ಅವರು ಪ್ರಥಮಿಗರಾಗಿದ್ದರು. ಇದು ರಾಜಕೀಯ ವಿಶ್ಲೇಷಕರ ಬಾಯಲ್ಲಿ ಸದ್ದು ಮಾಡಲಾರಂಭಿಸಿದ್ದು, ಮೂವರು ಕೂಡ ದೇವರನ್ನೇ ನಂಬಿ ಚುನಾವಣೆಯೆಂಬ ರಣಕಣಕ್ಕೆ ಜಿಗಿಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮತದಾರರನ್ನು ಸೆಳೆಯುವ ರಣತಂತ್ರ: ಮಾಗಡಿ ಕ್ಷೇತ್ರದಲ್ಲಿ ಶಾಸಕ ಮಂಜುನಾಥ್‌ ಹಾಗೂ ಬಾಲಕೃಷ್ಣ ಕೂಡ ಹೊರತಾಗಿಲ್ಲ. ಹತ್ತಾರು ಧಾರ್ಮಿಕ ಕಾರ್ಯ ಕ್ರಮ ಆಯೋಜಿಸುವ ಮೂಲಕ ಮತದಾರರನ್ನು ಸೆಳೆಯುವ ರಣತಂತ್ರ ಆರಂಭಿಸಿದ್ದಾರೆ ಎಂದರೂ ತಪ್ಪಲ್ಲ. ಅದೇನೆ ಇರಲಿ, ಜಿಲ್ಲೆಯ ರಾಜಕಾರಣಕ್ಕೆ ಕೇಂದ್ರಬಿಂದುವಾಗಿ ದೇವರನ್ನು ಹಿಡಿದುಕೊಂಡು ತಮ್ಮ ಅಸ್ತಿತ್ವ ಕಂಡುಕೊಳ್ಳುವ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ ಎಂದರೆ ತಪ್ಪಲ್ಲ.

ದೇವಾಲಯ, ಮಸೀದಿಗೆ ದೇಣಿಗೆ : ರಾಮನಗರ ಕ್ಷೇತ್ರದ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಕೂಡ ಮಂದಿರ, ಮಸೀದಿಗಳಿಗೆ ಲೆಕ್ಕಕ್ಕಿಲ್ಲ ಎನ್ನುವಂತೆ ಹಣ ನೀಡುತ್ತಿದ್ದಾರೆ. ಯಾವುದೇ ದೇವಾಲಯ, ಮಸೀದಿ ಕಟ್ಟಿದರೂ ಇವರಿಂದ ದೇಣಿಗೆ ಉದಾರವಾಗಿ ಹರಿಯುತ್ತದೆ. ಅವರ ಮಾತಿನ ಪ್ರಕಾರವೇ ಚುನಾವಣೆಗೆ ದೇವರನ್ನೇ ನಂಬಿ ನಿಂತಿದ್ದೇವೆ. ಚುನಾವಣೆ ಹಿತದೃಷ್ಟಿಯಿಂದಲೇ ದೇವರ ಕಾರ್ಯಕ್ರಮಗಳಿಗೆ ತಪ್ಪದೆ ಹಾಜರಿ ಮತ್ತು ಸೇವೆಗೆ ಸಿದ್ಧವಿರುವುದಾಗಿ ಹೇಳುತ್ತಾರೆ. ಇನ್ನು ಕ್ಷೆತ್ರದಲ್ಲಿ ಬಿಜೆಪಿಗರೂ ಕೂಡ ಕಡಿಮೆಯೇ ನಿಲ್ಲ ಎನ್ನುವಂತೆ ಗಣಪತಿ ವಿಗ್ರಹಗಳ ವಿತರಣೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ತಲ್ಲೀನರಾಗಿದ್ದಾರೆ.

ಧಾರ್ಮಿಕ ಕ್ಷೇತ್ರಗಳಲ್ಲಿ ಕಾರ್ಯಕ್ರಮ ಆಯೋಜನೆ: ತಿರುಪತಿ ತಿಮ್ಮಪ್ಪನ ಹೆಸರಲ್ಲಿ ಎಚ್‌ಡಿಕೆ, ರಾಮನ ಹೆಸರಲ್ಲಿ ಬಿಜೆಪಿ ಸಿಪಿವೈ ಧಾರ್ಮಿಕ ಕಾರ್ಯ ಕ್ರಮ ಹಮ್ಮಿಕೊಂಡಿದ್ದರೆ, ಸದ್ದಿಲ್ಲದೆ ಡಿ.ಕೆ. ಬ್ರದರ್ ಕೂಡ ಧಾರ್ಮಿಕ ಕ್ಷೇತ್ರಗಳಲ್ಲಿ ಕಾರ್ಯಕ್ರಮ ಆಯೋಜನೆ ಹಾಗೂ ಏಸು ಪ್ರತಿಮೆಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರ ನೀಡುವ ಮೂಲಕ ಜಿಲ್ಲೆಯಲ್ಲಿ ದೇವರ ಹೆಸರಲ್ಲಿ ರಾಜಕಾರಣ ರಂಗೇರುವಂತೆ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

ದೇವರನ್ನ ನಂಬಿದ್ರೆ ನಮ್ಮದೇನೂ ತಕರಾರಿಲ್ಲ. ಆದ್ರೆ, ಕಾಯಕವೇ ಕೈಲಾಸ ಎಂದು ಕ್ಷೇತ್ರದಲ್ಲಿ ಜನಸಾಮಾನ್ಯರ ಕೆಲಸ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಮಾಡಬೇಕು. ಅಲ್ಲದೆ, ರೈತರ ಸಂಕಷ್ಟ ಗಳಿಗೆ ಸ್ಪಂದಿಸುವ ಮೂಲಕ ಅವರ ಸಮಸ್ಯೆ ನಿವಾರಿಸ ಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಸೃಸ್ಟಿಸಿ ಮತದಾರ ದೇವರ ಬಳಿ ವರ ಪಡೆಯಬೇಕೆ ವಿನಃ ಧಾರ್ಮಿಕ ಕಾರ್ಯ ಕ್ರಮಗಳಿಂದ ಎಷ್ಟು ಸರಿ? ಇನ್ನಾದರೂ ಎಲ್ಲರೂ ಇಚ್ಛಾಶಕ್ತಿಯಿಂದ ಜನರ ಸೇವೆ ಮಾಡಲಿ. – ಶಿವನಾಗ ಸ್ವಾಮಿ, ಸಾಮಾಜಿಕ ಹೋರಾಟಗಾರ

– ಎಂ.ಎಚ್‌. ಪ್ರಕಾಶ, ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next