ಬೆಂಗಳೂರು: ಅಲ್ಲಿ ಚಿತ್ರಗಳು ಮಾತಾಡುತ್ತಿವೆ. ಕಲ್ಪನೆಯ ನೂರಾರು ಕಥೆ ಹೇಳುತ್ತಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಡಿ ಕುಮಾರ ಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಘಟಾನುಘಟಿ ರಾಜಕೀಯ ಮುತ್ಸದ್ದಿಗಳ ಬದುಕಿನ ಅನುಪಮ ಕ್ಷಣಗಳನ್ನು ಭಿನ್ನ ನೋಟದಲ್ಲಿ ನೋಡುಗರಿಗೆ ಕಟ್ಟಿಕೊಟ್ಟಿವೆ.
ಒಂದೊಂದು ಫೋಟೋ ಒಂದೊಂದು ರೀತಿ ಕಥೆಯನ್ನು ಕಣ್ಮುಂದೆ ತೆರೆದಿಡಲಿದ್ದು ರಾಜಕೀಯ ನಾಯಕರ ಉಟೋಪಚಾರ, ಹೋರಾಟ, ಚರ್ಚೆ, ಹಾಸ್ಯ ಸೇರಿ ಹಲವು ವಿಷಯಗಳನ್ನು ಚಿತ್ರಗಳೇ ವಿವರಿಸುತ್ತಿವೆ. ಫೋಟೋ ಜರ್ನಲಿಸ್ಟ್ ಅಸೋಸಿಯೋಷನ್ ಆಫ್ ಬೆಂಗಳೂರು, ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಂಡಿದ್ದು, ಉಪಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವತ್ಥನಾರಾಯಣ ಮತ್ತು ಚಿತ್ರನಟಿ ರಾಗಿಣಿ ದ್ವಿವೇದಿ ಗುರುವಾರ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಸದನದಲ್ಲಿ ಸ್ಪೀಕರ್ ಆಸನದ ಮುಂದೆ ಏಕಾಂಗಿಯಾಗಿ ಧರಣಿ ಕುಳಿತಿರುವುದು, ಮಾಜಿ ಸಿಎಂ ಸಿದ್ದರಾಮಯ್ಯ ಗಾಳಿಯಲ್ಲಿ ತೇಲಿ ಹೋಗುತ್ತಿರುವ ತಮ್ಮ ಟವೆಲ್ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಚಿತ್ರಗಳು ಗಮನಸೆಳೆಯುತ್ತಿವೆ. ಛಾಯಾಚಿತ್ರ ವೀಕ್ಷಿಸುವ ವೇಳೆ ಸಿದ್ದರಾಮಯ್ಯ ಅವರ ಫೋಟೋ ನೋಡಿ ಚಿತ್ರನಟಿ ರಾಗಿಣಿ ದ್ವಿವೇದಿ ಬೆರಗಾದರು.
ಈ ಫೋಟೋ ಎಲ್ಲಿ ತೆಗೆದಿದ್ದು, ಯಾರು ತೆಗೆದಿದ್ದು ಎಂದು ಆ ಫೋಟೋ ನೋಡುತ್ತಲೆ ಹಿರಿಯ ಛಾಯಾಗ್ರಹಕರೊಬ್ಬರಿಂದ ಸನ್ನಿವೇಶದ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಉಪಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವತ್ಥನಾರಾಯಣ ಮಾತನಾಡಿ, ಚಿಂತನೆಗೆ ಪೂರಕವಾಗಿರುವ ಫೋಟೋಗಳು ಇಲ್ಲಿವೆ.
ಹಳೆಯ ಕಥೆಗಳನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸುತ್ತವೆ. ಇದೊಂದು ಅಪರೂಪದ ಛಾಯಾಚಿತ್ರ ಪ್ರದರ್ಶನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಕಮಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 150 ಪತ್ರಿಕಾ ಛಾಯಾಗ್ರಹಕರ ಫೋಟೋಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ.