ನ್ಯೂಯಾರ್ಕ್: ಜಗತ್ತಿನ ಯಾವ ಭಾಗದಲ್ಲಿಯೇ ಉಗ್ರರ ದಾಳಿ ನಡೆಯಲಿ ಅದನ್ನು ಭಯೋತ್ಪಾದಕ ಕೃತ್ಯ ಎಂದೇ ಪರಿಗಣಿಸಲಾಗುತ್ತದೆ ವಿನಃ ಅದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ವರ್ಗೀಕರಣ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಶ್ವಸಂಸ್ಥೆಯ 74ನೇ ಮಹಾ ಅಧಿವೇಶನಕ್ಕೂ ಮುನ್ನ ಸೋಮವಾರ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ವಿಶ್ವದ ಗಣ್ಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು “ಭಯೋತ್ಪಾದಕರು ಮತ್ತು ಹಿಂಸಾತ್ಮಕ ಉಗ್ರಗಾಮಿತ್ವದ ವಿಷಯದ ಕುರಿತು ಮಾತನಾಡಿದರು.
ಭಯೋತ್ಪಾದನ ನಿಗ್ರಹಕ್ಕೆ ಸಂಬಂಧಿಸಿದಂತೆ ಹಲವಾರು ಹಂತಗಳಲ್ಲಿ ಸಹಕಾರದ ಅಗತ್ಯವಿರುತ್ತದೆ. ಆ ನಿಟ್ಟಿನಲ್ಲಿ ಭಾರತ ಉಗ್ರರನ್ನು ಸದೆಬಡಿಯುವಲ್ಲಿ ಸ್ನೇಹಪರ ದೇಶಗಳ ಜತೆ ಕೈಜೋಡಿಸುವ ಮೂಲಕ ಸಹಕಾರ ನೀಡಿರುವುದಾಗಿ ಹೇಳಿದರು.
ಅಲ್ಲದೇ ಜಾಗತಿಕ ಉಗ್ರ ಎಂಬ ಪಟ್ಟ ನೀಡುವ ವಿಷಯದಲ್ಲಿ ತಾಂತ್ರಿಕ ಕಾರಣದ ನೆಪವೊಡ್ಡಿ ರಾಜಕೀಯಗೊಳಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಹೇಳುವ ಮೂಲಕ ಮೋದಿ ಚೀನಾಕ್ಕೆ ಪರೋಕ್ಷವಾಗಿ ಚಾಟಿ ಬೀಸಿದರು.
ಜೈಶ್ ವರಿಷ್ಠ ಅಜರ್ ಮಸೂದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಚೀನಾ ಹಲವಾರು ಬಾರಿ ವಿರೋಧಿಸಿತ್ತು. ಕೊನೆಗೆ ಅಂತಾರಾಷ್ಟ್ರೀಯ ಸಮುದಾಯದ ಒತ್ತಡದ ಬಳಿಕ ಚೀನಾ ತನ್ನ ನಿಲುವು ಬದಲಾಯಿಸಿ ಮಸೂದ್ ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ವಿಶ್ವಸಂಸ್ಥೆ ಉಗ್ರನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿವುದು ಮತ್ತು ಎಫ್ ಎಟಿಎಫ್(ಫೈನಾಶ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್) ಹಣಕಾಸು ವಿಚಾರದಲ್ಲಿ ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ರಾಜಕೀಯ ಮಾಡದಂತೆ ಒತ್ತಾಯ ಹೇರಬೇಕಾದ ಅಗತ್ಯವಿದೆ ಎಂದು ಮೋದಿ ಹೇಳಿದರು.