Advertisement

ಮಠಾಧೀಶರ ವಿರುದ್ದ ಹಗುರವಾಗಿ ಮಾತನಾಡಿದರೆ ಉಗ್ರ ಹೋರಾಟ

02:53 PM Apr 28, 2022 | Team Udayavani |

ನರಗುಂದ: ಯಾವುದೇ ರಾಜಕಾರಣಿಗಳು ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡಿದರೆ ವ್ಯವಸ್ಥಿತ ಹೋರಾಟ ಮಾಡಬೇಕಾಗುತ್ತದೆ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬಂದಿರುವುದು ನಮ್ಮ ಹೆಗ್ಗಳಿಕೆ. ಮಠದ ಭಕ್ತರ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುತ್ತದೆ ಎಂದು ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.

Advertisement

ಬುಧವಾರ ನರಗುಂದ ಸಚಿವರ ಮನೆ ಮುಂದೆ ಧರಣಿ ನಡೆಸಲು ಆಗಮಿಸಿದ್ದ ಶ್ರೀಗಳನ್ನು ತಾಲೂಕಿನ ಸರಹದ್ದು ಬಳಿ ಪೊಲೀಸರು ತಡೆದು ನಿಲ್ಲಿಸಿದ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ ಪಕ್ಕದ ರೈತರೊಬ್ಬರ ಜಮೀನೊಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಶ್ರೀಗಳು ಮಾತನಾಡಿದರು.

ಸಚಿವ ಸಿ.ಸಿ. ಪಾಟೀಲ ಅವರು ವಿಧಾನಸೌಧದಲ್ಲಿ ಕುಳಿತ ನಮ್ಮ ತೇಜೋವಧೆ ಸುದ್ದಿಗೋಷ್ಠಿ ನಡೆಸಿದ್ದರು. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ನಾನು ಮಾತನಾಡಿದ್ದೆ. ಅದನ್ನು ಚರ್ಚೆಗೆ ಒಳಪಡಿಸಬೇಕಿತ್ತು. ನಮ್ಮ ಮಾತಿನ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ನಮ್ಮ ಬಗ್ಗೆ ಅವರು ಚರ್ಚೆ ಮಾಡಿದ್ದರಿಂದ ರೋಷ, ಹಠ ಮರೆತು ನ್ಯಾಯ ಕೇಳಲು ಬಂದಿದ್ದೆ. ಆದರೆ ಪೊಲೀಸರ ವಿನಂತಿ ಮೇರೆಗೆ ಇಲ್ಲಿಂದ ಮರಳಿ ನಿರ್ಗಮಿಸುತ್ತಿದ್ದೇವೆ ಎಂದು ಶ್ರೀಗಳು ಹೇಳಿದರು.

ಯಾವುದೇ ಸಚಿವರು ಅರಿತು ಮಾತನಾಡಬೇಕು. ಮಠಾಧೀಶರ ಜೊತೆ ಸದಾಕಾಲ ಸಂಪರ್ಕದಲ್ಲಿರುವ ಸಂಘ ಪರಿವಾರದವರು ಸಚಿವರ ಕಿವಿ ಹಿಂಡುವ ಕೆಲಸ ಮಾಡಬೇಕು. ಮುಖ್ಯಮಂತ್ರಿಗಳು ಬುದ್ಧಿ ಹೇಳಬೇಕು. ಯಾವುದೇ ಸಚಿವರು ಹೇಳಿಕೆ ನೀಡುವಾಗ ಅದನ್ನು ನಿಯಂತ್ರಿಸುವ ಕೆಲಸ ಮಾಡಬೇಕು ಎಂದು ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.

ಸಭೆ ಬಳಿಕ ಹೋರಾಟ: ಮುಖ್ಯಮಂತ್ರಿಗಳೇ ಈ ಹೋರಾಟ ನಿಲ್ಲುವುದಿಲ್ಲ. ಇನ್ನು ಮುಂದುವರೆಯುತ್ತದೆ. ಇಂದಿಗೆ ಪ್ರಾರಂಭಗೊಂಡಿದೆ. ಭಾವೈಕ್ಯತೆ ದಿನ ಘೋಷಣೆ ವಿರುದ್ಧ ನಮ್ಮ ಹೋರಾಟವಿದೆ. ಶೀಘ್ರದಲ್ಲಿ ಮಠದ ಭಕ್ತರ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸುತ್ತೇವೆ ಎಂದು ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು. ಶ್ರೀಗಳೊಂದಿಗೆ ಉಗರಗೋಳ, ಮಂಟೂರ, ಹೊಸೂರ, ದೊಡ್ಡವಾಡ, ಕುಂಟೋಜಿ, ಮಸವಿನಾಳ, ಜಮಖಂಡಿ, ಸಾರವಾಡ, ನರೇಂದ್ರ, ಹನಮನಳ್ಳಿ ಮುಂತಾದ ಶ್ರೀಗಳು, ಭಕ್ತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next