ಮಂಗಳೂರು: ಅನ್ಯ ಹುದ್ದೆಗಳಿಗೆ ಹೋಲಿಸಿದರೆ ರಾಜಕಾರಣಿಗಳಿಗೆ ಪ್ರತ್ಯೇಕ ತರಬೇತಿ ನೀಡಬೇಕಾದ ಅಗತ್ಯವಿದೆ ಎಂದು ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ರವಿವಾರ ಮಂಗಳೂರಿನ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರ ಮಟ್ಟದ ರೋವರ್ಸ್ -ರೇಂಜರ್ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ವೈದ್ಯರು, ವಕೀಲರು, ಎಂಜಿನಿಯರ್, ಶಿಕ್ಷಕರು ಸೇರಿದಂತೆ ವಿವಿಧ ಕ್ಷೇತ್ರಗಳ ವೃತ್ತಿಪರರಿಗೆ ಸೂಕ್ತವಾದ ಶಿಕ್ಷಣ-ತರಬೇತಿ ಇದೆ. ಆದರೆ ರಾಜಕಾರಣಿಗಳಿಗೆ ಯಾವುದೇ ಶಿಕ್ಷಣ, ತರಬೇತಿ ಇಲ್ಲ. ಸ್ಕೌಟ್ ಮತ್ತು ಗೈಡ್ಸ್‌ನಲ್ಲಿ ನೀಡುವಂತಹ ತರಬೇತಿಯನ್ನು ರಾಜಕಾರಣಿಗಳಿಗೂ ನೀಡುವ ಅಗತ್ಯವಿದೆ ಎಂದರು.
ಸಮಾಜದಲ್ಲಿ ಅನಕ್ಷರಸ್ಥರಿಂದ ಹೆಚ್ಚಾಗಿ ಅಕ್ಷರಸ್ಥರಿಂದಲೇ ಭ್ರಷ್ಟಾಚಾರ ನಡೆಯುತ್ತಿದೆ. ನಾನು ಕೂಡ ಸ್ಕೌಟ್ ವಿದ್ಯಾರ್ಥಿ, ರಾಷ್ಟ್ರ ಮಟ್ಟದ ಶಿಬಿರಗಳಲ್ಲಿ ಪಾಲ್ಗೊಂಡಿದ್ದೇನೆ. ಪ್ರತೀ ಗ್ರಾಮದಲ್ಲೂ ಸ್ಕೌಟ್ ಘಟಕ ತೆರೆಯಬೇಕು. ಸರಕಾರಿ ಶಾಲೆಗಳಲ್ಲಿ ಮುಂದಾಳತ್ವವನ್ನು ವಹಿಸಿ ಅಲ್ಲಿನ ಮಕ್ಕಳಿಗೆ ತರಬೇತಿ ನೀಡಬೇಕು ಎಂದರು. ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ, ಜೀವನದಲ್ಲಿ ಚಿಕ್ಕ ಪುಟ್ಟ ಸಂಗತಿಗಳು ಕೂಡ ಮಹತ್ವ ಪಡೆಯುತ್ತವೆ. ಸ್ಕೌಟ್-ಗೈಡ್ಸ್, ರೋವರ್-ರೇಂಜರ್ ಸಾಂಘಿಕವಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಬದಲಾವಣೆ ತರಬಹುದು ಎಂದರು.
ಕಷ್ಟಕ್ಕೆ ಸ್ಪಂದಿಸೋಣ
ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ಫಾ| ಡೈನೇಶಿಯಸ್ ವಾಸ್ ಮಾತನಾಡಿ, ನಾವು ಸಮಾಜದಲ್ಲಿ ಬೆಂಕಿಯನ್ನು ಹಚ್ಚುವ ಕೆಲಸ ಮಾಡದೆ ನಂದಿಸುವ ಕೆಲಸ ಮಾಡಬೇಕು. ಬೇರೆಯವರ ಕಷ್ಟಕ್ಕೆ ಸ್ಪಂದಿಸಬೇಕು. ಜೀವನದಲ್ಲಿ ಎಂದಿಗೂ ಕುತೂಹಲವನ್ನು ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಡಿ ರೋವರ್ಸ್ ಮತ್ತು ರೇಂಜರ್ ರಾಷ್ಟ್ರೀಯ ಸಮಾವೇಶ ಡಿ. 27ರಂದು ಆರಂಭಗೊಂಡಿದ್ದು, ಜ. 1ರ ವರೆಗೆ ನಡೆಯಲಿದೆ, 14 ರಾಜ್ಯಗಳ 739 ರೋವರ್ಸ್ ಮತ್ತು ರೇಂಜರ್ ಆಗಮಿಸಿದ್ದಾರೆ. ವೇದಿಕೆಯಲ್ಲಿ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಜಿಲ್ಲಾ ಆಯುಕ್ತ ಡಾ| ಎನ್.ಜಿ. ಮೋಹನ್, ಸಂಚಾಲಕ ಎಂ.ಎ. ಚೆಳ್ಳಯ್ಯ, ರಾಜ್ಯ ಉಪಾಧ್ಯಕ್ಷ ಕೆ.ಬಿ. ಷಣ್ಮುಖಪ್ಪ, ಜಿಲ್ಲಾ ಕಾರ್ಯದರ್ಶಿ ಯು. ಗೋಪಾಲಕೃಷ್ಣ ಭಟ್, ಶಾಂತಾ ವಿ. ಆಚಾರ್ಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.