ಮುಂಡಗೋಡ: ನಮ್ಮ ಜೀವನಮಾನದ 30 ವರ್ಷದಲ್ಲಿ ಇಷ್ಟೊಂದು ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ಪಟ್ಟಾಭಿಷೇಕ ನೆರವೇರಿಸಿದ ಯಾವುದೇ ಮಠ ಇರಲಿಲ್ಲ. ಆದರೆ ಇದು ದುರ್ದೈವದ ಸಂಗತಿ. ಇಂದಿನ ದಿನದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿಯೂ ರಾಜಕೀಯ ಎಂಬ ಕೆಟ್ಟ ಸುಳಿಗಾಳಿ ಬೀಸುವಂತಹುದು ಯಾವುದೇ ಕಾರಣಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ. ಧರ್ಮದಲ್ಲಿ ರಾಜಕೀಯ ಸಲ್ಲದು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯರು ನುಡಿದರು.
ತಾಲೂಕಿನ ಹನುಮಾಪುರ ಕಾಳಿಕಾದೇವಿ ಮಂದಿರದ ಡಾ| ಸೋಮಶೇಖರ ದೇವರ ಗುರು ಪಟ್ಟಾಧಿಕಾರ ನೆರವೇರಿಸಿ, ಕಾರ್ಯಕ್ರಮ ಉದ್ಘಾಟಿಸಿ ಮತ್ತು ಸಾನ್ನಿಧ್ಯ ವಹಿಸಿ ಗುರುವಾರ ಅವರು ಆಶೀರ್ವಚನ ನೀಡಿದರು.
ತಾಲೂಕಿನ ಮತ್ತು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಶ್ರಮ ಪಟ್ಟು ಕರ್ತವ್ಯ ನಿರ್ವಹಿಸಿದ್ದಾರೆ. ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಧರ್ಮ ಮರೆತಿದ್ದಾರೆ. ಧರ್ಮ ಆಚರಣೆಯಿಂದ ಮನಸ್ಸಿಗೆ ಶಾಂತಿ ಮತ್ತು ಆಯುರಾರೋಗ್ಯ ದೊರಕುತ್ತದೆ. ಈ ತಾಲೂಕಿನಲ್ಲಿ ಸಸ್ಯ ಶ್ಯಾಮಲೆ ಸುಂದರವಾಗಿದೆ. ಮಠಕ್ಕಾಗಿ ಲಿಂ| ಶ್ರೀಗಳ ಸಾಧನೆ ದೊಡ್ಡದು. ಶ್ರೀ ಕಾಳಿಕಾದೇವಿ ಮಠದ ದುಡ್ಡು ಮತ್ತು ಒಡವೆಗಳು ನಮ್ಮ ಸ್ವಾಧೀನದಲ್ಲಿ ಸುರಕ್ಷಿತವಾಗಿವೆ. ಯಾರೂ ಕಳ್ಳತನ ಮಾಡಿಲ್ಲ.
ಮುಂದಿನ ಉತ್ತರಾಧಿಕಾರಿ ಬಗ್ಗೆ ಮಠದ ಸಂಸ್ಥಾಪಕ ಲಿಂ| ಸದಾನಂದ ಶಿವಾಚಾರ್ಯರು ಲಿಖೀತವಾಗಿ ಬರೆದು ಇಟ್ಟಿರಲಿಲ್ಲ. ಅಕಾಲಿಕವಾಗಿ ಲಿಂಗೈಕ್ಯರಾದ ವೇಳೆ ಭಕ್ತಾದಿಗಳು ಮತ್ತು ಗ್ರಾಮಸ್ಥರು ಸೇರಿ ಸೋಮಶೇಖರ ದೇವರ ಶ್ರೀಗಳಿಗೆ ಲಿಂಗೈಕ್ಯ ಸದಾನಂದ ಶಿವಾಚಾರ್ಯರು ಪೀಠ ಮತ್ತು ಕೊರಳಿನಲ್ಲಿದ್ದ ಸರವನ್ನು ಹಾಕಿ ನಂತರ ಮಠದ ಜವಾಬ್ದಾರಿಯನ್ನು ಸೋಮಶೇಖರ ದೇವರಿಗೆ ವಹಿಸಿದ್ದರು. ನಂತರ ಸೋಮಶೇಖರ ದೇವರ ಶ್ರೀಗಳನ್ನು ಮುಂದಿನ ಶ್ರೀ ಕಾಳಿಕಾದೇವಿ ಮಂದಿರದ ಉತ್ತರಾಧಿಕಾರಿ ಮಾಡುವಂತೆ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಬಂದು ತಿಳಿಸಿದ್ದರು. ಆದರೆ ಮುಂದಿನ ದಿನದಲ್ಲಿ ಕೆಲವು ಘಟಕಗಳು ನಡೆದವು.
ನಿಗದಿಪಡಿಸಿದ ದಿನಾಂಕದಂತೆ ಧಾರ್ಮಿಕ ವಿಧಿ-ವಿಧಾನಗಳಂತೆ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಯವರ ಪಟ್ಟಾಭಿಷೇಕ ನೆರವೇರಿಸಿದ್ದೇವೆ. ಇವರು ಲಿಂಗೈಕ್ಯ ಶ್ರೀಗಳ ಸೇವೆಯನ್ನು ಮಾಡುತ್ತಾ ಬಂದಿದ್ದರು. ಸುವರ್ಣಾಕ್ಷರದಲ್ಲಿ ಬರೆದು ಇಡುವ ದಿನವಿದು. ವಾಸ್ತವ ಸಂಗತಿ ತಿಳಿದಾಗ ಆರೋಪ ಮಾಡಿದವರೂ ಮಠದ ಭಕ್ತರಾಗುತ್ತಾರೆ ಎಂದರು.
ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡಿ, ಗುರುವಿನ ಹಸ್ತ-ಮಸ್ತಕ ಸಂಯೋಗದಿಂದ ಒಂದು ಮಠಕ್ಕೆ ಗುರುವಾಗಿ ಪಟ್ಟಾಭಿಷೇಕ ಮಾಡಲಾಗುತ್ತದೆ. ಬಹಳಷ್ಟು ಕಷ್ಟಪಟ್ಟು ಸದಾನಂದ ಶಿವಾಚಾರ್ಯರು ಮಠವನ್ನು ಕಟ್ಟಿ ಬೆಳೆಸಿದ್ದಾರೆ. ಸ್ವಾಮಿಗಳ ಜೀವನ ಮುಳ್ಳಿನ ಹಾಸಿಗೆ ಇದ್ದಂತೆ. ಮುಗ್ಧ ಸೋಮಶೇಖರ ಶಿವಾಚಾರ್ಯರನ್ನು ನಿಮ್ಮ ಮಕ್ಕಳಂತೆ ರಕ್ಷಣೆ ಮಾಡಬೇಕು. ರಂಭಾಪುರಿ ಶ್ರೀಗಳ ದರ್ಶನ ಬಲು ಅಪರೂಪ. ನೀವೆಲ್ಲ ಧನ್ಯರು ಎಂದರು.
ಪಟ್ಟಾಧಿಕಾರ ವಹಿಸಿಕೊಂಡ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಪೂಜ್ಯರ ಆದೇಶದಂತೆ, ಅಪ್ಪಣೆಯಂತೆ ಮಠವನ್ನು ನಡೆಸಿಕೊಂಡು ಹೋಗುತ್ತೇನೆ ಎಂದರು. ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿ ಸಾಕಷ್ಟು ಊಹಾಪೋಹಗಳಿದ್ದರೂ ಕಾನೂನು ಚೌಕಟ್ಟಿನಲ್ಲಿ ಪಟ್ಟಾಭಿಷೇಕ ಮಾಡಲಾಗಿದೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಮಠದ ಆಸ್ತಿಯನ್ನು ರಕ್ಷಣೆ ಮಾಡಿ ಅದನ್ನು ದ್ವಿಗುಣಗೊಳಿಸೋಣ. ಧರ್ಮ ಮತ್ತು ಪುಣ್ಯದಿಂದ ಕೊರೊನಾ ಓಡಿಸೋಣ. ನಮ್ಮ ಜೀವನ ಪಾವನಗೊಳಿಸೋಣ ಎಂದರು.
ಅಭಿನವ ರಾಚೋಟಿ ಶಿವಾಚಾರ್ಯರು, ಜಯ ಸಿದ್ದೇಶ್ವರ ಶಿವಾಚಾರ್ಯರು, ವಿಮಲ ರೇಣುಕ ವೀರ ಮುಕ್ತಿಮನಿ ಶಿವಾಚಾರ್ಯರು, ಡಾ| ನಾಗಭೂಷಣ ಶಿವಾಚಾರ್ಯರು, ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು, ಶಂಭುಲಿಂಗ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಶಿವಬಸವ ಮಹಾಸ್ವಾಮಿಗಳು, ಚನ್ನಬಸವ ಶಿವಾಚಾರ್ಯರು, ಸಂಗನಬಸವ ಶಿವಾಚಾರ್ಯರು, ಸಿದ್ದರಾಮ ದೇವರು, ಪಿ.ಎಸ್. ಸಂಗೂರಮಠ, ಎಚ್.ಎಂ. ನಾಯ್ಕ,
ಬಾಬು ಗೌಡ್ರು, ಅರಳಿಕಟ್ಟಿ, ಕೃಷ್ಣ ಹಿರೇಹಳ್ಳಿ, ಜಯಮ್ಮ ಹಿರೇಹಳ್ಳಿ, ಗ್ರಾಮದ ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರು ಇದ್ದರು.