ಚಿಂಚೋಳಿ: “ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನಾನು ರಾಜಕೀಯ ಕ್ಷೇತ್ರದಿಂದಲೇ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಜಯಶಾಲಿಯಾದರೆ ಡಾ| ಶರಣ ಪ್ರಕಾಶ ಪಾಟೀಲ ರಾಜಕಿಯದಿಂದ ನಿವೃತ್ತಿ ಹೊಂದಬೇಕು’ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾಜಿ ಸಚಿವ ಡಾ| ಶರಣ ಪ್ರಕಾಶ ಪಾಟೀಲಗೆ ಸವಾಲು ಹಾಕಿದ್ದಾರೆ.
ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಯಾದಗಿರಿ-ಕಲಬುರಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಹೆಚ್ಚು ಮತಗಳ ಅಂತರದಿಂದ ಬಿ.ಜಿ. ಪಾಟೀಲ ಗೆಲವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ ಪಂಚಾಯಿತಿ ವ್ಯವಸ್ಥೆ ಬಗ್ಗೆ ಅರಿತವರು ಹಾಗೂ ಗುಣವಂತರು ಆಗಿದ್ದಾರೆ. ದಾನ-ಧರ್ಮ ಮಾಡುವ ಮನೆತನದವರಾಗಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷದವರು ಬಿ.ಜಿ. ಪಾಟೀಲರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಮಿಕ್ರಾನ್ ವೈರಸ್ ದೇಶದಲ್ಲಿ ಬರಲು ನರೇಂದ್ರ ಮೋದಿ ಅವರೇ ಹೊಣೆಗಾರರು ಎಂದು ಡಾ| ಶರಣಪ್ರಕಾಶ ಪಾಟೀಲ ಹೇಳಿಕೆ ಖಂಡನಿಯವಾಗಿದೆ. ಈ ತರಹದ ಹೇಳಿಕೆ ನಿಲ್ಲಿಸಬೇಕು ಎಂದು ಹೇಳಿದರು.
ಅತೀಷ ಪವಾರ್, ಮಹೇಶ ಬೆಳಮಗಿ, ಶಿವಲಿಂಗಯ್ಯ ಶಾಸ್ತ್ರೀ, ನಾಗುರಾವ್ ಬಸೂದೆ, ಮಲ್ಲಿಕಾರ್ಜುನ ಪಾಳೆದ, ಸುಭಾಷ ಪಾಟೀಲ, ರುದ್ರಶೆಟ್ಟಿ ನಿಂಗದಳ್ಳಿ, ವಿಜಯಕುಮಾರ ಮೇದರ್, ರುದ್ರಮುನಿ ರಾಮತೀರ್ಥಕರ್, ಶರಣಬಸಪ್ಪ ಸೊಂತ, ಶರೀಫಮಿಯಾ ಕೋಹಿರ್ ಇನ್ನಿತರರು ಇದ್ದರು.