ಮೈಸೂರು: ಸಮುದಾಯ ಬೆಳೆಯಬೇಕಾದರೆ ರಾಜಕೀಯ ಶಕ್ತಿ ಇರಬೇಕು. ರಾಜಕೀಯ ಶಕ್ತಿ ಇಲ್ಲದಿದ್ದರೆ ಮನ್ನಣೆ ಇರುವುದಿಲ್ಲ. ಯಾವುದೇ ಒಡಕು ಉಂಟಾಗದಂತೆ ಒಗ್ಗಟ್ಟಿನಿಂದ ಇರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಕಾಗಿನೆಲೆ ಕನಕ ಗುರುಪೀಠದಿಂದ ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ನಿರ್ಮಿಸಿರುವ ಕನಕ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.
1992ರಲ್ಲಿ ಸಮುದಾಯದ ಸಂಘಟನೆಯ ಉದ್ದೇಶದಿಂದ ಕಾಗಿನೆಲೆ ಕನಕ ಗುರುಪೀಠ ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಹೋದಾಗ 25 ಲಕ್ಷ ರೂ. ನೀಡಲು ಮುಂದೆ ಬಂದರು.
ಅಲ್ಲದೇ ಉದ್ಯಮಿ ಹರಿಖೋಡೆ ಊಟದ ಖರ್ಚು ನೀಡುವುದಾಗಿ ತಿಳಿಸಿದರು. ಆದರೆ, ನಮ್ಮ ಸಮುದಾಯವೇ ಸ್ವಾಭಿಮಾನದಿಂದ ಸಂಗ್ರಹಿಸಿ ನೀಡಿದ 60 ರಿಂದ 70 ಲಕ್ಷ ರೂ. ಇದ್ದುದ್ದರಿಂದ ಯಾರಿಂದಲೂ ಹಣ ಪಡೆಯಲಿಲ್ಲ. ಕಾರ್ಯಕ್ರಮ ಮಾಡಿ ಉಳಿದ 40 ಲಕ್ಷ ರೂ. ಹಣದಿಂದ ಮಠ ಕಟ್ಟಲಾಯಿತು ಎಂದರು.
ಬಾದಾಮಿಯಲ್ಲಿ ಸಾಮೂಹಿಕ ವಿವಾಹ: ಬಡವರು ಮಕ್ಕಳ ಮದುವೆ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ನನ್ನನ್ನು ಗೆಲ್ಲಿಸಿರುವ ಬಾದಾಮಿಯಲ್ಲಿ ಮುಂದಿನ ವರ್ಷ 500 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿಸಲು ಉದ್ದೇಶಿಸಿದ್ದೇನೆ ಎಂದರು.
ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಶ್ರೀ, ಈಶ್ವರಾನಂದಪುರಿ ಶ್ರೀ, ಸಿದ್ದರಾಮಾನಂದಪುರಿ ಶ್ರೀ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಮೇಯರ್ ಪುಷ್ಪಲತಾ ಇದ್ದರು.
ಮೈತ್ರಿ ಸರ್ಕಾರದ ಜೀವ ಸಿದ್ದು ಕೈಯಲ್ಲಿ: ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿ, ಚುನಾವಣೆ ಸಮಯದಲ್ಲಿ ಒಂದು ಜನಾಂಗ ವ್ಯವಸ್ಥಿತವಾಗಿ ಸಿದ್ದರಾಮಯ್ಯರನ್ನು ಸೋಲಿಸಿತು. ಆದರೆ ಈಗ ಅಂಥವರು ನಡೆಸುತ್ತಿರುವ ಸರ್ಕಾರದ ಜೀವವೇ ಇವರ ಕೈಯಲ್ಲಿದೆ. ಮನಸ್ಸು ಮಾಡಿದರೆ ಕ್ಷಣದಲ್ಲಿ ಸರ್ಕಾರ ಉರುಳಿಸಬಹುದು.
ಆದರೆ, ಸಿದ್ದರಾಮಯ್ಯ ಅಂತಹ ಕಾರ್ಯ ಮಾಡಲ್ಲ. ಮಾಜಿ ಸಿಎಂ ಯಡಿಯೂರಪ್ಪ ನಮ್ಮ ಜನಾಂಗದ ನಾಯಕರಾದ ಸಿದ್ದರಾಮಯ್ಯ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಇದು ಸಮುದಾಯದ ಸ್ವಾಭಿಮಾನಕ್ಕೆ ಮಾಡುವ ಅಪಮಾನವಾಗುತ್ತದೆ. ಆದ್ದರಿಂದ ರಾಜಕೀಯವಾಗಿ ಟೀಕೆಗಳನ್ನು ಮಾಡುವಾಗ ನಾಲಿಗೆ ಹರಿಬಿಡದೆ ಬಹಳ ಎಚ್ಚರಿಕೆಯಿಂದ ಮಾತನಾಡಿ ಎಂದರು.