ಬಾಳೆಹೊನ್ನೂರು: ಮಲೆನಾಡಿನ ಜನರಿಗೆ ಮರಣ ಶಾಸನವಾದ ಭದ್ರಾ ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ ಹಾಗೂ ಬಫರ್ ಝೋನ್ ಯೋಜನೆಗಳನ್ನು ರದ್ದುಗೊಳಿಸದಿದ್ದಲ್ಲಿ ಮುಂಬರುವ ಗ್ರಾಪಂ ಚುನಾವಣೆಯನ್ನು ಸಂಪೂರ್ಣ ಬಹಿಷ್ಕರಿಸುವುದಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂರು ಪಕ್ಷದ ಮುಖಂಡರು ತಿಳಿಸಿದರು.
ಬಾಳೆಹೊನ್ನೂರು ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬಾಳೆಹೊನ್ನೂರು ಹೋಬಳಿ ವ್ಯಾಪ್ತಿಯ ಗ್ರಾಪಂ ಚುನಾವಣಾ ಬಹಿಷ್ಕಾರ ಕುರಿತ ಮೂರು ಪಕ್ಷಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಎನ್.ಆರ್. ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಎಂ.ನಟರಾಜ್ , ಬಾಳೆಹೊನ್ನೂರು ಹೋಬಳಿ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಪ್ರಣಸ್ವಿ ,ಬಾಳೆಹೊನ್ನೂರು ಹೋಬಳಿ ಕಾಂಗ್ರೆಸ್‌ಅಧ್ಯಕ್ಷ ಮಹಮ್ಮದ್ ಹನೀಫ್, ಹೋಬಳಿ ಜೆಡಿಎಸ್ ಅಧ್ಯಕ್ಷ ಕೆ.ಟಿ. ಗೋವಿಂದೇಗೌಡ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಟಿ.ಎಂ. ಉಮೇಶ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷವೆನಿಲ್ಲಾ ಬಾಸ್ಕರ್, ಎಂ.ಜೆ. ಮಹೇಶಾಚಾರ್, ಹೊಳೆಬಾಗಿಲು ಮಂಜು, ಕಿಚ್ಚಬ್ಬಿ ಪ್ರದೀಪ್, ಮಹಮ್ಮದ್ ಜುಹೇಬ್, ಎಂ.ಎಸ್. ಅರುಣೇಶ್, ರವಿಚಂದ್ರ, ಜಾನ್ ಡಿಸೋಜಾ, ಜಗದೀಶ್ಚಂದ್ರ, ಪ್ರದೀಪ್ ಮತ್ತಿತರರು ಇದ್ದರು.
ಅನುಮತಿ ಇಲ್ಲದೆ ಪ್ರತಿಷ್ಠಾಪಿಸಿದ್ದ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ :
ತರೀಕೆರೆ: ಎಂ.ಸಿ. ಹಳ್ಳಿ ಗ್ರಾಮದ ಸುಬ್ರಹ್ಮಣ್ಯಸ್ವಾಮಿ ದೇಗುಲ ಪ್ರವೇಶದ್ವಾರದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ಡಾ| ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ತಾಲೂಕು ಆಡಳಿತ ಶನಿವಾರ ಬೇರೆಡೆ ಸ್ಥಳಾಂತರಿಸಿದೆ.
ಶುಕ್ರವಾರ ತಡರಾತ್ರಿ ಸುಬ್ರಹ್ಮಣ್ಯಸ್ವಾಮಿ ದೇಗುಲ ಪ್ರವೇಶದ್ವಾರದ ಮೂಲಕ ಹಾದು ಹೋಗುವ ರಸ್ತೆ ನಡುವೆ ಡಾ|ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನುಅಳವಡಿಸಿದ್ದು, ಶನಿವಾರ ಬೆಳಗ್ಗೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದುಧಾವಿಸಿ ಬಂದ ತಾಲೂಕು ಆಡಳಿತ ಪರಿಶೀಲನೆ ನಡೆಸಿದನಂತರ ತಾಲೂಕು ದಲಿತ ಮುಖಂಡರನ್ನು ಘಟನಾಸ್ಥಳಕ್ಕೆ ಕರೆಸಿ ಚರ್ಚೆ ನಡೆಸಿತು. ಚರ್ಚೆ ಬಳಿಕ ಒಮ್ಮತದ ತೀರ್ಮಾನಕ್ಕೆ ಬಂದ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಸುಮಾರು 50 ಕೆ.ಜಿ. ತೂಕದ ಬಾಬಾ ಸಾಹೇಬರ ಪ್ರತಿಮೆಗೆ ಧಕ್ಕೆ ಉಂಟಾಗದಂತೆ ತೆರವುಗೊಳಿಸಿ ಪ್ರವೇಶದ್ವಾರದ ಪಕ್ಕದಲ್ಲೇ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಿದರು.
ತಹಶೀಲ್ದಾರ್ ಸಿ.ಜಿ. ಗೀತಾ, ಪ್ರಭಾರ ತಾಪಂ ಇಒ ಟಿ.ಎಸ್. ಗಣೇಶ್, ಡಿವೈಎಸ್‌ಪಿ ಬಿ.ವೈ.ರೇಣುಕಪ್ರಸಾದ್, ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಎಸ್. ಸುರೇಶ್ ಇನ್ನಿತರ ಅಧಿಕಾರಿಗಳು ಇದ್ದರು.