Advertisement

ಸರಕಾರ ರಚನೆಗೆ ರಾಜಕೀಯ ಪಕ್ಷಗಳು ಕಾತರ

12:21 AM May 13, 2023 | Team Udayavani |

ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯ ಫ‌ಲಿತಾಂಶ ಇಂದು ಪ್ರಕಟವಾಗಲಿದೆ. ಆದರೆ ರಾಜಕೀಯ ಪಕ್ಷಗಳು ಸುಮ್ಮನೆ ಕುಳಿತಿಲ್ಲ. ಮತಗಟ್ಟೆ ಸಮೀಕ್ಷೆಗಳನ್ನೇ ಆಧಾರವಾಗಿಟ್ಟುಕೊಂಡು “ಮುಂದಿನ ಕೆಲಸ” ಆರಂಭಿಸಿವೆ. ಮೂರೂ ಪಕ್ಷಗಳು ಶುಕ್ರವಾರ ಬಿರುಸಿನ ಸಮಾಲೋಚನೆ ನಡೆಸಿವೆ. ಬಿಜೆಪಿ ಪಕ್ಷೇತರರ ಮೇಲೆ ಕಣ್ಣಿಟ್ಟಿದ್ದರೆ, ಗೆದ್ದವರನ್ನು ಕೂಡಲೇ ಬೆಂಗಳೂರಿಗೆ ಕರೆತರಲು ಕಾಂಗ್ರೆಸ್‌ ಮುಂದಾಗಿದೆ. ಇನ್ನು ಜೆಡಿಎಸ್‌ ಷರತ್ತು ಒಪ್ಪುವವರಿಗೆ ಬೆಂಬಲ ನೀಡಲು ತೀರ್ಮಾನಿಸುವ ಸಾಧ್ಯತೆ ಇದೆ.

Advertisement

ಪಕ್ಷೇತರರಿಗೆ ಬಿಜೆಪಿ ಗಾಳ: ಸಿಎಂ ಬೊಮ್ಮಾಯಿ- ಬಿಎಸ್‌ವೈ ಮಾತುಕತೆ
ಬೆಂಗಳೂರು: ಒಂದು ತಿಂಗಳಿನಿಂದ ಚುನಾವಣ ವ್ಯೂಹ ರಚನೆಯಲ್ಲಿ ನಿರತರಾಗಿದ್ದ ಬಿಜೆಪಿ ಮುಖಂಡರು ಈಗ ಸರಕಾರ ರಚನೆಯ ಕಾರ್ಯತಂತ್ರಗಳತ್ತ ಗಮನ ಹರಿಸಿದ್ದಾರೆ. ಅತಂತ್ರ ಫ‌ಲಿತಾಂಶ ಬಂದರೆ ಸರಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷೇತರರಾಗಿ ಗೆಲ್ಲಬಹುದಾದ ಸಂಭಾವ್ಯ ಅಭ್ಯರ್ಥಿಗಳನ್ನು ಸೆಳೆಯುವ ಪ್ರಯತ್ನಕ್ಕೆ ಬಿಜೆಪಿ ಮುಂದಡಿ ಇರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಸಮಾಲೋಚನೆ ನಡೆಸಿ ಪಕ್ಷೇತರರಾಗಿ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಸಂಪರ್ಕಿಸಿ ಬೆಂಬಲ ಕೋರಿದ್ದಾರೆ. ಜೆಡಿಎಸ್‌ ಜತೆಗಿನ ಮೈತ್ರಿಯ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಕ್ಕೆ ಬರಲಿದ್ದಾರೆ. ಜೆಡಿಎಸ್‌ ನಾಯಕರ ಜತೆಗಿನ ಮಾತುಕತೆಯನ್ನು ವರಿಷ್ಠರ ತೀರ್ಮಾನಕ್ಕೆ ಬಿಡೋಣ. ಆದರೆ ಸಂಭಾವ್ಯ ಪಕ್ಷೇತರ ಶಾಸಕರ ಜತೆ ಈಗಿನಿಂದಲೇ ಸಂಪರ್ಕದಲ್ಲಿರೋಣ ಎಂದು ಸಭೆಯಲ್ಲಿ ಅಭಿಪ್ರಾಯ ಮೂಡಿತು ಎಂದು ತಿಳಿದು ಬಂದಿದೆ.
ಬಿಎಸ್‌ವೈ ನಿವಾಸಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ ಜತೆ ಸಚಿವರಾದ ಮುರುಗೇಶ ನಿರಾಣಿ, ಬೈರತಿ ಬಸವರಾಜ, ರಾಜ್ಯ ಸಭಾ ಸದಸ್ಯ ಲೆಹರ್‌ ಸಿಂಗ್‌, ಎ.ಟಿ. ರಾಮಸ್ವಾಮಿ, ರಾಜ್ಯ ಬಿಜೆಪಿ ಪ್ರ. ಕಾರ್ಯದರ್ಶಿ ರವಿ ಕುಮಾರ್‌ ಇದ್ದರು.

“ಷರತ್ತು” ಆಧಾರದಲ್ಲಿ ಮೈತ್ರಿ: ಜೆಡಿಎಸ್‌ನಲ್ಲಿ ಕುಮಾರಸ್ವಾಮಿ, ದೇವೇಗೌಡ ಚರ್ಚೆ
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾದರೆ “ಷರತ್ತು”ಗಳ ಆಧಾರದಲ್ಲಿ ಕಾಂಗ್ರೆಸ್‌ ಆಥವಾ ಬಿಜೆಪಿ ಜತೆ ಮೈತ್ರಿಗೆ ಜೆಡಿಎಸ್‌ನಲ್ಲೂ ಆಂತರಿಕ ಚರ್ಚೆ ನಡೆದಿದೆ. ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಅತಂತ್ರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಜೆಡಿಎಸ್‌ನತ್ತ ಚಿತ್ತ ನೆಟ್ಟಿವೆ. ಎರಡೂ ಪಕ್ಷಗಳ ಹೊಸದಿಲ್ಲಿ ನಾಯಕರು ಎಚ್‌.ಡಿ. ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಜತೆಗೆ ಸಂಪರ್ಕದಲ್ಲಿದ್ದಾರೆ. ಫ‌ಲಿತಾಂಶ ಪ್ರಕಟವಾಗುವವರೆಗೆ ಬಹಿರಂಗವಾಗಿ ಮಾತನಾಡದೆ ಮೌನ ವಹಿಸಲು ತೀರ್ಮಾನಿಸಿದ್ದು, ಅನಂತರ ಪರಿಸ್ಥಿತಿ ನೋಡಿಕೊಂಡು ಮುಂದಡಿ ಇಡಲು ಜೆಡಿಎಸ್‌ ಮುಖಂಡರು ನಿರ್ಧರಿಸಿದ್ದಾರೆ. ಕುಮಾರಸ್ವಾಮಿಯವರು ಶನಿವಾರ ಸಿಂಗಾಪುರದಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ.

2008ರಲ್ಲಿ ಬಿಜೆಪಿ, 2018ರಲ್ಲಿ ಕಾಂಗ್ರೆಸ್‌ ಜತೆ ಸರಕಾರ ರಚಿಸಿ ಪಕ್ಷಕ್ಕೆ ಆಗಿರುವ ಕಹಿ ಅನುಭವ, ಈಗಿನ ರಾಜಕೀಯ ಪರಿಸ್ಥಿತಿ ಎಲ್ಲದರ ಬಗ್ಗೆಯೂ ಯೋಚಿಸಿಯೇ ಎಚ್ಚರಿಕೆಯ ಹೆಜ್ಜೆ ಇಡಲು ಜೆಡಿಎಸ್‌ ತೀರ್ಮಾನಿಸಿದೆ. ಯಾವ ಪಕ್ಷದ ಜತೆ ಹೋದರೆ ಪಕ್ಷಕ್ಕೆ ಅನುಕೂಲ ಅಥವಾ ನಷ್ಟ ಎಂಬ ಲೆಕ್ಕಾಚಾರ ಇಟ್ಟುಕೊಂಡು ಪಕ್ಷದಲ್ಲಿ ಗೆಲ್ಲುವ ಶಾಸಕರ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

Advertisement

ಗೆದ್ದ ಕೂಡಲೇ ಬೆಂಗಳೂರಿಗೆ ಬನ್ನಿ:ಆಮಿಷಕ್ಕೆ ಬಲಿಯಾಗದಂತೆ ಮಾಡಲು ಕೈ ತಂತ್ರ
ಬೆಂಗಳೂರು: ರಾಜ್ಯ ಚುನಾವಣೆಯಲ್ಲಿ ಅತಂತ್ರ ಫ‌ಲಿತಾಂಶದ ಸೂಚನೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಗೆದ್ದ ಮುಖಂಡರನ್ನು ಕೂಡಲೇ ಬೆಂಗಳೂರಿಗೆ ಕರೆತರಲು ಕಾಂಗ್ರೆಸ್‌ ವ್ಯವಸ್ಥೆ ಮಾಡಿ ಕೊಂಡಿದೆ. ಈ ಮೂಲಕ ಸರಕಾರ ರಚನೆಯಲ್ಲಿ ತನ್ನದೇ ಆದ ತಂತ್ರಗಾರಿಕೆ ರೂಪಿಸುತ್ತಿದೆ. ಇತರ ಪಕ್ಷಗಳು ಒಡ್ಡುವ ಆಮಿಷಗಳಿಗೆ ಬಲಿಯಾಗದಂತೆ ಮಾಡಲು ಆದ್ಯತೆ ನೀಡಿದೆ. ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಜವಾಬ್ದಾರಿಯನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲೆಯ ಹಿರಿಯ ನಾಯಕರಿಗೆ ಒಪ್ಪಿಸಲಾಗಿದೆ. ಗೆದ್ದ ಅಭ್ಯರ್ಥಿಗಳ ಮೇಲೆ ಸಂಪೂರ್ಣ ನಿಗಾ ಇರಿಸುವಂತೆಯೂ ಸೂಚಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಬಹುತೇಕ ಎಲ್ಲ ಅಭ್ಯರ್ಥಿಗಳ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿ ಫ‌ಲಿತಾಂಶದ ಬಳಿಕ ಬೆಂಗಳೂರಿಗೆ ಆಗ ಮಿಸು ವಂತೆ ಕಟ್ಟಪ್ಪಣೆ ನೀಡಿದ್ದಾರೆ. ಅಭ್ಯರ್ಥಿಗಳ ಜತೆ ನಿರಂತರ ಸಂಪರ್ಕ ದಲ್ಲಿರುವಂತೆ ಸ್ಥಳೀಯ ಮುಖಂಡರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಫ‌ಲಿತಾಂಶದ ಬಳಿಕ ಕಾಂಗ್ರೆಸ್‌ ಶಾಸಕರನ್ನು ಒಂದು ಕಡೆ ಸೇರಿಸುವುದಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಹುತೇಕ ಗೆದ್ದ ಎಲ್ಲ ಶಾಸಕರು ನಗರದ ಹೊಟೇಲ್‌ ಒಂದರಲ್ಲಿ ಶನಿವಾರ ರಾತ್ರಿ ಭೋಜನಕ್ಕೆ ಸೇರುವ ಸಾಧ್ಯತೆಗಳು ಹೆಚ್ಚಿವೆ.

Advertisement

Udayavani is now on Telegram. Click here to join our channel and stay updated with the latest news.

Next