Advertisement

ಕುಮಾರಸ್ವಾಮಿಯಿಂದ ರಾಜಕೀಯ ದೊಂಬರಾಟ

11:16 PM Jun 22, 2019 | Lakshmi GovindaRaj |

ಬೆಂಗಳೂರು: ಮೈತ್ರಿ ಸರ್ಕಾರದ ವೈಫ‌ಲ್ಯವನ್ನು ಮರೆ ಮಾಚಿ ಜನರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯದ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಾಗ್ಧಾಳಿ ನಡೆಸಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅಪ್ಪನ ಮಾತು ಕೇಳಿ ರಾಜಕೀಯ ದೊಂಬರಾಟ ಮಾಡಿ ಜನರಿಂದ ತಿರಸ್ಕೃತರಾಗಿದ್ದಾರೆ. ಜನರ ವಿಶ್ವಾಸ, ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಜೂ.24ಕ್ಕೆ ಪುಸ್ತಕ ಬಿಡುಗಡೆ: ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ 42 ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಅಲ್ಲಿ ಏನು ಪ್ರಗತಿಯಾಗಿದೆ ಎಂಬುದರ ಪರಿಶೀಲನೆ ನಡೆಸಿ ಜೂನ್‌ 24ರಂದು ಪುಸ್ತಕವೊಂದನ್ನು ಬಿಡುಗಡೆ ಮಾಡುತ್ತೇವೆ. ಹಳ್ಳಿಗೆ 1 ಕೋಟಿ ರೂ.ನೀಡುತ್ತೇವೆ ಎಂಬುದು ಸೇರಿ ಯಾವುದೇ ಭರವಸೆಯನ್ನು ಅವರು ಈಡೇರಿಸಿಲ್ಲ.

ನಾವು ಸುವರ್ಣ ಗ್ರಾಮ ಯೋಜನೆಯಡಿ ಪ್ರಚಾರ ಇಲ್ಲದೆ ಹಣ ನೀಡಿದ್ದೆವು ಎಂದರು. ಗ್ರಾಮ ವಾಸ್ತವ್ಯ ಮಾಡುವುದಕ್ಕೂ ಮೊದಲು ಕುಮಾರಸ್ವಾಮಿ ರಾಜ್ಯದಲ್ಲಿರುವ ಭೀಕರ ಬರಗಾಲ ಶಮನಕ್ಕೆ ಬೇಕಾದ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಿ. ಕುಡಿಯುವ ನೀರಿಗಾಗಿ ಜನರು ಸತ್ಯಾಗ್ರಹ ಮಾಡುತ್ತಿದ್ದಾರೆ. ಜಾನುವಾರುಗಳು ಮೇವಿಲ್ಲದೆ ಒದ್ದಾಡುತ್ತಿವೆ.

ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯವರು ಬರಗಾಲ ಪೀಡಿತ ಪ್ರದೇಶಕ್ಕೆ ಹೋಗಿ ಸ್ಥಳದಲ್ಲೇ ಜನರ ಸಮಸ್ಯೆಗೆ ಪರಿಹಾರ ನೀಡಬೇಕು. ಅದನ್ನು ಬಿಟ್ಟು ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ ಎಂದು ದೂರಿದರು.

Advertisement

ಸಮ್ಮಿಶ್ರ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದಿದ್ದರೆ ಲೋಕಸಭೆ ಚುನಾವಣೆ ಫ‌ಲಿತಾಂಶ ಬಂದ ತಕ್ಷಣವೇ ಮುಖ್ಯಮಂತ್ರಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕಿತ್ತು. ಜನರಿಂದ ತಿರಸ್ಕೃತಗೊಂಡಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಕುರ್ಚಿಗೆ ಅಂಟಿಕೊಂಡಿವೆ.

ಮುಖ್ಯಮಂತ್ರಿಯವರು ಗ್ರಾಮ ವಾಸ್ತವ್ಯಕ್ಕೆ ಹೋದರೆ, ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯುವುದೇ ಕಷ್ಟ ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಹೊಸ ಚುನಾವಣೆಗೆ ಸಿದ್ಧರಾಗಿ ಎಂದು ದೇವೇಗೌಡರು ಕರೆ ನೀಡಿದ್ದಾರೆ. 13 ತಿಂಗಳಲ್ಲೇ ಇನ್ನೊಂದು ಚುನಾವಣೆಗೆ ಹೋಗಲು ಯಾರೂ ಸಿದ್ಧರಿಲ್ಲ. ನಾಡಿನ ಜನರು ಕೂಡ ಇದನ್ನು ಸಹಿಸುವುದಿಲ್ಲ.

ಬಿಜೆಪಿಯಲ್ಲಿ ನಾವು 105 ಶಾಸಕರಿದ್ದೇವೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ 20ಕ್ಕೂ ಹೆಚ್ಚು ಅತೃಪ್ತರಿದ್ದಾರೆ. ಮೈತ್ರಿ ಸರ್ಕಾರಕ್ಕೆ ಆಡಳಿತ ನಡೆಸಲು ಯೋಗ್ಯತೆ ಇಲ್ಲದಿದ್ದರೆ ರಾಜೀನಾಮೆ ನೀಡಲಿ. ಮಿತ್ರ ಪಕ್ಷಗಳ ಹೊಡೆದಾಟ, ಬಡಿದಾಟ, ಕಚ್ಚಾಟ ನೋಡಿದರೆ ಈ ಸರ್ಕಾರ ಹೆಚ್ಚು ದಿನ ಉಳಿಯುವಂತೆ ಕಾಣುತ್ತಿಲ್ಲ ಎಂದು ಹೇಳಿದರು.

ರಾಜಕಾರಣದಲ್ಲಿ ಏನೂ ಬೇಕಾದರೂ ಆಗಬಹುದು: ರಾಜಕಾರಣದಲ್ಲಿ ಏನೂ ಬೇಕಾದರೂ ಆಗಬಹುದು. ಮೈತ್ರಿ ಸರ್ಕಾರ ತೋಲಗಬೇಕೆಂದು ಜನರು ಶಾಪ ಹಾಕುತ್ತಿದ್ದಾರೆ. ಜನರ ಭಾವನೆಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೇಂದ್ರದ ಯೋಜನೆಗಳಡಿಯಲ್ಲಿ ಕೆಲಸ ಆಗುತ್ತಿದೆಯೇ ವಿನಃ ರಾಜ್ಯದಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ.

13 ತಿಂಗಳಲ್ಲಿ ಅಭಿವೃದ್ಧಿ ಗಮನ ನೀಡಿಲ್ಲ. ಪ್ರತಿಯೊಂದು ಕೆಲಸದಲ್ಲೂ ಹಗಲು ದರೋಡೆಯಾಗುತ್ತಿದೆ. 10, 20 ಅಥವಾ 30 ಪರ್ಸೆಂಟೇಜ್‌ ಕಮಿಷನ್‌ ಮಾತ್ರವಲ್ಲ, ಕೆಲಸ ಮಾಡದೇ 50, 100 ಕೋಟಿ ರೂ.ಗಳನ್ನು ಡ್ರಾ ಮಾಡಿಕೊಳ್ಳುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.

ಮೈತ್ರಿ ಸರ್ಕಾರದ ಸಾಧನೆ ಏನೂ ಇಲ್ಲ. ಗ್ರಾಮ ವಾಸ್ತವ್ಯ ಮಾಡಿ ಇಲ್ಲ ಸಲ್ಲದ ಭರವಸೆ ನೀಡಿ, ಮಳೆ ಬಿದ್ದಿದೆ ಎಂದು ಕುಂಟು ನೆಪವೊಡ್ಡಿ ಹೈದರಾಬಾದ್‌ನಿಂದ ವಾಪಸ್‌ ಬಂದಿದ್ದಾರೆ. ಇನ್ನೊಂದು ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿಲ್ಲ. ಇದೊಂದು ರೀತಿ ರಾಜಕೀಯ ದೊಂಬರಾಟ. ರಾಜ್ಯದ 6.50 ಕೋಟಿ ಜನ ಇದನ್ನೆಲ್ಲ ಗಮನಿಸುತ್ತಿರುತ್ತಾರೆ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next