Advertisement

ರಾಜಕೀಯ ಒತ್ತಡ ಹೇರಿ ಸನಾತನ ಸಂಸ್ಥೆ ವಿರುದ್ದ ಷಡ್ಯಂತ್ರ

08:54 AM Sep 22, 2017 | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಯಾವತ್ತೂ ಸನಾತನ ಸಂಸ್ಥೆ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಬರೆದಿಲ್ಲ ಹಾಗೂ ಎಲ್ಲಿಯೂ ಮಾತನಾಡಿಲ್ಲ. ಗೌರಿ ನಂಟು ನಕ್ಸಲರೊಂದಿಗೆ ಇತ್ತು. ಆದಾಗ್ಯೂ ಕೆಲ ಪೂರ್ವಗಾಮಿ ಶಕ್ತಿಗಳು, ಈ ಹತ್ಯೆಯನ್ನು ಸನಾತನ ಸಂಸ್ಥೆಯನ್ನು ಗುರಿಯಾಗಿಟ್ಟುಕೊಂಡು ತನಿಖೆ ನಡೆಸುವಂತೆ ರಾಜಕೀಯ ಒತ್ತಡ ಸೃಷ್ಟಿಸುತ್ತಿವೆ ಎಂದು ಸನಾತನ ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಹತ್ಯೆಯ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ವಹಿಸಿದ ದಿನದಿಂದಲೂ ಸನಾತನ ಸಂಸ್ಥೆಯನ್ನು ದೋಷಿ ಸ್ಥಾನದಲ್ಲಿ ನಿಲ್ಲಿಸಿ, ಆ ನಿಟ್ಟಿನಲ್ಲಿ ಹತ್ಯೆಯ ತನಿಖೆ ನಡೆಸಬೇಕೆಂಬ ರಾಜಕೀಯ ಒತ್ತಡ ವನ್ನ ಕೆಲ ವಿಚಾರವಾದಿಗಳು, ಪ್ರಗತಿಪರರು ತರತೊಡಗಿದ್ದಾರೆ. ಆದರೆ, ಗೌರಿ ಅವರ ನಂಟಿರುವುದು ನಕ್ಸಲ ರೊಂದಿಗೆ. ಆ ದಿಸೆಯಲ್ಲಿ ತನಿಖೆ ನಡೆಸುವ ಅಗತ್ಯವಿದೆ ಎಂದು ಸನಾತನ ಸಂಸ್ಥೆಯ ವಕ್ತಾರ ಚೇತನ ರಾಜಹಂಸ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. 

ಗೌರಿ ಹೆಸರೇ ಕೇಳಿಲ್ಲ: ಸನಾತನ ಸಂಸ್ಥೆ ಒಂದು ಧರ್ಮ ಪ್ರಚಾರಕ ಸಂಘಟನೆಯಾಗಿದ್ದು, ಈ ಸಂಸ್ಥೆ ಬಗ್ಗೆ ಗೌರಿ ಲಂಕೇಶ್‌ ಎಲ್ಲಿಯೂ ಮಾತನಾಡಿಲ್ಲ. ಅದೇ ರೀತಿ, ಅವರ ಹೆಸರನ್ನೂ ನಾವು ಕೇಳಿಲ್ಲ. ಅವರ ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ಎಸ್‌ಐಟಿ ತಂಡದಿಂದ ಸನಾತನ ಸಂಸ್ಥೆ ಸದಸ್ಯರನ್ನು ವಿಚಾರಣೆಗೊಳಪಡಿಸಿಲ್ಲ ಹಾಗೂ ಯಾರನ್ನೂ ವಶಕ್ಕೆ ಪಡೆದಿಲ್ಲ. ಆದರೆ, ವಿನಾಕಾರಣ ಕಮ್ಯುನಿಸ್ಟ್‌ ಸಿದ್ಧಾಂತದ ಪೂರ್ವಗಾಮಿಗಳು ತಮ್ಮ ಸಂಸ್ಥೆಯನ್ನು ಇದರಲ್ಲಿ ಎಳೆದುತರುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ವಕೀಲ ಸಂಜೀವ ಪುನಾಳೇಕರ್‌ ಮಾತನಾಡಿ, ಪನ್ಸಾರೆ ಮತ್ತು ಧಾಬೋಲ್ಕರ್‌ ಹತ್ಯೆಯೊಂದಿಗೆ ಗೌರಿ ಹತ್ಯೆಯನ್ನು ತಳುಕುಹಾಕಲಾಗುತ್ತಿದೆ. ಆದರೆ, ಗೌರಿ ಅವರ ನಂಟು ಇದ್ದದ್ದು ನಕ್ಸಲರೊಂದಿಗೆ. ಹಾಗಾಗಿ ಆ ನಿಟ್ಟಿನಲ್ಲಿ ತನಿಖೆ ನಡೆಸಿದರೆ, ನಿಜವಾದ ಕೊಲೆಗಾರ ಸಿಗಲಿದ್ದಾರೆ ಎಂದು ಹೇಳಿದರು.

ಗೌರಿ ಲಂಕೇಶ್‌, ಪನ್ಸಾರೆ, ಧಾಬೋಲ್ಕರ್‌ ಸೇರಿ ಸಮಾನ ಮನಸ್ಕರರು ಒಂದೆಡೆ ಸೇರಿದಾಗ, ಎರಡೂ ರಾಜ್ಯಗಳ ನಕ್ಸಲರ ರಕ್ಷಣೆ ಬಗ್ಗೆಯೇ ಚರ್ಚೆ ನಡೆಯುತ್ತಿದ್ದರು ಎಂದು ಆರೋಪಿಸಿದ ಅವರು, “ಇದೇನೂ ತತ್ವ-ಸಿದ್ಧಾಂತಗಳಡಿಯ ಒಪ್ಪಂದ ಆಗಿರಲಿಲ್ಲ. ಬದಲಿಗೆ ಅದೊಂದು ಹಣದ ಹಂಚಿಕೆಯ ಒಪ್ಪಂದ ಆಗಿರುತ್ತಿತ್ತು. ಹಾಗಾಗಿ, ಗೌರಿ ಲಂಕೇಶ್‌ ಹತ್ಯೆಗೈದವರು ಸಿಕ್ಕರೆ, ಪನ್ಸಾರೆ ಮತ್ತು ದಾಭೋಲ್ಕರ್‌ ಅವರ ಕೊಲೆಗಾರರೂ ಸಿಗಲಿದ್ದಾರೆ’ ಎಂದೂ ಹೇಳಿದರು.

Advertisement

ನಿಷ್ಪಕ್ಷಪಾತ ತನಿಖೆಯಾಗಲಿ: ದಾಭೋಲ್ಕರ್‌, ಪನ್ಸಾರೆ ಪ್ರಕರಣಗಳಲ್ಲಿ ಮಹಾರಾಷ್ಟ್ರ ಪೊಲೀಸರು ಎಸಗಿದ ತಪ್ಪಿನಿಂದ ತನಿಖೆ ಹಾದಿತಪ್ಪಿದೆ. ಅವರಿಬ್ಬರ ಕುಟುಂಬದವರು ನಡೆಸಿದ ಒತ್ತಡ ತಂತ್ರಗಳಿಂದ ಅಲ್ಲಿನ ಪೊಲೀಸರಿಗೆ ದಿಕ್ಕುತೋಚದಂತಾಗಿದೆ. ಇದೇ ತಪ್ಪು ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲೂ ಆಗಬಾರದು. ಎಸ್‌ಐಟಿ ತನಿಖೆಗೆ ಕೂಡ ಸಂಪೂರ್ಣ ಸಹಕಾರ ನೀಡಲಾಗುವುದು. ಅಗತ್ಯಬಿದ್ದರೆ ನಮ್ಮಲ್ಲಿರುವ ಮಾಹಿತಿಗಳನ್ನೂ ಪೊಲೀಸರು ಪಡೆಯಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ವೀರೇಂದ್ರ ಇಚಲಕರಂಜಿಕರ, ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ, ವಕೀಲ ಎನ್‌.ಪಿ. ಅಮೃತೇಶ್‌ ಮತ್ತಿತರರು ಉಪಸ್ಥಿತರಿದ್ದರು. 

ದೆಹಲಿಯಲ್ಲಿ ಗೌರಿ ಲಂಕೇಶ್‌ಗೆ ಶ್ರದ್ಧಾಂಜಲಿ
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಖಾಸಗಿ ಬಿಲ್ಡರ್‌ ನಡುವೆ ಕಟ್‌ಪುತ್ಲಿ ಪ್ರದೇಶದಲ್ಲಿ ಜಮೀನಿಗಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಅದನ್ನು ಪ್ರತಿಭಟಿಸುವ ವೇಳೆ ಬುಧವಾರ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವೂ ನಡೆಯಿತು. ನ್ಯಾಷನಲ್‌ ಫೆಡರೇಷನ್‌ ಆಫ್ ಇಂಡಿಯನ್‌ ವುಮನ್‌ ಎಂಬ ದೇಶದ
ಅತ್ಯಂತ ಹಳೆಯ ಮಹಿಳಾ ಸಂಘಟನೆ ಕಾರ್ಯಕ್ರಮದ ನೇತೃತ್ವ ವಹಿಸಿತ್ತು. ಗೌರಿ ಲಂಕೇಶ್‌ ಅವರು ಬಡ ವರ್ಗದ ಜನರ, ಕೂಲಿ ಕಾರ್ಮಿಕರಿಗೆ ಉಂಟಾಗುತ್ತಿದ್ದ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿದ್ದರು ಎಂದು ಸಂಘಟನೆಯ ನಾಯಕಿ ಅನ್ನೆ ರಾಜಾ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಆಲ್‌ ಇಂಡಿಯಾ ಡೆಮಾಕ್ರಾಟಿಕ್‌ ವುಮನ್ಸ್‌ ಅಸೋಸಿಯೇಷನ್‌ನ ನಾಯಕಿ ಎಸ್‌.ಪುಣ್ಯವತಿ ಸೇರಿ ಹಲವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next