Advertisement
ಖುದ್ದು ಮುಖ್ಯಮಂತ್ರಿ (ಈಗ ಹಂಗಾಮಿ ಸಿಎಂ) ಎಚ್.ಡಿ.ಕುಮಾರಸ್ವಾಮಿ ಅವರು, ಮಂಗಳವಾರ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ಚರ್ಚೆಯಲ್ಲಿ ಈ ಕುರಿತು ಪ್ರಸ್ತಾಪಿಸಿರುವುದು ಈ ಆರೋಪಗಳಿಗೆ ಇಂಬು ನೀಡುವಂತಿದೆ. ಇ.ಡಿ ಅಧಿಕಾರಿಗಳು ಸಹ ಈ ಆರೋಪಕ್ಕೆ ಪೂರಕವಾಗೇ ನಡೆದುಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Related Articles
Advertisement
ಆದರೆ, ಇ.ಡಿ ಮಾತ್ರ ಯಾವುದೇ ನೋಟಿಸ್ ಹೊರಡಿಸದೆ ಪ್ರಮುಖ ಆರೋಪಿ ಮನ್ಸೂರ್ ಖಾನ್‌ನ ಚಲನವಲನಗಳ ಮೇಲೆ ನಿಗಾವಹಿಸಿತ್ತಾ, ಎಸ್‌ಐಟಿ ವಶದಲ್ಲಿದ್ದ ಆರೋಪಿಗಳ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಈ ವೇಳೆ ಕೆಲವರು ಮೈತ್ರಿ ಸರ್ಕಾರದ ಕೆಲ ಪ್ರಭಾವಿ ರಾಜಕೀಯ ಮುಖಂಡರ ಹೆಸರು ಬಾಯಿಬಿಟ್ಟಿದ್ದ ಎಂದು ಹೇಳಲಾಗಿದೆ.
ಎಸ್‌ಐಟಿ ಲೋಪ-ಇಡಿಗೆ ವರದಾನ: ಪೊಲೀಸರು ತಮಗಿರುವ ಸಿಆರ್‌ಪಿಸಿ ಅಧಿಕಾರವನ್ನು ದೇಶದೊಳಗೆ ಮಾತ್ರ ಚಲಾಯಿಸಬಹುದು. ನಿಯಮದ ಪ್ರಕಾರ ವಿದೇಶದಲ್ಲಿರುವ ಆರೋಪಿಯನ್ನು ವಶಕ್ಕೆ ಪಡೆಯಲು ಅಥವಾ ಬಂಧಿಸಲು ಸ್ಥಳೀಯ ಕೋರ್ಟ್ ಜತೆಗೆ ಕೇಂದ್ರದ ವಿದೇಶಾಂಗ ಮತ್ತು ಗೃಹ ಸಚಿವಾಲಯ ಸಂಪರ್ಕದಲ್ಲಿದ್ದು, ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಈ ಯಾವ ಪ್ರಕ್ರಿಯೆಯನ್ನೂ ಮಾಡದ ಎಸ್‌ಐಟಿ ಅಧಿಕಾರಿಗಳು, ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮನ್ಸೂರ್ ಖಾನ್‌ನನ್ನು ಮನವೊಲಿಸಿ ಅನಧಿಕೃತವಾಗಿ ವಶಕ್ಕೆ ಪಡೆಯಲು ಕಾರ್ಯತಂತ್ರ ರೂಪಿಸಿದ್ದರು.
15 ದಿನಗಳ ಕಾಲ ಅಲ್ಲೇ ಇದ್ದ ಇಬ್ಬರು ಡಿವೈಎಸ್‌ಪಿ ನೇತೃತ್ವದ ತಂಡ, ಒಣ ಹಣ್ಣು ವ್ಯಾಪಾರಿಗಳ ಸೋಗಿನಲ್ಲಿ ಆರೋಪಿಯನ್ನು ಸಂಪರ್ಕಿಸಿ ದೇಶಕ್ಕೆ ಕರೆತರುವ ಎಲ್ಲ ಪ್ರಯತ್ನದಲ್ಲೂ ಸಫಲವಾಗಿತ್ತು ಎನ್ನಲಾಗಿದೆ. ಈ ನಡುವೆಯೇ ಆರೋಪಿ ಸಹ ದೇಶಕ್ಕೆ ವಾಪಸ್ ಬರುತ್ತಿರುವುದಾಗಿ ವಿಡಿಯೋ ಹರಿಬಿಟ್ಟಿದ್ದ.
ಈ ವಿಚಾರ ತಿಳಿದಿದ್ದ ಇ.ಡಿ ತತ್‌ಕ್ಷಣ ಮಧ್ಯಪ್ರವೇಶಿಸದೆ ಇಮಿಗ್ರೇಷನ್ ಅಧಿಕಾರಿಗಳಿಗೆ ಮೌಖೀಕವಾಗಿ ಮಾಹಿತಿ ನೀಡಿ, ಆರೋಪಿ ದೆಹಲಿಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ, ಆತನನ್ನು ವಶಕ್ಕೆ ಪಡೆದು ಕೋರ್ಟ್‌ಗೆ ಹಾಜರು ಪಡಿಸಿ, ವಶಕ್ಕೆ ಪಡೆದುಕೊಂಡಿದೆ. ಎಸ್‌ಐಟಿ ಲೋಪವನ್ನು ಅಸ್ತ್ರವನ್ನಾಗಿಸಿಕೊಂಡಿರುವ ಇ.ಡಿ ಅಧಿಕಾರಿಗಳು ಪದೇ ಪದೆ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಪ್ರಭಾವಿಗಳ ಹೆಸರು ಬಾಯಿಬಿಡಿಸಲು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಅಭಿಯೋಜಕರ ಬದಲಾವಣೆ: ಮತ್ತೂಂದೆಡೆ ಮಹತ್ವದ ಬೆಳವಣಿಗೆಯೊಂದರಲ್ಲಿ ತಮ್ಮ ಪರ ವಾದ ಮಂಡಿಸಲು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ನ ಅಡಿಷನಲ್ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರನ್ನು ನೇಮಿಸಿಕೊಂಡಿದೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪ್ರಭಾವಿಗಳ ಹೆಸರು ಬಾಯಿಬಿಡಿಸಲು ಕಸರತ್ತು: ಮೂರು ದಿನಗಳ ಕಾಲ ಇ.ಡಿ ವಶದಲ್ಲಿದ್ದ ಮನ್ಸೂರ್ ಖಾನ್, ವಿಚಾರಣೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರಾದ ರೋಷನ್ ಬೇಗ್, ಜಮೀರ್ ಅಹಮದ್ ಖಾನ್ ಸೇರಿ ಹಲವು ಪ್ರಭಾವಿ ಜನಪ್ರತಿನಿಧಿಗಳ ಹೆಸರು ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಜು.26ರವರೆಗೆ ವಶಕ್ಕೆ ಪಡೆದಿರುವ ಇ.ಡಿ, ಇನ್ನಷ್ಟು ಪ್ರಭಾವಿಗಳ ಹೆಸರನ್ನು ಆತನಿಂದ ಬಾಯಿಬಿಡಿಸಲು ಕಸರತ್ತು ನಡೆಸುತ್ತಿದೆ. ಆದರೆ, ಆತ ಮಾತ್ರ ಎದೆ ನೋವಿನ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಮಧ್ಯೆ ಐದು ದಿನಗಳು ಕಳೆದರೂ ಆರೋಪಿಯನ್ನು ತಮ್ಮ ವಶಕ್ಕೆ ಕೊಡಲು ಇ.ಡಿ ಮೀನಮೇಷ ಎಣಿಸುತ್ತಿದೆ ಎಂದು ಎಸ್‌ಐಟಿ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಐಎಂಎ ತನಿಖೆ ಮಾಹಿತಿ ಇಲ್ಲ: ಬಾಲಕೃಷ್ಣನ್ಬೆಂಗಳೂರು: ಐಎಂಎ ಸಂಸ್ಥೆಯ ವಂಚನೆ ಪ್ರಕರಣದಲ್ಲಿ ಐಟಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದ್ದು, ಅವರ ಬಳಿ ಏನು ಮಾಹಿತಿ ಎಂಬುದು ನನಗೆ ಗೊತ್ತಿಲ್ಲ ಎಂದು ಎಂದು ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ (ಕರ್ನಾಟಕ-ಗೋವಾ ವಲಯ) ಬಿ.ಆರ್.ಬಾಲಕೃಷ್ಣನ್ ಸ್ಪಷ್ಟಪಡಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಐಎಂಎ ಸಂಸ್ಥೆಯ ಹಗರಣ ಸಂಬಂಧ ಆದಾಯ ತೆರಿಗೆ ಇಲಾಖೆಗೆ ಯಾರಾದರೂ ದೂರು ನೀಡಿದರೆ ತನಿಖೆ ನಡೆಸಲು ಸಿದ್ಧ. ಆದರೆ, ಈವರೆಗೆ ಈ ಬಗ್ಗೆ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಈ ಪ್ರಕರಣದಲ್ಲಿ ಐಟಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಇಡಿ ಮತ್ತು ಎಸ್‌ಐಟಿ ತನಿಖೆ ನಡೆಸುತ್ತಿವೆ. ಅವರ ಬಳಿ ಏನು ಮಾಹಿತಿ ಇದೆ ಎಂಬುದು ನಮಗೆ ಗೊತ್ತಿಲ್ಲ ಎಂದು ಹೇಳಿದರು. 2017ರಲ್ಲಿ ನೋಟು ರದ್ದತಿ ನಂತರ ಉದ್ದೇಶಿತ ಸಂಸ್ಥೆಯಲ್ಲಿ ಸಾಕಷ್ಟು ವೃದ್ಧಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನೋಟು ರದ್ದತಿ ಮತ್ತು ಐಎಂಎಗೂ ನಂಟು ಇರುವ ಬಗ್ಗೆ ತನಿಖೆ ನಡೆಸಿದ್ದು, ಈ ವೇಳೆ ದೊರೆತ ಮಾಹಿತಿಗಳನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೂ ನೀಡಲಾಗಿದೆ ಎಂದರು. * ಮೋಹನ್ ಭದ್ರಾವತಿ