ಪಣಜಿ: ಕರಾವಳಿ ತೀರದ ಆ ಪುಟ್ಟ ರಾಜ್ಯದಲ್ಲಿ ಅನೇಕ ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ವಿದ್ಯಮಾನವೊಂದು ಜರುಗಿ ಹೋಗಿದೆ. ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ನಿಧನರಾದ ಹಿನ್ನೆಲೆಯಲ್ಲಿ ಅಲ್ಲಿನ ರಾಜಕೀಯ ವಲಯದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ.
ಬಿಜೆಪಿಯಲ್ಲಿ ಸೂತಕ ವಾತಾವರಣದ ನಡುವೆಯೇ ಪರ್ಯಾಯ ನಾಯಕತ್ವಕ್ಕಾಗಿ ಹುಡುಕಾಟ ತೀವ್ರಗೊಂಡಿದೆ. ಪರ್ರಿಕರ್ ಸ್ಥಿತಿ ಗಂಭೀರವಾಗಿರುವ ವದಂತಿ ಹರಿದಾಡತೊಡಗಿದ್ದರಿಂದ ಶನಿವಾರ, ಗೋವಾ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಇದರಿಂದ ಎಚ್ಚೆತ್ತ ಬಿಜೆಪಿ, ಶನಿವಾರ ರಾತ್ರಿ ತನ್ನ ಶಾಸಕರ ತುರ್ತು ಸಭೆ ಕರೆದಿತ್ತು. ಭಾನುವಾರ ಬೆಳಗ್ಗೆಯೂ ಮತ್ತೂಂದು ಸುತ್ತಿನ ಸಭೆ ನಡೆದು ಗೋವಾದಿಂದ ಯಾವ ಬಿಜೆಪಿ ಶಾಸಕರೂ ಹೊರಹೋಗ ದಂತೆ ಸೂಚನೆ ನೀಡಲಾಗಿತ್ತು.
ದಿಗಂಬರ್ ದೆಹಲಿಗೆ ದೌಡು: ಇದೆಲ್ಲದರ ನಡುವೆ, ಪ್ರಬಲ ನಾಯಕರೊಬ್ಬರ ಹುಡುಕಾಟದಲ್ಲಿ ಬಿಜೆಪಿ ತೊಡಗಿರುವಾಗಲೇ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರು ಬಿಜೆಪಿ ಮರುಸೇರ್ಪಡೆಗೊಳ್ಳುವ ವದಂತಿಗಳು ಹರಿದಾಡತೊಡ ಗಿದವು. ಇದರ ನಡುವೆಯೇ ಕಾಮತ್ ಹಠಾತ್ತಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದು ಹಲವು ಊಹಾಪೋಹಗಳಿಗೆ ಕಾರಣ ವಾಯಿತು.
ದೆಹಲಿ ದೌಡಿನ ಗುಟ್ಟೇನು?: ಗೋವಾ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ದಿಗಂಬರ್ ಕಾಮತ್, ಭಾನು ವಾರ ದಿಢೀರನೆ ದೆಹಲಿಗೆ ಹೊರಟಿದ್ದು ಏಕೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ತಾವು ಬಿಜೆಪಿಗೆ ಸೇರ್ಪಡೆಗೊಳ್ಳುವ ವದಂತಿಗಳನ್ನು ಅವರು ಅಲ್ಲಗಳೆದಿದ್ದಾರೆ. ಅಲ್ಲದೆ, ದೆಹಲಿಯ ತಮ್ಮ ಪ್ರಯಾಣ ಬ್ಯುಸಿನೆಸ್ ಟ್ರಿಪ್ ಎಂದೂ ಹೇಳಿದ್ದಾರೆ. ಆದರೂ, ಅವರ ದೆಹಲಿ ಪಯಣ ಕುತೂಹಲ ಹುಟ್ಟಿಸಿದ್ದಂತೂ ಸುಳ್ಳಲ್ಲ. ಇದಕ್ಕೆ ಕಾರಣ, 2005ರವರೆಗೆ ಬಿಜೆಪಿಯಲ್ಲೇ ಇದ್ದ ಕಾಮತ್ ಆನಂತರ ಕಾಂಗ್ರೆಸ್ ಸೇರಿದ್ದರು. ಹಾಗಾಗಿ, ಬಿಜೆಪಿ ಈಗ ಕಾಮತ್ ಅವರನ್ನು ಪುನಃ ತನ್ನತ್ತ ಸೆಳೆಯುವ ಪ್ರಯತ್ನ ಮಾಡು ತ್ತಿದೆ ಎಂದು ಹೇಳಲಾಗಿದೆ. ಹಾಗೊಮ್ಮೆ ಅವರು ಬಿಜೆಪಿಗೆ ಸೇರ್ಪಡೆಗೊಂಡರೆ ಅವರನ್ನೇ ಮುಖ್ಯಮಂತ್ರಿ ಮಾಡುವ ಇರಾದೆಯೂ ಬಿಜೆಪಿಗೆ ಇದೆ ಎನ್ನಲಾಗುತ್ತಿದೆ.