ಜೈಪುರ :“ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರ “ಏಕತೆಯ ಪ್ರದರ್ಶನ” ದ ಬಗ್ಗೆ ಬಿಜೆಪಿ ಬುಧವಾರ (ನ 30) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ರಾಜಸ್ಥಾನದ ಬಿಜೆಪಿ ಶಾಸಕ ಮತ್ತು ವಕ್ತಾರ ರಾಮಲಾಲ್ ಶರ್ಮಾ ಅವರು ವಿಡಿಯೋ ಹೇಳಿಕೆಯಲ್ಲಿ ಇದು ಕೇವಲ ” ರಾಜಕೀಯ ವಿರಾಮ. ಇಬ್ಬರು ಕಾಂಗ್ರೆಸ್ ನಾಯಕರು ಪರಸ್ಪರ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ಜನರು ಮತ್ತೆ ಕೇಳುತ್ತಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟದಿಂದಾಗಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಹೇಳಿದ್ದಾರೆ.
“ಕಾಂಗ್ರೆಸ್‌ನಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ರಾಜ್ಯದ ಜನರಿಗೆ ಭರವಸೆ ನೀಡಲಾಯಿತು ಆದರೆ ಇದು ಸದ್ಯಕ್ಕೆ ರಾಜಕೀಯ ವಿರಾಮವಾಗಿದೆ ಎಂದು ನಾನು ನಂಬುತ್ತೇನೆ ಮತ್ತು ರಾಜ್ಯದ ಜನರು ‘ನಕಾರ’ ‘ನಿಕಮ್ಮ’ ಮತ್ತು ‘ಗದ್ದರ್’,” ನಂತಹ ಮಾತುಗಳನ್ನು ಮತ್ತೆ ಕೇಳುತ್ತಾರೆ ಎಂದಿದ್ದಾರೆ.
2020 ರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದ ಪೈಲಟ್ ಅವರನ್ನು ‘ಗದ್ದರ್’ (ದೇಶದ್ರೋಹಿ) ಎಂದು ಕಳೆದ ವಾರದ ಆರಂಭದಲ್ಲಿ ಟಿವಿ ಸುದ್ದಿ ವಾಹಿನಿಗೆ ಗೆಹ್ಲೋಟ್ ಹೇಳಿಕೆ ನೀಡಿದ್ದರು.
ಜೈಪುರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮಂಗಳವಾರ ಸಭೆ ನಡೆಸಿದಾಗ ಇಬ್ಬರೂ ನಾಯಕರ ಒಗ್ಗಟ್ಟನ್ನು ಪ್ರದರ್ಶಿಸಿದ್ದರು.‘ಇದು ರಾಜಸ್ಥಾನ ಕಾಂಗ್ರೆಸ್’ ಎಂದು ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ಉಭಯ ನಾಯಕರ ಕೈ ಹಿಡಿದಿದ್ದರು.