Advertisement

ನೀತಿ, ಸಮಿತಿ ಬೇಡ, ನ್ಯಾಯ ಬೇಕು 

12:46 PM Mar 13, 2017 | Team Udayavani |

ಬೆಂಗಳೂರು: “ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಮಿತಿಗಳ ರಚನೆ, ನೀತಿಗಳನ್ನು ರೂಪಿಸುವುದು ಬೇಕಾಗಿಲ್ಲ, ಅದಕ್ಕೆ ಬದಲಾಗಿ ನ್ಯಾಯ ಒದಗಿಸಬೇಕು,” ಎಂದು ಲೇಖಕಿ ಡಾ.ಆರ್‌.ಇಂದಿರಾ ಹೇಳಿದ್ದಾರೆ. 

Advertisement

ಸಮಾಜವಾದಿ ಕ್ರಾಂತಿ ಶತಮಾನೋತ್ಸವ ಸಮಿತಿ ಭಾನುವಾರ ನಗದರಲ್ಲಿ ಆಯೋಜಿಸಿದ್ದ “ಸಮಾಜವಾದಿ ಕ್ರಾಂತಿ ಮತ್ತು ಮಹಿಳೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. “”ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಸಮಿತಿಗಳನ್ನು ರಚಿಸುವುದರಿಂದ ಅಥವಾ ನೀತಿಗಳನ್ನು ರೂಪಿಸುವುದರಿಂದ ಪರಿಹಾರ ಸಿಗುವುದಿಲ್ಲ. ದೌರ್ಜನ್ಯಕ್ಕೊಳಗಾದವರಿಗೆ ಸೂಕ್ತ ನ್ಯಾಯ ಸಿಗಬೇಕು,” ಎಂದು ಪ್ರತಿಪಾದಿಸಿದರು.

“ಇತ್ತಿಚಿನ ದಿನಗಳಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ಶೋಷಣೆ, ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಶಿಕ್ಷಕರು ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ. ಅಂತಹವರಿಗೆ ಶಿಕ್ಷೆ ರೂಪದಲ್ಲಿ ವರ್ಗಾವಣೆ ಅಥವಾ ವೇತನ ಬಡ್ತಿ ಕಡಿತ ಮಾಡಲಾಗುತ್ತದೆಯೇ ಹೊರತು, ಹೆಚ್ಚಿನ ಶಿಕ್ಷೆ ನೀಡುತ್ತಿಲ್ಲ.

ಹೀಗಿರುವಾಗ ಇದನ್ನು ಶಿಕ್ಷೆ ಎಂದು ಹೇಳಬೇಕಾ? ಪ್ರಕರಣ ಸ್ವಲ್ಪ ಗಂಭೀರ ಸ್ವರೂಪ ಪಡೆದುಕೊಂಡರೆ ಪ್ರಕರಣದ ವಿಚಾರಣೆ ನಡೆಸಲು ಒಂದು ಸಮಿತಿ ರಚಿಸಲಾಗುತ್ತದೆ. ಇಲ್ಲವೇ, ನೀತಿ ರೂಪಿಸಲಾಗುವುದು ಎಂದು ಸರ್ಕಾರಗಳು ಹೇಳುತ್ತವೆ. ಆದರೆ, ನಮಗೆ ಸಮಿತಿ, ನೀತಿಗೆ ಬದಲು ನ್ಯಾಯ ಬೇಕು,” ಎಂದು ಹೇಳಿದರು. 

ಹಕ್ಕುಗಳಿಗಾಗಿ ಚಳವಳಿಗಳಾಗಬೇಕು: “ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಚಳವಳಿಗೆ ಇಳಿಯುವುದೇ ನಿಜವಾದ ಕ್ರಾಂತಿ. ಅದರಲ್ಲೂ ಸಮಾಜವಾದಿ ಕ್ರಾಂತಿ ಹಿಂದೆಂದಿಗಿಂತ ಇಂದು ಹೆಚ್ಚು ಅವಶ್ಯವಾಗಿದೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕಾಗಿ ಪ್ರತಿಭಟಿಸಬೇಕು. ಆಗ ಮಾತ್ರ ವ್ಯವಸ್ಥೆ ಬದಲಾಗಲು ಸಾಧ್ಯ. ಮಹಿಳೆಯರ ಜತೆ ಯಾವುದೇ ತರಹದ ದುರ್ವರ್ತನೆಗಳನ್ನು ಮಾಡುವಂತಿಲ್ಲ.

Advertisement

ಮಾಡಿದರೆ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಬಲವಾದ ಸಂದೇಶ ಮಹಿಳಾ ಚಳವಳಿ ಮೂಲಕ ಪುರುಷ ಸಮುದಾಯಕ್ಕೆ ವ್ಯಾಪಕವಾಗಿ ರವಾನೆಯಾಗಬೇಕು,” ಎಂದು ಕರೆ ನೀಡಿದರು. ಲೇಖಕಿ ಡಾ.ಕ.ಶರೀಫಾ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕಿ ಡಾ.ಎಂ.ಎಸ್‌.ಆಶಾದೇವಿ, ಲೇಖಕಿಯರಾದ ಡಾ.ಎನ್‌.ಗಾಯಿತ್ರಿ, ಎಚ್‌.ಆರ್‌.ಸುಜಾತ ವಿಚಾರ ಮಂಡಿಸಿದರು. ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್‌.ವಿಮಲಾ, ಗೌರಮ್ಮ, ಕೆ.ಎಸ್‌.ಲಕ್ಷ್ಮೀ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next