Advertisement

ಪಾಲಿಕೆ ಹೊಸ ಕಸ ವಿಲೇವಾರಿ ನಿಯಮ; ನಗರ ವಾಸಿಗಳಿಗೆ ಹಲವು ಕಿರಿಕಿರಿ!

10:23 PM Oct 16, 2020 | mahesh |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಯು 2016ರ “ಪೌರ ಘನತಾಜ್ಯ ವಸ್ತುಗಳ ನಿರ್ವಹಣೆ ನಿಯಮ’ವನ್ನು ನಗರದಲ್ಲಿ ಅ. 15ರಿಂದ ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸುತ್ತಿರುವುದು ಸ್ವಾಗತಾರ್ಹ. ಆದರೆ ಕಸ ವಿಲೇವಾರಿಗೆ ಸಂಬಂಧಿಸಿದ ಈ ನಿಯಮದಲ್ಲಿನ ಕೆಲವೊಂದು ಕ್ರಮವು ನಗರವಾಸಿಗಳಿಗೆ ಅನಾನುಕೂಲತೆ ಸೃಷ್ಟಿಸು ವ ಮೂಲಕ ಗೊಂದಲಕ್ಕೆ ಎಡೆ ಮಾಡಿದೆ.

Advertisement

ನಗರದಲ್ಲಿ ಪರಿಸರಕ್ಕೆ ಮಾರಕವಾಗದಂತೆ ಕಸ ವಿಲೇವಾರಿ ಮಾಡುವುದು ಹತ್ತಾರು ವರ್ಷಗಳಿಂದ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಇದಕ್ಕೆ ಇನ್ನೂ ಒಂದು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ. ಘನ ತ್ಯಾಜ್ಯ ನಿರ್ವಹಣೆ ನಿಯಮಾವಳಿಗಳನ್ನು ನಿಗದಿತ ಕಾಲಮಿತಿಯಲ್ಲಿ ಸಂಪೂರ್ಣ ಅನುಷ್ಠಾನ ಗೊಳಿಸುವಲ್ಲಿ ವಿಫಲವಾಗಿರುವ ಬಗ್ಗೆ ಹೈಕೋರ್ಟ್‌ ಮನಾಪಾಗೆ ಇತ್ತೀಚೆಗೆ ಬಿಸಿ ಮುಟ್ಟಿಸಿತ್ತು. ಇದರ ಪರಿಣಾಮವಾಗಿ, ಅ. 2ರಿಂದ ಎಲ್ಲ ವಾರ್ಡ್‌ಗಳಲ್ಲಿ ತ್ಯಾಜ್ಯವನ್ನು ಹಸಿ ಕಸ, ಒಣ ಕಸ ಪ್ರತ್ಯೇಕಿಸಿ ಸಂಗ್ರಹಿಸುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಅ. 15ರಿಂದ ಇದು ಕಟ್ಟುನಿಟ್ಟಾಗಿ ಜಾರಿ ಯಾಗಿದ್ದು, ಇನ್ನುಮುಂದೆ ವಾರದಲ್ಲಿ ಶುಕ್ರವಾರ ಹೊರತುಪಡಿಸಿ ಉಳಿದೆಲ್ಲ ದಿನ ಹಸಿ ಕಸ, ಶುಕ್ರವಾರ ಒಣ ಕಸ ಮಾತ್ರ ಸಂಗ್ರಹಿಸಲಾಗುತ್ತದೆ.

ಹೊಸ ನಿಯಮದ ಅನುಷ್ಠಾನದ ರೀತಿ ನೋಡಿದರೆ ಅದು ಹೊಸದಾದ ಸಮಸ್ಯೆಗಳ ಸೃಷ್ಟಿಗೂ ದಾರಿಯಾಗುವ ಸಾಧ್ಯತೆಗಳಿವೆ. ಈ ಕಾರಣದಿಂದ ಹೊಸ ಕಸ ವಿಂಗಡನೆಗೆ ಸಾರ್ವಜನಿಕ ವಲಯದಲ್ಲಿಯೂ ಅಸಮಾ ಧಾನ ವ್ಯಕ್ತವಾಗತೊಡಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಹೀಗಿರುವಾಗ, ಪಾಲಿಕೆಯು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಹೊಸ ಕಸ ವಿಂಗಡನೆಯನ್ನು ಕಾರ್ಯ ಗತಗೊಳಿಸಬೇಕು ಎನ್ನುವ ಆಗ್ರಹ ವ್ಯಕ್ತವಾಗುತ್ತಿದೆ.

ಇನ್ನು ಮನೆಮುಂದೆ ಪ್ಲಾಸ್ಟಿಕ್‌ ಚೀಲದಲ್ಲಿ ಕಟ್ಟಿ ಕಸ ಇಡುವಂತಿಲ್ಲದ ಕಾರಣ ಕಸದ ವ್ಯಾನ್‌ ಬರುವುದನ್ನೇ ಕಾಯುತ್ತ ಕುಳಿತು ವಿಲೇವಾರಿ ಮಾಡುವುದು ಅನಿವಾರ್ಯ. ಇದು ಮನೆಗಳಲ್ಲಿ ಹೆಚ್ಚಿನ ಜನರಿಲ್ಲದವರು ಹಾಗೂ ದಿನನಿತ್ಯ ಬೆಳಗ್ಗೆ ಕಚೇರಿ-ಇನ್ನಿತರ ಕೆಲಸಗಳಿಗೆ ಹೋಗಬೇ ಕಾದವರಿಗೆ ಸಾಕಷ್ಟು ತೊಂದರೆ ಸೃಷ್ಟಿಸಲಿದೆ. ಇದರಿಂದ ಮನೆಯಲ್ಲಿಯೇ ಉಳಿಯುವ ಕಸವನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಬೇರೆಡೆ ಎಸೆದು ಹೋಗುವ ಅಪಾಯವಿದೆ.

ಶುಕ್ರವಾರ ಒಣಕಸ ಮಾತ್ರ ನೀಡಬೇಕು. ಹಾಗಾದರೆ, ಆ ದಿನದ ಹಸಿಕಸವನ್ನು ಏನು ಮಾಡಬೇಕು ಎನ್ನುವ ಚಿಂತೆ ಕಾಡುವುದು ಸಹಜ. ಏಕೆಂದರೆ ಹೆಚ್ಚು ಜನರಿರುವ ಮನೆಯಲ್ಲಿ ಪ್ರತಿದಿನವೂ ದೊಡ್ಡ ಪ್ರಮಾಣದಲ್ಲಿ ಹಸಿ ಕಸ ಸೃಷ್ಟಿಯಾಗುವ ಕಾರಣ ಅದನ್ನು 48 ಗಂಟೆ ಮನೆಯಲ್ಲಿಯೇ ಇಟ್ಟರೆ ಗಬ್ಬುವಾಸನೆ ಬಂದು ಇನ್ನಿಲ್ಲದ ಕಿರಿಕಿರಿಗೂ ಕಾರಣವಾಗಬಹುದು.

Advertisement

ಯಾವ ಮನೆ ಅಥವಾ ಸಮುಚ್ಚಯ ದವರಿಗೆ ಕಸ ನೀಡಲು ಸಾಧ್ಯವಿಲ್ಲವೊ ಅಂಥವರು ಅದನ್ನು ಕಾಂಪೋಸ್ಟ್‌ ಮಾಡಿ ಗೊಬ್ಬರ ತಯಾರಿಸುವ ಪರಿಹಾರವನ್ನು ಉಲ್ಲೇಖೀಸಲಾಗಿದೆ. ಆದರೆ ಎಲ್ಲರಿಗೂ ಮನೆಯಲ್ಲೇ ಕಾಂಪೋಸ್ಟ್‌ ವ್ಯವಸ್ಥೆ ಮಾಡಲು ಸಾಧ್ಯವೇ?

ಪಾಲಿಕೆಯು ಈ ಹೊಸ ಮಾದರಿಯ ಕಸ ಸಂಗ್ರಹದ ಸಾಧಕ-ಬಾಧಕಗಳನ್ನು ಗಂಭೀರವಾಗಿ ಪರಿಗಣಿಸಿ ವಾಸ್ತವದಲ್ಲಿ ಪರ್ಯಾಯ ವ್ಯವಸ್ಥೆ ಮಾಡದೆ ಹೋದರೆ ಭವಿಷ್ಯದಲ್ಲಿ ನಗರದ ಸಮಗ್ರ ಸ್ವತ್ಛತೆಗೆ ಮತ್ತಷ್ಟು ಸವಾಲು ಉಂಟಾಗಬಹುದು.

ಮತ್ತೆ ಬೀದಿ ಬದಿ ಕಸ ಸಮಸ್ಯೆ ಆತಂಕ
ಮನೆಗಳಿಂದ ತ್ಯಾಜ್ಯ ಸಂಗ್ರಹ ಆರಂಭವಾದ ಬಳಿಕ ನಗರದಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆಯುವ ಸಮಸ್ಯೆ ಬಹು ತೇಕ ಕಡಿಮೆಯಾಗಿತ್ತು ಇದೀಗ ಪಾಲಿಕೆಯ ಹೊಸ ನಿಯಮದಿಂದಾಗಿ ಉಂಟಾಗಿರುವ ಗೊಂದದಿಂದ ರಸ್ತೆ, ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತೆ ಕಸ ಬೀಳುವ ಆತಂಕವಿದೆ. ಈ ನಿಟ್ಟಿನಲ್ಲಿ ಪಾಲಿಕೆ ಸೂಕ್ತ ಪರಿಹಾ ರೋಪಾಯಗಳ ಬಗ್ಗೆ ಯೋಚಿಸ ಬೇಕೆಂಬುದು ಜನರ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next