ಮಹಾನಗರ: ಇನ್ನೇನು ಮಳೆಗಾಲ ಸಮೀಪಿಸುತ್ತಿದ್ದು, ಪ್ರಯಾಣಿ ಕರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಗರದ 15 ಕಡೆಗಳಲ್ಲಿ ಬಿಒಟಿ (ಬಿಲ್ಡ್ ಆಪರೇಟ್ ಟ್ರಾನ್ಸ್‌ಫರ್) ಮಾದರಿಯಲ್ಲಿ ಸ್ಮಾರ್ಟ್ ಬಸ್ ಶೆಲ್ಟರ್ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ. ನಗರದಲ್ಲಿ ಮೂರು ಪ್ಯಾಕೇಜ್‌ಗಳ ಮೂಲಕ ಬಸ್ ಶೆಲ್ಟರ್ ನಿರ್ಮಾಣವಾಗಲಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಬಿಒಟಿ ಮಾದರಿಯಲ್ಲಿ ನೆಲ ಬಾಡಿಗೆ ಮೇಲೆ ವಾರ್ಷಿಕ ಸರಾಸರಿ ಪ್ರತೀ ಬಸ್ ಶೆಲ್ಟರ್‌ಗೆ 30,000 ರೂ. ವೆಚ್ಚದಲ್ಲಿ ಪಾಲಿಕೆಯು ಟೆಂಡರ್ ಆಹ್ವಾನಿಸಿದೆ. 3 ವರ್ಷಗಳ ಅವಧಿಯವರೆಗೆ ನಿರ್ವಹಣೆ ನಡೆಸಿ ಬಳಿಕ ಪಾಲಿಕೆಗೆ ಹಸ್ತಾಂತರಿಸಬೇಕು ಎಂಬ ಕರಾರು ಹೊಂದಿದೆ.
ಸುದಿನ ವರದಿ ಮಾಡಿತ್ತು
‘ನಗರದಲ್ಲಿ ಬಸ್ ತಂಗುದಾಣದ ಅಗತ್ಯವಿದೆ’ ಎಂಬ ಬಗ್ಗೆ ‘ಉದಯವಾಣಿ ಸುದಿನ’ ಈಗಾಗಲೇ ವಿಶೇಷ ವರದಿ ಪ್ರಕಟಿಸಿದೆ. ನಗರದ ಕೆಲವೊಂದು ಕಡೆಗಳಲ್ಲಿ ರಸ್ತೆ ಅಭಿವೃದ್ಧಿ, ವಿಸ್ತರಣೆ ಉದ್ದೇಶದಿಂದ ತಂಗುದಾಣವನ್ನು ಕೆಡಹಲಾಗಿದ್ದು, ಮರು ನಿರ್ಮಾಣ ಮಾಡಲಾಗಿಲ್ಲ. ಈ ಕುರಿತು ಈ ಹಿಂದೆ ವಿಶೇಷ ವರದಿ ಪ್ರಕಟಿಸಿದ್ದು, ಕೆಲವೊಂದು ಕಡೆ ಮರು ಬಸ್ ಶೆಲ್ಟರ್ ನಿರ್ಮಾಣ ಕಾರ್ಯ ಪಾಲಿಕೆ ಕೈಗೊಂಡಿತ್ತು. ಇನ್ನುಳಿದ ಕಡೆಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಇದೀಗ ಪಾಲಿಕೆ ಮುಂದಾಗಿದೆ.
ಏನೆಲ್ಲ ಇರಲಿದೆ
ನೂತನ ಬಸ್ ತಂಗುದಾಣಗಳು ನಿರ್ಮಲ ನಗರ ವಿಧಾನಗಳ ನಮೂನೆಯಲ್ಲಿ ನಿರ್ಮಾಣಗೊಳ್ಳಲಿದ್ದು, ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತದೆ. ಬಸ್ ಶೆಲ್ಟರ್ ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. ಶೌಚಾಲಯ ವ್ಯವಸ್ಥೆ ಹೊಂದಿರಲಿದ್ದು, ಪಾಲಿಕೆ ವ್ಯಾಪ್ತಿ ಸಂಚರಿಸುವ ಸಿಟಿ ಬಸ್‌ಗಳ ಬಸ್ ರೂಟ್ ನಂಬರ್, ಬಸ್ ಹಾದುಹೋಗುವ ಮುಖ್ಯ ಸ್ಥಳಗಳ ವಿವರಗಳನ್ನು ಡಿಜಿಟಲ್ ಮಾದಿಯಲ್ಲಿ ಕಲ್ಪಿಸಲಾಗುತ್ತದೆ. ರಸ್ತೆ ಮಾರ್ಗದ ವಿವರ, ಕಸದ ಬುಟ್ಟಿಯನ್ನು ಅಳವಡಿಸಿ, ಸ್ವತ್ಛತೆಗೆ ಗಮನ ನೀಡಲಾಗುತ್ತದೆ.
ಮೂಲ ಸೌಕರ್ಯಕ್ಕೆ ಒತ್ತು
ನಗರದ ಮೂಲ ಸೌಕರ್ಯಗಳಿಗೆ ಪಾಲಿಕೆಯಿಂದ ಆದ್ಯತೆ ನೀಡಲಾಗುವುದು. ರಸ್ತೆ ವಿಸ್ತರಣೆ, ಅಭಿವೃದ್ಧಿ ಉದ್ದೇಶದಿಂದ ಕೆಲವೊಂದು ಬಸ್ ತಂಗುದಾಣಗಳನ್ನು ಕೆಡಹಲಾಗಿದೆ. ಕೆಲವು ಅಗತ್ಯ ಪ್ರದೇಶಗಳಲ್ಲಿ ಬಸ್ ಶೆಲ್ಟರ್ ಇಲ್ಲ. ಇನ್ನು ಮಳೆಗಾಲ ಆರಂಭವಾಗಲಿದ್ದು, ಹಾಗಾಗಿ ನಗರದ 15 ಕಡೆಗಳಲ್ಲಿ ಬಸ್ ಶೆಲ್ಟರ್‌ಗಳನ್ನು ಬಿಒಟಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದು.
– ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್
ನವೀನ್ ಭಟ್ ಇಳಂತಿಲ