Advertisement

ಬೀದಿನಾಯಿ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಚಿಕಿತ್ಸೆ

12:14 PM May 16, 2022 | Team Udayavani |

ಮಹಾನಗರ: ಬೀದಿ ನಾಯಿಗಳ ನಿಯಂತ್ರಣದ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯು ವಾರ್ಡ್‌ ಮಟ್ಟದಲ್ಲಿ ಯೋಜನೆ ರೂಪಿಸಲಾಗಿದ್ದು, ಒಂದು ವರ್ಷದಲ್ಲಿ 1,500ಕ್ಕೂ ಹೆಚ್ಚಿನ ಶ್ವಾನಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲಾಗಿದೆ.

Advertisement

ನಗರದ ಕೆಲವೊಂದು ಕಡೆಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದ್ದು, ಕೆಲವೆಡೆ ಗುಂಪು ಗುಂಪಾಗಿ ದಾಳಿ ಮಾಡುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆಯು ಶಕ್ತಿನಗರದ ಎನಿಮಲ್‌ ಕೇರ್‌ ಟ್ರಸ್ಟ್‌ಸಹಯೋಗದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಬೀದಿನಾಯಿಗಳನ್ನು ಬಲೆಯನ್ನು ಉಪಯೋಗಿಸಿ ಹಿಡಿಯಲಾಗುತ್ತದೆ. ಬಳಿಕ ಶಕ್ತಿನಗರದಲ್ಲಿರುವ ಎನಿಮಲ್‌ ಕೇರ್‌ ಸಂಸ್ಥೆಗೆ ತಲುಪಿಸಲಾಗುತ್ತದೆ. ಒಂದು ವಾರಗಳಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಬಳಿಕ ಯಾವ ಪ್ರದೇಶದಿಂದ ನಾಯಿಗಳನ್ನು ಹಿಡಿದು ತರಲಾಗಿತ್ತೋ, ಅಲ್ಲೇ ಮರಳಿ ಬಿಡಲಾಗುತ್ತದೆ. ಈ ಸಮಯದಲ್ಲಿ ನಾಯಿಗಳಿಗೆ ರೇಬಿಸ್‌ ಚುಚ್ಚುಮದ್ದು ಕೂಡ ನೀಡಲಾಗುತ್ತದೆ. ಅಲ್ಲದೆ ಶಸ್ತ್ರಚಿಕಿತ್ಸೆ ನಡೆಸಿದ ನಾಯಿಯ ಎಡ ಕಿವಿಯಲ್ಲಿ “ವಿ’ ಆಕಾರದಲ್ಲಿ ಮಾರ್ಕ್‌ ಮಾಡಲಾಗುತ್ತದೆ.

ಬೀದಿನಾಯಿಗಳ ಕಾಟ

ಉರ್ವ, ಇನ್ಫೋಸಿಸ್‌, ಕೊಟ್ಟಾರ ಕ್ರಾಸ್‌, ಕೋಡಿಕಲ್‌, ನಂತೂರು, ಮಾರ್ಕೆಟ್‌ ಸಹಿತ ಇನ್ನಿತರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ. ಕೆಲವು ಕಡೆಗಳಲ್ಲಿ ರಾತ್ರಿ ಆದಂತೆ ಗುಂಪಾಗಿ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತದೆ. ಅಕಸ್ಮಾತ್‌ ಮನೆಗಳಲ್ಲಿ ಬಾಗಿಲು ತೆರೆದಿಟ್ಟಲ್ಲಿ ಮನೆಯ ಒಳಗಡೆ ಬಂದು ಉಪಟಳ ಕೊಡುತ್ತದೆ. ಈ ಸಮಸ್ಯೆಗಳಿಂದ ರೋಸಿ ಹೋದ ಕೋಡಿಕಲ್‌ ಪರಿಸರದ ಸಾರ್ವಜನಿಕರು ಈ ಹಿಂದೆ ಉರ್ವ ಪೊಲೀಸ್‌ ಠಾಣೆ, ಪಾಲಿಕೆಗೂ ಕೂಡ ಮನವಿ ಸಲ್ಲಿಸಿದ್ದರು.

ಪರವಾನಿಗೆ ಪಡೆದದ್ದು ಬೆರಳೆಣಿಕೆಯಷ್ಟು

Advertisement

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆಯಲ್ಲಿ ನಾಯಿಗಳನ್ನು ಸಾಕಲು ಪರವಾನಗಿ ಪಡೆಯಬೇಕು ಎಂದು ಎಂಬ ನಿರ್ಣಯವನ್ನು ಕೆಲವು ವರ್ಷಗಳ ಹಿಂದೆ ನಡೆದ ಮನಪಾ ಸಭೆಯಲ್ಲಿ ಕೈಗೊಳ್ಳಲಾಗಿತ್ತು. 2016ರಲ್ಲಿಯೇ ಡಾಗ್‌ ವೆಲ್‌ಫೇರ್‌ ಸಮಿತಿ ಹಾಗೂ ಡಾಗ್‌ ಲೈಸನ್ಸ್‌ ಸಮಿತಿಯನ್ನು ಕೂಡ ರಚನೆ ಮಾಡಿತ್ತು. ಆದರೆ ಈ ನಿಯಮ ಪಾಲಿಕೆ ವ್ಯಾಪ್ತಿಯಲ್ಲಿ ಪಾಲನೆಯಾಗುತ್ತಿಲ್ಲ. ಪಾಲಿಕೆ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಮನೆಗಳಲ್ಲಿ ನಾಯಿ ಸಾಕಲು ನಗರದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪರವಾನಗಿ ಪಡೆದಿದ್ದಾರೆ.

ಬೀದಿ ನಾಯಿಗಳ ನಿಯಂತ್ರಣಕ್ಕೆ ವಿವಿಧ ಕ್ರಮ

ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣದ ನಿಟ್ಟಿನಲ್ಲಿ ಪಾಲಿಕೆ ವಿವಿಧ ಕ್ರಮ ಅಳವಡಿಸಿದ್ದು, ಅದರಂತೆ ಎನಿಮಲ್‌ ಕೇರ್‌ ಸಂಸ್ಥೆಯ ಸಹಯೋಗದಲ್ಲಿ ಶ್ವಾನಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲಾಗುತ್ತಿದೆ. ನಗರದಲ್ಲಿ ಬೀದಿ ನಾಯಿಗಳಿಂದ ಆಗುವ ಉಪಟಳದ ಕುರಿತು ಪಾಲಿಕೆಗೂ ದೂರುಗಳು ಬರುತ್ತಿದ್ದು, ಆ ಮಾಹಿತಿಯನ್ನು ಸಂಸ್ಥೆಗೆ ನೀಡಲಾಗುತ್ತದೆ. – ಡಾ| ಮಂಜಯ್ಯ ಶೆಟ್ಟಿ, ಪಾಲಿಕೆ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next