ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಬೆಂಗಳೂರಿನಿಂದ ಮೈಸೂರಿಗೆ ರಾಜ್ಯ ಸರಕಾರದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನಾ ಪಾದಯಾತ್ರೆಗೆ ಪೊಲೀಸರು ಅನುಮತಿ ನೀಡುವುದಿಲ್ಲ, ಆದರೆ ಆದರೆ ಅವರನ್ನು ತಡೆಯುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಸೋಮವಾರ ಹೇಳಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA)ದಿಂದ ನಿವೇಶನ ಹಂಚಿಕೆಯಲ್ಲಿ ಮಾಡಿರುವ ವಂಚನೆ ಖಂಡಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಆಗಸ್ಟ್ 3 ರಿಂದ 10 ರವರೆಗೆ ಪಾದಯಾತ್ರೆ ನಡೆಸಲಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ. ಪರಮೇಶ್ವರ ‘ಪಾದಯಾತ್ರೆಗೆ ನಾವು ಅನುಮತಿ ನೀಡುವುದಿಲ್ಲ, ಅವರು ಮಾಡಲಿ, ಬೇಡ ಎನ್ನುವುದಿಲ್ಲ, ಆದರೆ ಪೊಲೀಸ್ ಇಲಾಖೆ ಅಧಿಕೃತವಾಗಿ ಅನುಮತಿ ನೀಡುವುದಿಲ್ಲ. ಅವರು, ಪ್ರತಿಭಟನೆ ಮಾಡಲಿ. ಹಲವಾರು ಕಾನೂನು ವಿಷಯಗಳಿರುತ್ತವೆ ಆದ್ದರಿಂದ ನಾವು ಅನುಮತಿ ನೀಡುವುದಿಲ್ಲ. ನಾವು ಪಾದಯಾತ್ರೆ ನಡೆಸಿದಾಗ ಬಿಜೆಪಿ ಅಧಿಕಾರದಲ್ಲಿತ್ತು, ಆಗ ನಮಗೂ ಅನುಮತಿ ನೀಡಲಿಲ್ಲ. ನಾವೂ ಅನುಮತಿ ಇಲ್ಲದೆ ಮಾಡಿದ್ದೇವೆ. ನಾವು ಅವರನ್ನು ತಡೆಯುವುದಿಲ್ಲ.ನಾವು ಅನುಕೂಲ ಮಾಡಿಕೊಡುತ್ತೇವೆ ಮತ್ತು ಅವರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದರು.
ಪ್ರತಿಪಕ್ಷಗಳ ಪಾದಯಾತ್ರೆಯನ್ನು ಎದುರಿಸಲು ಕಾಂಗ್ರೆಸ್ ಯಾವುದೇ ಯೋಜನೆ ರೂಪಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಣತಂತ್ರ ರೂಪಿಸುತ್ತಿದ್ದಾರೆ.ನಾವು ಪಾದಯಾತ್ರೆಯನ್ನು ಎದುರಿಸಬೇಕಾಗುತ್ತದೆ. ಅವರು ರಾಜಕೀಯ ಮಾಡುತ್ತಿದ್ದಾರೆ ಹಾಗಾಗಿ ನಾವೂ ರಾಜಕೀಯ ಮಾಡಬೇಕಾಗಿದೆ. ನಾವು ಅದನ್ನು ಪಕ್ಷದಿಂದ ಮಾಡುತ್ತೇವೆ, ಸರ್ಕಾರವನ್ನು ಬಳಸಿಕೊಂಡು ಅಲ್ಲ”ಎಂದರು.