ಪಾಂಡವಪುರ (ಮಂಡ್ಯ): ಪಟ್ಟಣದ ಆರೆಸ್ಸೆಸ್ ಕಚೇರಿಗೆ ರವಿವಾರ ರಾತ್ರಿ ಪೊಲೀಸರು ಬೂಟು ಧರಿಸಿಕೊಂಡೇ ನುಗ್ಗಿ ಸಂಘದ ಪ್ರಚಾರಕರು ಹಾಗೂ ಸ್ವಯಂ ಸೇವಕರನ್ನು ಎಳೆದಾಡಿ ದಾಂಧಲೆ ಮಾಡಿದ್ದಾರೆ ಎಂದು ಆರೋಪಿಸಿ ಆರೆಸ್ಸೆಸ್ ಹಾಗೂ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸೋಮವಾರ ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ಬೆಳಗ್ಗೆ 11ಕ್ಕೆ ಆಗಮಿಸಿ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಡಿವೈಎಸ್ಪಿ ಮುರಳಿ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ವಿವೇಕಾನಂದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅಮಾನತಿಗೆ ಆಗ್ರಹಿಸಿದರು.
ಪ್ರತಿಭಟನ ಸ್ಥಳದಲ್ಲಿಯೇ ಅಡುಗೆ ಮಾಡಿ ಮಧ್ಯಾಹ್ನದ ಊಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನ ಸ್ಥಳಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ| ಅಶ್ವತ್ಥನಾರಾಯಣ, ಮಾಜಿ ಸಚಿವ ಡಾ| ಕೆ.ಸಿ. ನಾರಾಯಣ ಗೌಡ ಸಹಿತ ಹಲವರು ಭೇಟಿ ನೀಡಿ ಪ್ರತಿಭಟನೆಗೆ ಸಾಥ್ ನೀಡಿದರು. ಪೊಲೀಸರು ಕಚೇರಿ ಮೇಲೆ ದಾಳಿ ಮಾಡುವ ವೇಳೆಗೆ ಅಲ್ಲಿಂದ ಶರಣ್ ಪಂಪುವೆಲ್ ಮತ್ತಿತರರು ತೆರಳಿ ಆಗಿತ್ತು ಎನ್ನಲಾಗಿದೆ.
ಹೊರ ಜಿಲ್ಲೆ ಪೊಲೀಸ್ ಅಧಿಕಾರಿಗಳಿಂದ ತನಿಖೆ
ಪ್ರತಿಭಟನ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪ್ರತಿಭಟನಕಾರರೊಂದಿಗೆ ಚರ್ಚಿಸಿದರು. ಪ್ರಕರಣ ಸಂಬಂಧದ ಲಿಖಿತ ಮನವಿಯನ್ನು ಮೇಲಧಿ ಕಾರಿಗಳ ಗಮನಕ್ಕೆ ತಂದು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಒಪ್ಪದ ಕಾರ್ಯಕರ್ತರು ಡಿವೈಎಸ್ಪಿ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ವೈಎಸ್‌ಪಿ ಮುರಳಿ ಹಾಗೂ ಸರ್ಕಲ್ ಇನ್‌ಪೆಕ್ಟರ್ ವಿವೇಕಾನಂದ ಅವರನ್ನು ಬೇರೆಡೆಗೆ ನಿಯೋಜನೆ ಮಾಡಿ, ಹೊರ ಜಿಲ್ಲೆಯ ಪೊಲೀಸ್ ಅ ಧಿಕಾರಿಗಳಿಂದ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ಮೇರೆಗೆ ಪ್ರತಿಭಟನೆ ವಾಪಸ್ ಪಡೆಯಲಾಯಿತು.