ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಛೋಟಿಪುರದಲ್ಲಿ ಕಾಶ್ಮೀರ ಪಂಡಿತ್ ಸುನೀಲ್ ಕುಮಾರ್ ಭಟ್ ಅವರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದ ಪ್ರಕರಣದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಜಮ್ಮು-ಕಾಶ್ಮೀರ ಸರ್ಕಾರ ಮುಂದಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆ : ಸಿಎಂ ಜೊತೆ ಚರ್ಚಿಸಿ ತೀರ್ಮಾನ : ಸಚಿವ ಅಶೋಕ್
ಕಾಶ್ಮೀರಿ ಪಂಡಿತ್ ಸುನೀಲ್ ಕುಮಾರ್ ಭಟ್ ಅವರ ಹತ್ಯೆಯ ಪ್ರಕರಣದಲ್ಲಿ ಶಾಮೀಲಾಗಿರುವ ಉಗ್ರ ಅದಿಲ್ ವಾನಿಯ ಮನೆಯನ್ನು ಜಪ್ತಿ ಮಾಡುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದಾರೆ ಎಂದು ವರದಿ ವಿವರಿಸಿದೆ.
ಮಂಗಳವಾರ ಶೋಪಿಯಾನ್ ನಲ್ಲಿ ತಮ್ಮ ಸೇಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಕುಮಾರ್ ಭಟ್ ಅವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಅವರ ಸಹೋದರ ಪಿಂಟು ಕುಮಾರ್ ಭಟ್ ಘಟನೆಯಲ್ಲಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾಶ್ಮೀರಿ ಪಂಡಿತರ ಮೇಲಿನ ದಾಳಿಯನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಜಮ್ಮು ಕಾಶ್ಮೀರ ಪೊಲೀಸರು ಭಯೋತ್ಪಾದಕ ವಾಣಿಯ ತಂದೆ ಮತ್ತು ಆತನ ಮೂವರು ಸಹೋದರರನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಕಾಶ್ಮೀರಿ ಪಂಡಿತರ ಮೇಲೆ ದಾಳಿ ನಡೆಸಿದ ನಂತರ ವಾನಿ ಕುಟಾಪೋರಾ ಪ್ರದೇಶದ ಮನೆಯಲ್ಲಿ ಆಶ್ರಯ ಪಡೆದಿದ್ದ. ಈ ಮಾಹಿತಿ ಪಡೆದ ಭದ್ರತಾ ಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವಾನಿ ಭದ್ರತಾ ಪಡೆ ಮೇಲೆ ಗ್ರೆನೇಡ್ ಎಸೆದು ಪರಾರಿಯಾಗಿರುವುದಾಗಿ ಮೂಲಗಳು ವಿವರಿಸಿವೆ.