ಬಳ್ಳಾರಿ: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕುಟುಂಬ, ಮಕ್ಕಳೆನ್ನದೇ ಜನರ ಸೇವೆಗಾಗಿ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸರ ತ್ಯಾಗ, ಸೇವಾ ಮನೋಭಾವ ಶ್ರೇಷ್ಠವಾದುದಾಗಿದ್ದು, ಅದು ಎಲ್ಲರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೃಷ್ಣ ಬಿ.ಅಸೋಡೆ ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮರಾದಪೊಲೀಸರಿಗೆ ಪುಷ್ಪಗುತ್ಛ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆ ಸಿಬ್ಬಂದಿ ಸಮಯದ ನಿಗದಿ ಇಲ್ಲದಂತೆ ಕೆಲಸ ಮಾಡುತ್ತಾರೆ. ನ್ಯಾಯಾಲಯದಲ್ಲಿ ನಾವು ಹೊರೆ ಇರುವುದನ್ನು ಪಾಲಿಸುವುದು ಪೊಲೀಸರು ಎಂದರು.
ಇದೇ ವೇಳೆ ಪೊಲೀಸರು ಸಹ ನ್ಯಾಯಾಧೀಶರೇ ಎಂದು ಸಂಬೋಧಿಸಿದ ನ್ಯಾಯಾಧಿಧೀಶ ಅಸೋಡೆ ಅವರು ಜನರಿಗೆ ತಮಗೆ ಸಮಸ್ಯೆಯಾದರೆ ಮೊದಲು ಪೊಲೀಸರನ್ನೇ ನೆನಪಿಸಿಕೊಂಡು ಅವರ ಹತ್ತಿರ ಬರುತ್ತಾರೆ ಎಂದರು. ಜನಸಾಮಾನ್ಯರ ಆಸ್ತಿ ಪಾಸ್ತಿ ಸುಭದ್ರವಾಗಿರಲು ಕಾರಣ ಪೊಲೀಸರು. ಜನಸಾಮಾನ್ಯರೂ ಕೂಡ ಪೊಲೀಸರನ್ನು ಗೌರವಿಸಿ, ಅಗತ್ಯ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದರು.
ಕುಖ್ಯಾತರನ್ನು ಬಂಧಿಸಲು ಬಹಳಷ್ಟು ಬಾರಿ ಪ್ರಾಣ ಕಳೆದುಕೊಂಡ ಪ್ರಸಂಗಗಳು ನಡೆದಿವೆ. ಪೊಲೀಸರ ತ್ಯಾಗ ಮತ್ತು ಬಲಿದಾನಗಳು ಎಂದಿಗೂ ವ್ಯರ್ಥವಾಗಬಾರದು. ಹುತಾತ್ಮರಿಗೆ ಸರಿಯಾದ ಪರಿಹಾರ ನೀಡಿ, ಅವರ ಕುಟುಂಬಕ್ಕೆ ನೆರವಾಗಬೇಕು. ಹಿರಿಯ ಅಧಿಕಾರಿಗಳು ಹುತಾತ್ಮ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಲು ಕ್ರಮವಹಿಸಬೇಕು ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಮಾತನಾಡಿ, ಭಾರತದಲ್ಲಿ ಈ ವರ್ಷ 264 ಪೊಲೀಸರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿಯೇ ಮರಣಹೊಂದಿದ್ದು, ಅದರಲ್ಲಿ ಕರ್ನಾಟಕದ 17 ಜನರು ಇದ್ದಾರೆ ಎಂದರು.
ಕೋವಿಡ್ ಎಂಬ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಆಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅನೇಕರು ಕರ್ತವ್ಯ ಸಂದರ್ಭದಲ್ಲಿಯೇ ಸೋಂಕು ತಗುಲಿ ಮರಣಹೊಂದಿದ್ದಾರೆ. ಬಳ್ಳಾರಿಯಲ್ಲಿಯೂ ಸಹ 9 ಜನ ಪೊಲೀಸ್ ಸಿಬ್ಬಂದಿ ಮರಣಹೊಂದಿದ್ದಾರೆ ಎಂದರು. ಇದೇ ವೇಳೆ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿಗಳು, ಸಿಪಿಐಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.