ಯಾದಗಿರಿ: ಕೋವಿಡ್, ಪ್ರವಾಹ ಸಂದರ್ಭಲ್ಲಿ ಪೊಲೀಸರು ಸಲ್ಲಿಸಿದ ಕರ್ತವ್ಯ ಸೇವೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಜಿಲ್ಲಾ ಧಿಕಾರಿ ಡಾ. ರಾಗಪ್ರಿಯಾ ಪೊಲೀಸರ ಕಾರ್ಯ ಶ್ಲಾಘಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೋವಿಡ್ ಹಾಗೂ ನೆರೆ ಪ್ರವಾಹ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಸೇರಿದಂತೆ ಸಾರ್ವಜನಿಕರ ಹಿತಕಾಪಾಡುವ ಪೊಲೀಸರೊಂದಿಗೆ ಕಾನೂನುಪಾಲನೆಗೆ ನಾವೆಲ್ಲ ಅಗತ್ಯ ಸಹಕಾರ ನೀಡಲು ಮನವಿ ಮಾಡಿದರು.
1959ರ ಅ. 21ರಂದು ಲಡಾಕ್‌ನಲ್ಲಿ ಕರ್ತವ್ಯಪಾಲನೆಯ ಸಂದರ್ಭದಲ್ಲಿ 10 ಜನ ಪೊಲೀಸರು ಹುತಾತ್ಮರಾದ ದಿನದ ಸ್ಮರಣಾರ್ಥವಾಗಿ ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಋಷಿಕೇಶ ಸೋನವಣೆ ಮಾತನಾಡಿ, ಚೀನಾ-ಭಾರತ ಗಡಿ ಭಾಗದ ಹಾಟ್ ಸ್ಟ್ರೀಗ್ ಪೋಸ್ಟ್ ಹತ್ತಿರ ಸಿಆರ್‌ಪಿಎಫ್ ಡಿಎಸ್‌ಪಿ ಕರಣಸಿಂಗ್‌ನೇತೃತ್ವದಲ್ಲಿ ಪೊಲೀಸ್‌ದಳವು ಪಹರೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಡೆದ ದಾಳಿಯ ಕುರಿತು ವಿವರಿಸಿದರು.
ಈ ದಿನವನ್ನು ದೇಶಾದ್ಯಂತ ಎಲ್ಲಾ ಜಿಲ್ಲಾ ಪೊಲೀಸ್ ಕೇಂದ್ರ ಸ್ಥಾನಗಳಲ್ಲಿ ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು. ಯಾದಗಿರಿ, ಸುರಪುರ ವಿಭಾಗದ ಡಿವೈಎಸ್‌ಪಿ ವೆಂಕಟೆಶ ಉಗಿಬಂಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು ಸೇರಿದಂತೆ ಮಾಧ್ಯಮದವರು, ಹುತಾತ್ಮ ಪೊಲೀಸರ ಕುಟುಂಬ ಸದಸ್ಯರು,ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಅಧಿಕಾರಿಗಳು ಪುಷ್ಪಗುಚ್ಚ ಅರ್ಪಿಸಿ ನಮನ ಸಲ್ಲಿಸಿದರು.
ಪೊಲೀಸ್ ಹುತಾತ್ಮರ ಗೌರವ ಸೂಚಕವಾಗಿ ಪರೇಡ್ ಕಮಾಂಡರ್ ಆರ್‌ಎಸ್‌ಐ ಚಂದ್ರಶೇಖರ ನೇತೃತ್ವದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ ನಂತರ ಮೌನಾಚರಣೆ ಮಾಡಲಾಯಿತು. ಪೇದೆ ಸಂತೋಷ ಎಂ. ಜಯಕರ್ ನಿರೂಪಿಸಿದರು