ಬೆಂಗಳೂರು: ನಗರಾದ್ಯಂತ ಹೊಸವರ್ಷಾಚರಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಕೆಲ ಮಂದಿಗೆ ವಿಶೇಷ ಉಡುಗೊರೆ ನೀಡಿದೆ. ಕಳುವಾಗಿದ್ದ ಚಿನ್ನಾಭರಣಗಳನ್ನು ನ್ಯಾಯಾಲಯದ ಸೂಚನೆ ಮೇರೆಗೆ ಮಾಲೀಕರ ಮನೆಗೆ ತಲುಪಿಸಿದೆ. ಈ ವಿನೂತನ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು ಡಿ.31ರ ರಾತ್ರಿ ಎಸಿಪಿ ಮತ್ತು ಇನ್‌ಸ್ಪೆಕ್ಟರ್ ಮೂಲಕ ಕಳ್ಳರಿಂದ ವಶಕ್ಕೆ ಪಡೆದು ಚಿನ್ನಾಭರಣಗಳನ್ನು ಮಾಲೀಕರಿಗೆ ಮರಳಿಸಿದರು. ನ್ಯಾಯಾಲಯದ ಅನುಮತಿ ಪಡೆದು ಯಲಹಂಕ ಠಾಣೆ ಇನ್‌ಸ್ಪೆಕ್ಟರ್ ಮಂಜೇಗೌಡ, ತಮ್ಮ ಠಾಣೆ ವ್ಯಾಪ್ತಿಯಲ್ಲಿ 40 ಗ್ರಾಂ ಚಿನ್ನಾಭರಣ ಕಳವು ಮಾಡಿಕೊಂಡಿದ್ದ ಹುಣಸಮಾರನಹಳ್ಳಿ ನಿವಾಸಿ ವೆಂಕಟೇಶ್ವರಲು ದಂಪತಿಗೆ ಹಿಂದಿರುಗಿಸಿದ್ದಾರೆ.
ಇನ್ನು ಮೈಕೋ ಲೇಔಟ್ ವಿಭಾಗದ ಎಸಿಪಿ ಕರಿಬಸವೇಗೌಡ ಹಾಗೂ ಬೊಮ್ಮನಹಳ್ಳಿ ಇನ್‌ಸ್ಪೆಕ್ಟರ್ ರಾಜೇಶ್ ಕೋಟ್ಯಾನ್, ನಂದಕಿಶೋರ್ ಎಂಬುವರ ಮನೆಗೆ ತೆರಳಿ ಮೂರು ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿದ್ದಾರೆ. ತಡರಾತ್ರಿ ಏಕಾಏಕಿ ಹಿರಿಯ ಅಧಿಕಾರಿಗಳು ಬಂದು ಮನೆ ಬಾಗಿಲು ತಟ್ಟಿದ್ದರಿಂದ ಆತಂಕಗೊಂಡ ಸಾರ್ವಜನಿಕರು ಒಂದು ಕ್ಷಣ ಕಕ್ಕಾಬಿಕ್ಕಿಯಾದರು. ಕೊನೆಗೆ ಅಧಿಕಾರಿಗಳ ಗಾಬರಿ ಆಗುವ ಅಗತ್ಯವಿಲ್ಲ. ನೀವು ಕಳವು ಮಾಡಿಕೊಂಡಿರುವ ವಸ್ತುಗಳನ್ನು ಹಿಂದಿರುಗಿಸಲು ಬಂದಿದ್ದೇವೆ ಎಂದು ಹೇಳಿದ ಬಳಿಕ ನಿರಾಳರಾಗಿದ್ದಾರೆ.
ಒಂದೇ ದಿನ 1,367 ಪ್ರಕರಣ: ಹೊಸವರ್ಷಾಚರಣೆ ದಿನದಂದು(ಡಿ.31) ನಗರಾದ್ಯಂತ 1,367 ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ವರ್ಷಕ್ಕೆ ಹೊಲಿಕೆ ಮಾಡಿದರೆ ಈ ಬಾರಿ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣ ಶೇಕಡ ಪ್ರಮಾಣದಲ್ಲಿ ಅಧಿಕಗೊಂಡಿದೆ. ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಸಂಭವಿಸುವ ಅಪಘಾತ ತಡೆಗಟ್ಟಲು ನಗರ ಪೊಲೀಸರು, ಫ್ಲೈಓವರ್ ಬಂದ್ ಮಾಡಿದ್ದಲ್ಲದೇ, ವಿಶೇಷ ತಂಡ ರಚಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದರು.
ಈ ಹಿನ್ನೆಲೆಯಲ್ಲಿ ನಗರದ ವಿವಿಧ ಠಾಣೆಗಳಲ್ಲಿ ಒಟ್ಟು 1,367 ಮಂದಿ ಪಾನಮತ್ತ ಚಾಲಕರನ್ನು ಹಿಡಿದು ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ತಿಳಿಸಿದ್ದಾರೆ. ಈ ಪೈಕಿ ಪೂರ್ವ ವಿಭಾಗದಲ್ಲಿ 624 ಪ್ರಕರಣ, ಪಶ್ಚಿಮ ವಿಭಾಗದಲ್ಲಿ 605 ಪ್ರಕರಣ ದಾಖಲಾಗಿದೆ. ಉತ್ತರ ವಿಭಾಗದಲ್ಲಿ 138 ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.