ಹೈದರಾಬಾದ್: ಭಾರತ-ಆಸ್ಟ್ರೇಲಿಯ ನಡುವಿನ 3ನೇ ಟಿ20 ಪಂದ್ಯದ ಟಿಕೆಟ್ ಮಾರಾಟದ ಅವ್ಯವಸ್ಥೆ ಮುಂದುವರಿದಿದ್ದು, ಹೈದರಾಬಾದ್ ಕ್ರಿಕೆಟ್ ಮಂಡಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಗುರುವಾರದಿಂದ ಜಿಮ್ಖಾನಾ ಮೈದಾನದಲ್ಲಿ ಪಂದ್ಯದ ಟಿಕೆಟ್ ಮಾರಾಟವನ್ನು ಆರಂಭಿಸಲಾಗಿತ್ತು.
ಟಿಕೆಟ್‌ಗಾಗಿ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ಆರಂಭದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲೇ ಇತ್ತು. ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಮಿತಿಮೀರಿದಾಗ ನೂಕಾಟ, ತಳ್ಳಾಟ ಶುರುವಾಗಿ ಕಾಲ್ತುಳಿತ ಸಂಭವಿಸಿತು. ಇದರಿಂದ 4 ಮಂದಿಗೆ ಗಾಯವಾಗಿತ್ತು.
ಶುಕ್ರವಾರ ಬೆಳಗಿನ ಜಾವ 3 ಗಂಟೆಗೇ ಸಾವಿರಾರು ಮಂದಿ ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ಖರೀದಿಗೆ ಆಗಮಿಸಿದ್ದರು. ಸ್ಟೇಡಿಯಂ ಹೊರಗೆ ತೀವ್ರ ಅವ್ಯವಸ್ಥೆ ಉಂಟಾಗಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪಿತು. ಹೀಗಾಗಿ ಹೈದರಾಬಾದ್ ಕ್ರಿಕೆಟ್ ಮಂಡಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಹಳ ಸಮಯದ ಬಳಿಕ “ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ’ನಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ. ಆದ್ದರಿಂದ ಸಹಜವಾಗಿ ಅಭಿಮಾನಿಗಳು ಮುಗಿಬಿದ್ದಿದ್ದರು.