ಗಂಗಾವತಿ: ಕೋವಿಡ್ ಕರ್ಪ್ಯೂ ಉಲ್ಲಂಘನೆ ಮಾಡಿ ಬೆಳಗಿನ ಜಾವ ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿದ್ದ ಬಟ್ಟೆ ಅಂಗಡಿ ವ್ಯಾಪಾರಿಗಳ ವಿರುದ್ದ ಪೊಲೀಸ್ ಇಲಾಖೆ ಹಾಗೂ ನಗರಸಭೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, ಶುಕ್ರವಾರ ಬೆಳಗಿನ ಜಾವ ಡಿವೈಎಸ್ ಪಿ ರುದ್ರೇಶ ಉಜ್ಜನಕೊಪ್ಪ ಫಿಲ್ಡೀಗಿಳಿದಿದ್ದಾರೆ. ಓಎಸ್ ಬಿ ರೋಡ್ ಮುಚಿಗೇರ್ ಓಣಿ ರಸ್ತೆಯಲ್ಲಿ ಶಟರ್ ಓಪನ್ ಮಾಡಿ ಹೆಚ್ಚು ಜನರನ್ನು ಸೇರಿಸಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ದ ಕೇಸ್ ದಾಖಲಿಸಿದ್ದಾರೆ.
ಇಸ್ಲಾಂಪೂರ ರಸ್ತೆಯಲ್ಲಿ ಹೆಚ್ಚು ಜನರನ್ನು ಸೇರಿಸಿ ದಿನಸಿ ವ್ಯಾಪಾರ ಮಾಡುತ್ತಿದ್ದ ಕಿರಾಣಿ ವ್ಯಾಪಾರಸ್ಥರ ವಿರುದ್ದವೂ ಕೇಸ್ ದಾಖಲಿಸಿದ್ದಾರೆ.
ಗಾಂಧಿ ವೃತ್ತ,ಮಹಾವೀರ ಗಣೇಶ ವೃತ್ತ, ವೀಕ್ಲಿ ಮಾರ್ಕೆಟ್ ರಸ್ತೆಯುದ್ದಕ್ಕೂ ಮಾಸ್ಕ್ ಇಲ್ಲದೇ ವ್ಯಾಪಾರ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರಸಭೆ ಸಿಬ್ಬಂದಿ ಹಾಗೂ ಪೊಲೀಸರು ಬಟ್ಟೆ ಪಾತ್ರೆ ಮಾರಾಟ ಮಾಡುವ ಅಂಗಡಿಯವರು ಮಾರ್ಗಸೂಚಿ ಉಲ್ಲಂಘನೆ ಮಾಡಿ ತಮಗೆ ಬೇಕಾದವರಿಗೆ ಫೋನ್ ಮಾಡಿ ವ್ಯಾಪಾರ ಮಾರುತ್ತಿರುವ ಕುರಿತು ಸಾರ್ವಜನಿಕರು ಪೋಟೋ ವಿಡಿಯೋ ಮಾಡಿ ಪೊಲೀಸರಿಗೆ ಹಾಕಿದ್ದರು. “ಉದಯವಾಣಿ ಡಾಟ್ ಕಾಮ್’ ನಲ್ಲಿ ಬಟ್ಟೆ ವ್ಯಾಪಾರಿಗಳಿಂದ ಪೊಲೀಸರಿಗೆ ತಲೆ ಬಿಸಿ ಎಂದು ಹೆಚ್ಚು ಜನ ಸೇರುವ ಬಗ್ಗೆ ವರದಿ ಮಾಡಲಾಗಿತ್ತು.
ಇದರಿಂದ ಎಚ್ಚೆತ್ತ ಪೊಲೀಸ್ ಮತ್ತು ನಗರಸಭೆ ಇಲಾಖೆಯ ಶುಕ್ರವಾರ ವಿಶೇಷ ಕಾರ್ಯಾಚರಣೆ ಮೂಲಕ ಹಿಂಭಾಗಿಲಿನಿಂದ ವ್ಯಾಪಾರ ಮಾಡುವವರ ಮೇಲೆ ಕಣ್ಣಿಟ್ಟಿದ್ದಾರೆ. ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ ‘ಉದಯವಾಣಿ’ ತಿಳಿಸಿದ್ದಾರೆ.