ಆಲೂರು: ಪಪಂ ವಾಣಿಜ್ಯ ಸಂಕೀರ್ಣ ಹಿಂಭಾಗದಲ್ಲಿನ ಶಿಥಿಲಗೊಂಡು, ಗಿಡಗಂಟಿಗಳಿಂದ ಆವೃತಗೊಂಡು, ಅಕ್ರಮ ಚಟುವಟಿಕೆಗಳ ತಾಣವಾಗಿದ್ದ ಹಳೇ ಪೊಲೀಸ್ ಕ್ವಾಟ್ರಸ್ ಆವರಣವನ್ನು ಪೊಲೀಸ್ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಸ್ವತ್ಛಗೊಳಿಸಿದರು.
ತಾಲೂಕು ಕಚೇರಿ, ಪಟ್ಟಣ ಪಂಚಾಯಿತಿ, ಪೊಲೀಸ್ ಠಾಣೆ ಸಮೀಪವೇ ಇದ್ದ ಈ ಹಳೇ ಪೊಲೀಸ್ ಕ್ವಾಟ್ರಸ್ 30 ವರ್ಷಗಳಿಂದ ಶಿಥಿಲಗೊಂಡು, ಗಿಡಗಂಟಿಗಳಿಂದ ಸಂಪೂರ್ಣ ಮುಚ್ಚಿಹೋಗಿತ್ತು. ಪುಂಡ ಪೋಕರಿಗಳ ಅಕ್ರಮ ಚಟುವಟಿಕೆಯ ತಾಣವಾಗಿತ್ತು. ಮಲಮೂತ್ರ ವಿಸರ್ಜನೆಯಿಂದ ದುರ್ನಾತ ಬೀರುತ್ತಿತ್ತು.
ಶಿಥಿಲಗೊಂಡ ಈ ಕಟ್ಟಡದ ಒಳಗಡೆ ಮದ್ಯದ ಬಾಟಲಿ, ಬೀಡಿ, ಸಿಗರೇಟ್ ತುಂಡುಗಳು, ಕಸ, ಇತರೆ ತ್ಯಾಜ್ಯ ಹಾಕಲಾಗಿತ್ತು. ಅಕ್ಕಪಕ್ಕದ ನಿವಾಸಿಗಳು, ಅಂಗಡಿಯವರು ಕ್ವಾಟ್ರಸ್ ಆವರಣದಲ್ಲಿ ಕಸ ಸುರಿಯುತ್ತಿದ್ದರು. ಇದರಿಂದ ಇಡೀ ವಾತಾವರಣ ಸೊಳ್ಳೆಗಳ ಆವಾಸ ಸ್ಥಾನವಾಗಿತ್ತು. ಪಟ್ಟಣದ ಸ್ವತ್ಛತೆ ಸಂಪೂರ್ಣ ಹಾಳಾಗುವುದರ ಜೊತೆಗೆ ಈ ಕಟ್ಟಡ ಪುಂಡ ಪೋಕರಿ, ಕಳ್ಳಕಾಕರ ಅಶ್ರಯ ತಾಣವಾಗಿದೆ ಎಂದು ಜನಸಾಮಾನ್ಯರು ಪದೇ ಪದೆ ಆರೋಪಿಸುತ್ತಿದ್ದರು.
ಇದನ್ನೂ ಓದಿ :ದೇವರಹಳ್ಳಿ ಗ್ರಾಪಂನಲ್ಲಿ “ಕೈ’ ಬೆಂಬಲಿತರ ಆಡಳಿತ
ಶೆಟ್ಟರ್ ಬೀದಿ, 10ನೇ ವಾರ್ಡ, ಅಂಬೇಡ್ಕರ್ ಬೀದಿಗೆ ಹೋಗುವವರು ಈ ಕಟ್ಟಡದ ಪಕ್ಕದ ರಸ್ತೆ ಬಳಸಬೇಕಿತ್ತು. ಸಂಜೆ 7 ಗಂಟೆ ನಂತರ ಈ ರಸ್ತೆಯಲ್ಲಿ ಓಡಾಡಲು ಜನ ಹೆದರುತ್ತಿದ್ದರು. ಈ ಕಟ್ಟಡದ ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣವಿದ್ದು, ಇಲ್ಲಿನ ಅಂಗಡಿಗಳಿಗೆ ಬರಲು ಮಹಿಳಾ ಗ್ರಾಹಕರಿಗೆ ಕಿರಿಕಿರಿ ಆಗುತ್ತಿತ್ತು. ಏಕೆಂದರೆ, ಪಕ್ಕದಲ್ಲೇ ಇದ್ದ ಈ ಕ್ವಾಟ್ರಸ್ ಆವರಣದಲ್ಲಿ ಮಲ ವಿಸರ್ಜನೆ ಮಾಡಲಾಗುತ್ತಿತ್ತು. ಇದರಿಂದ ನಮಗೆ ವ್ಯಾಪಾರವಾಗುತ್ತಿಲ್ಲ ಎಂದು ಅಂಗಡಿ ಮಾಲಿಕರು ಅಸಮಾಧಾನ ಹೊರಹಾಕಿದ್ದರು.
ಹಳೇ ಪೊಲೀಸ್ ಕ್ವಾಟ್ರಸ್‌ನಿಂದ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಉದಯವಾಣಿಯಲ್ಲಿ ಜ.29ರಂದು ಸುದ್ದಿ ಪ್ರಕಟಿಸಲಾಗಿತ್ತು. ಇದರಿಂದ ಹೆಚ್ಚೆತ್ತ ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಶ್, ಜೆಸಿಬಿ ಯಂತ್ರದ ಮೂಲಕ ಸ್ವತ್ಛತಾ ಕಾರ್ಯ ಮಾಡಿಸಿದರು.