ಬೈಂದೂರು: ಉಡುಪಿ ಜಿಲ್ಲಾ ಪೋಲಿಸ್ ಬೈಂದೂರು ವೃತ್ತದ ಆರಕ್ಷಕ ಠಾಣೆಗಳ ಪರಿಸ್ಕ್ರುತ ಉಪಗಸ್ತು ನಾಗರೀಕರ ಸಭೆ ಬೈಂದೂರು ಜೆ.ಎನ್.ಆರ್ ಕಲಾ ಮಂದಿರದಲ್ಲಿ ನಡೆಯಿತು.
ಶಾಸನಬದ್ದ ಬೀಟ್ ವ್ಯವಸ್ಥೆ
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕೆ.ಟಿ.ಬಾಲಕೃಷ್ಣ ಈಗಾಗಲೇ ಅನೇಕ ವರ್ಷಗಳಿಂದ ಪೋಲಿಸ್ ಬೀಟ್ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಕಾನೂನು ಮಾನ್ಯತೆ ಹೊಂದಿರಿರಲಿಲ್ಲ. ಪ್ರಸ್ತುತ ಸರಕಾರ ಶಾಸನಬದ್ದ ಬೀಟ್ ವ್ಯವಸ್ಥೆ ಜಾರಿಮಾಡಿರುವುದರಿಂದ ಕಾನೂನಿನ ಮಾನ್ಯತೆ ಹೊಂದಿದೆ. ಬೀಟ್ ವ್ಯವಸ್ಥೆಯಿಂದಾಗಿ ಪ್ರತಿ ಊರುಗಳಲ್ಲಿನ ಸಮಸ್ತ ಮಾಹಿತಿ ಆರಕ್ಷಕರಿಗೆ ದೊರೆಯುತ್ತದೆ. ಜಿಲ್ಲೆಯಲ್ಲಿ ಎಳುನೂರಕ್ಕೂ ಅಧಿಕ ಬೀಟ್‌ಗಳಿವೆ. ಸುಮಾರು ಇಪ್ಪತ್ತಮೂರು ಸಾವಿರಕ್ಕೂ ಅಧಿಕ ಉಪಗಸ್ತು ನಾಗರೀಕ ಸದಸ್ಯರಿದ್ದಾರೆ. ಪೋಲಿಸ್ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕಾದರೆ ಪೋಲಿಸ್ ಹಾಗೂ ಸಾರ್ವಜನಿಕರ ನಡುವೆ ಉತ್ತಮ ಭಾಂದವ್ಯಬೇಕು ಎಂದರು.
ಆರಕ್ಷಕರ ಪರವಾಗಿ ಗಂಗೊಳ್ಳಿ ಆರಕ್ಷಕ ಠಾಣೆಯ ಮೋಹನ್ ಪೂಜಾರಿ,ಸರೋಜಾ ಕೊಲ್ಲೂರು ಹಾಗೂ ನಂದಯ್ಯ ಮತ್ತು ಸಾರ್ವಜನಿಕರ ಪರವಾಗಿ ಸತೀಶ್ ನಾಯಕ್ ನಾಡ, ನಾರಾಯಣ ಶೆಟ್ಟಿ ಜಡ್ಕಲ್, ಶರತ್ ಶೆಟ್ಟಿ ಉಪ್ಪುಂದ ಅನಿಸಿಕೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಉಪಗಸ್ತು ಬೀಟ್ ಸದಸ್ಯರಿಗೆ ಗುರುತು ಚೀಟಿ ವಿತರಿಸಲಾಯಿತು. ಬೈಂದೂರು ಠಾಣಾಧಿಕಾರಿ ಸಂತೋಷ ಆನಂದ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಉಪಸ್ಥಿತರಿದ್ದರು. ಕುಂದಾಪುರ ಡಿ.ವೈ.ಎಸ್.ಪಿ. ಪ್ರವೀಣ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್ ಸ್ವಾಗತಿಸಿದರು. ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.ಕೊಲ್ಲೂರು ಠಾಣಾಧಿಕಾರಿ ಶೇಖರಪ್ಪ ವಂದಿಸಿದರು.