Advertisement

ಸಿವಿಲ್‌ ಡ್ರೆಸ್‌ನಲ್ಲಿ ಪೊಲೀಸರ ಗಸ್ತು; ಕಾಲೇಜು ಆವರಣದಲ್ಲಿ ಡ್ರಗ್ಸ್‌ ದಂಧೆಗೆ ಕಡಿವಾಣ

12:59 AM Oct 07, 2021 | Team Udayavani |

ಬೆಂಗಳೂರು: ರಾಜ್ಯದ ಕಾಲೇಜು ಆವರಣ ಹಾಗೂ ಪರಿಸರದಲ್ಲಿ ನಡೆಯುತ್ತಿರುವ ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಸಿವಿಲ್‌ ಡ್ರೆಸ್‌ನಲ್ಲಿ ಗಸ್ತು ನಡೆಸುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬುಧವಾರ ಬೆಂಗಳೂರು “ಉದಯವಾಣಿ’ ಕಚೇರಿ ಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಾಲೇಜು ಕ್ಯಾಂಪಸ್‌ಗಳಲ್ಲೂ ವಿಶೇಷ ಕಣ್ಗಾವಲು ಇಡಲಾಗುತ್ತದೆ ಎಂದರು.

Advertisement

ಜಾಗೃತಿ ಆಂದೋಲನ
ವಿದೇಶದಿಂದ ವ್ಯಾಸಂಗಕ್ಕೆ ಬಂದು, ಅಧ್ಯಯನದ ಅನಂತರ ಇಂಥ ದಂಧೆಯಲ್ಲಿ ತೊಡಗಿಸಿಕೊಂಡಿರುವ ವರನ್ನು ಟ್ರ್ಯಾಕ್‌ ಮಾಡುವ ವ್ಯವಸ್ಥೆಯೂ ಆಗಲಿದೆ. ಡ್ರಗ್ಸ್‌ ವಿರುದ್ಧ ದೊಡ್ಡ ಮಟ್ಟದ ಜನ ಜಾಗೃತಿ ಆಂದೋಲನ ನಡೆಸಲಿದ್ದೇವೆ. ಅತ್ಯಾಚಾರಿಗಳಿಗೆ ಹಾಗೂ ಡ್ರಗ್ಸ್‌ ದಂಧೆಕೋರರಿಗೆ ಗರಿಷ್ಠ ಶಿಕ್ಷೆ ನೀಡಲು ಸರಕಾರ ಬದ್ಧವಾಗಿದೆ ಎಂದು ವಿವರಿಸಿದರು.

ಅಕ್ರಮ ಗೋಸಾಗಾಟ ವಿರುದ್ಧ ಕಠಿನ ಕ್ರಮ
ಹಿಂದಿನ ಸರಕಾರಗಳಲ್ಲಿ ಅಕ್ರಮ ಗೋಸಾಗಾಟ ಗಾರರನ್ನು ಹಿಡಿದು ಕೊಟ್ಟವರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಪೊಲೀಸ್‌ ಅಧಿಕಾರಿಗಳಿಗೆ ವಿಷಯ ಏನೆಂದು ಗೊತ್ತಾಗಿದೆ. ಪೊಲೀಸರು ಇನ್ನಷ್ಟು ಬಿಗಿಯಾಗಬೇಕಿದೆ ಎಂದರು.

ಸ್ಯಾಟಲೈಟ್‌ ಫೋನ್‌ ವಿರುದ್ಧ ಕ್ರಮ
ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಕೇಂದ್ರ ತನಿಖಾ ತಂಡದ ಅಧಿಕಾರಿಗಳ ಮಾಹಿತಿ ಆಧರಿಸಿ ರಾಜ್ಯದಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದರು.

ಪೊಲೀಸರ ವಸತಿಗೆ ಆದ್ಯತೆ
ಪೊಲೀಸ್‌ ಪೇದೆಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂಬುದು ಸರಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ 2025ರೊಳಗೆ ರಾಜ್ಯಾದ್ಯಂತ 10 ಸಾವಿರ ಮನೆಗಳ ನಿರ್ಮಾಣದ ಗುರಿ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಶೇ.49ರಷ್ಟು ಪೊಲೀಸರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಈ 10 ಸಾವಿರ ಮನೆಗಳು ಪೂರ್ಣಗೊಂಡರೆ ಎಲ್ಲ ಪೇದೆಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ.

Advertisement

 ಪೊಲೀಸ್‌ ಬೀಟ್‌ಗೆ ಶಕ್ತಿ
ಅಪರಾಧ ಪ್ರಕರಣಗಳು ತಡೆಯಲು, ಅನಾಹುತಗಳನ್ನು ತಪ್ಪಿಸಲು ಆ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು “ಪೊಲೀಸ್‌ ಬೀಟ್‌’ ವ್ಯವಸ್ಥೆ ಅತ್ಯಂತ ಪರಿಣಾಮಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಪೊಲೀಸ್‌ ಬೀಟ್‌ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಲಾಗುವುದು.

ಇದನ್ನೂ ಓದಿ:ಶಬರಿಮಲೆ ಯಾತ್ರೆಗೆ ಕೇರಳ ಸರ್ಕಾರದಿಂದ ಸಿದ್ಧತೆ ಶುರು

ಠಾಣೆಗೆ ಸೈಬರ್‌ ವಿಭಾಗ
ಅಪರಾಧಗಳು ಮೊದಲಿನಂತಿಲ್ಲ. ತಂತ್ರಜ್ಞಾನ ಬೆಳೆದಂತೆ ಸೈಬರ್‌ ಅಪರಾಧ ಬಹಳ ದೊಡ್ಡ ಪಿಡುಗಾಗಿ ಕಾಡುತ್ತಿದೆ. ಇದನ್ನು ಹತೋಟಿಗೆ ತರಲು ಸೈಬರ್‌ ವಿಭಾಗವನ್ನು ಸಶಕ್ತಗೊಳಿಸಲಾಗುವುದು. ಪ್ರತಿ ಜಿಲ್ಲೆ ಮತ್ತು ಪ್ರತಿ ಪೊಲೀಸ್‌ ಠಾಣೆಗೆ ಸೈಬರ್‌ ವಿಭಾಗ ಇರಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಪರಾಧ ನಡೆದ ಸ್ಥಳಕ್ಕೆ ಭೇಟಿ ಕೊಟ್ಟು ಸಾಕ್ಷ್ಯಗಳ ಸಂಗ್ರಹಕ್ಕೆ ಎಫ್ಎಸ್‌ಎಲ್‌ನಲ್ಲಿ 250 ತಜ್ಞರನ್ನು ನೇಮಕ ಮಾಡಲಾಗಿದೆ. ಇದರಿಂದ ಪೊಲೀಸರಿಗೆ ನೆರವು ಸಿಗಲಿದೆ.

100 ಠಾಣೆ ನಿರ್ಮಾಣ
ಹಿಂದೆ ವರ್ಷಕ್ಕೆ 4ರಿಂದ 5 ಹೊಸ ಪೊಲೀಸ್‌ ಠಾಣೆಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ 100 ಹೊಸ ಪೊಲೀಸ್‌ ಠಾಣೆಗಳನ್ನು ನಿರ್ಮಿಸಲಾಗುತ್ತಿದೆ. ಇದಾದ ಬಳಿಕ ರಾಜ್ಯದಲ್ಲಿ ಸ್ವಂತ ಕಟ್ಟದ ಇಲ್ಲದ 13 ಠಾಣೆಗಳಿಗೆ ಕಟ್ಟಡ ನಿರ್ಮಿಸುವ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಎರಡು ವರ್ಷದಲ್ಲಿ 124 ಪೊಲೀಸ್‌ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ.

ಮತಾಂತರ ನಿಷೇಧ ಕಾಯ್ದೆ
ಮತಾಂತರ ಮೇಲ್ನೋಟಕ್ಕೆ ಏನೂ ಕಾಣುವುದಿಲ್ಲ. ಆದರೆ ಆಳವಾಗಿ ದೃಷ್ಟಿ ಹಾಯಿಸಿದರೆ ಅದೆಷ್ಟು ಭಯಾನಕ ಎಂದು ತಿಳಿಯುತ್ತದೆ. ಮತಾಂತರದ ಮೂಲಕ ಸಮಾಜದ ಶಾಂತಿಗೆ ಭಂಗ ತರುವ ಕೆಲಸವನ್ನು ಕೆಲವು ಮಿಷನರಿ ಗಳು ಮಾಡುತ್ತಿದ್ದು, ಮತಾಂತರ ನಿಷೇಧ ಕಾಯ್ದೆ ತೀರಾ ಅಗತ್ಯವಿದ್ದು, ಕಾಯ್ದೆ ತರಬೇಕು ಎಂದುಪಕ್ಷ ಮೀರಿ ಎಲ್ಲರೂ ಹೇಳುತ್ತಿದ್ದಾರೆ. ವಿಧೇಯಕಸಿದ್ಧವಾಗುತ್ತಿದೆ ಮುಂದಿನ ಅಧಿವೇಶನದಲ್ಲಿ ಅದನ್ನು ಮಂಡಿಸಿ ಶೀಘ್ರದಲ್ಲೇ ಪ್ರಬಲವಾದ ಮತಾಂತರ ನಿಷೇಧ ಕಾಯ್ದೆಜಾರಿಗೆ ತರಲಾ ಗುವುದು ಎಂದರು.

ಮಂಗಳೂರಿನಲ್ಲಿ ಎನ್‌ಐಎ ಘಟಕ
ದೇಶದ ಭದ್ರತೆ ದೃಷ್ಟಿಯಿಂದ ಪ್ರಧಾನಿ ಮೋದಿ ಯವರು ಅನೇಕ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದಾರೆ. ರಾಜ್ಯದಲ್ಲಿ ಎನ್‌ಐಎ ಘಟಕ ಸ್ಥಾಪನೆ ಕುರಿತು ಕೇಂದ್ರದ ಜತೆ ಮಾತುಕತೆ ನಡೆಸಲಾಗುತ್ತಿದೆ. ಎನ್‌ಐಎ ಘಟಕ ಮಂಗಳೂರಿನಲ್ಲಿ ಇರಬೇಕು ಎಂಬ ಆಲೋಚನೆ ಇದೆ. ಘಟಕ ಸ್ಥಾಪನೆ ಖಂಡಿತ, ಆದರೆ ಕಾಲಮಿತಿ ಬಗ್ಗೆ ಈ ಹಂತದಲ್ಲಿ ಹೇಳಲಾಗದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next