Advertisement

ಸುನಾಮಿಯಲ್ಲಿ ಕಣ್ಮರೆಯಾಗಿದ್ದ ಪೊಲೀಸ್ ಅಧಿಕಾರಿ 17 ವರ್ಷಗಳ ನಂತರ ಪತ್ತೆ

03:02 PM Mar 19, 2021 | Team Udayavani |

ಇಂಡೋನೇಷ್ಯಾ : ಭೀಕರ ಸುನಾಮಿ ದುರಂತದಲ್ಲಿ ಸಾವನ್ನಪ್ಪಿದ್ದ ಎಂದು ನಂಬಲಾಗಿದ್ದ ಪೊಲೀಸ್ ಅಧಿಕಾರಿಯೋರ್ವ 17 ವರ್ಷಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದು, ದಶಕಗಳ ನಂತರ ತನ್ನ ಕುಟುಂಬ ಸೇರಿದ್ದಾನೆ.

Advertisement

2004ರಲ್ಲಿ ಸಂಭವಿಸಿದ ರಣಭೀಕರ ಸುನಾಮಿ ಭಾರತ, ಶ್ರೀಲಂಕಾ, ಥೈಲ್ಯಾಂಡ್ ಹಾಗೂ ಇಂಡೋನೇಷ್ಯಾ ದೇಶಗಳಲ್ಲಿ ಅಪಾರ ಹಾನಿಯನ್ನುಂಟು ಮಾಡಿತ್ತು. ಈ ದುರಂತದಲ್ಲಿ ಇಂಡೋನೇಷ್ಯಾದ 2,30,000 ಜನರು ಪ್ರಾಣ ಕಳೆದುಕೊಂಡಿದ್ದರು.

100 ಫೀಟ್ ಎತ್ತರದ ಸುನಾಮೆಯ ಅಲೆಗಳು ಲಕ್ಷಾಂತರ ಜನರ ಪ್ರಾಣ ಕಿತ್ತುಕೊಂಡಿದ್ದವು. ಅಂದು ಪೊಲೀಸ್ ಆಫೀಸರ್ ಆಗಿದ್ದ ಅಬ್ರಿಪ್ ಅಸೆಪ್ ಕೂಡ ಕಣ್ಮರೆಯಾಗಿದ್ದ. ಸುನಾಮಿ ಸೆಳೆಯಲ್ಲಿ ಈತ ನಾಪತ್ತೆಯಾಗಿದ್ದಾನೆ ಎಂದು ಆತನ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೆಲ ದಿನಗಳ ನಂತರ ಅಸೆಪ್ ಸಾವನ್ನಪ್ಪಿದ್ದಾನೆ ಎನ್ನುವ ತೀರ್ಮಾನಕ್ಕೆ ಬಂದಿದ್ದರು.

ಈ ಭೀಕರ ದುರಂತ ನಡೆದು ಇದೀಗ 17 ವರ್ಷಗಳು ಸಂದಿವೆ. ಅಬ್ರಿಪ್ ಅಸೆಪ್ ನನ್ನು ಆತನ ಕುಟುಂಬ ಮರೆತು ಹೋಗಿತ್ತು. ಆದರೆ, ಇದೀಗ ಅಬ್ರಿಪ್ ಅಸೆಪ್ ಬದುಕಿದ್ದಾನೆ ಎನ್ನುವ ಸುದ್ದಿ ಆತನ ಕುಟುಂಬದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಎಲ್ಲರೂ ಖುಷಿಯಿಂದ ಅಸೆಪ್ ಅವರನ್ನು ಮನೆಗೆ ಕರೆತಂದಿದ್ದಾರೆ.

ಮನೋವೈಕಲ್ಯ

Advertisement

ಇನ್ನು ಅಬ್ರಿಪ್ ಅಸೆಪ್ ದೈಹಿಕವಾಗಿ ಚೆನ್ನಾಗಿದ್ದಾನೆ. ಆದರೆ, ಮಾನಸಿಕ ರೋಗಕ್ಕೆ ತುತ್ತಾಗಿದ್ದಾನೆ. ಸುನಾಮಿ ದುರಂತ ಕಣ್ಣಾರೆ ಕಂಡಿದ್ದರಿಂದ ಆತ ಮನೋವೈಕಲ್ಯಕ್ಕೆ ಒಳಗಾಗಿದ್ದಾನೆ. ಕಳೆದ 17 ವರ್ಷಗಳಿಂದ ಅಚೆ ಎನ್ನುವ ಪ್ರದೇಶದ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.

ಪತ್ತೆಯಾಗಿದ್ದು ಹೇಗೆ ?

ಇತ್ತೀಚಿಗೆ ಅಸೆಪ್ ಫ್ಯಾಮಿಲಿ ಸೋಷಿಯಲ್ ಮೀಡಿಯಾ ಗ್ರೂಪ್‍ನಲ್ಲಿ ಆತನ ಫೋಟೊ ಹರಿದಾಡುತ್ತಿತ್ತು. ಈ ಫೋಟೊ ಜಾಡು ಹಿಡಿದು ಹೋದಾಗ ಅಚೆ ಮನೋರೋಗಿಗಳ ಆಸ್ಪತ್ರೆಯಲ್ಲಿ ಅಸೆಪ್ ಇರುವುದು ದೃಢಪಟ್ಟಿದೆ. ವೈದ್ಯರ ಬಳಿ ಚರ್ಚಿಸಿದ ನಂತರ ಆತನನ್ನು ಮನೆಗೆ ಕರೆದುಕೊಂಡು ಬರಲಾಗಿದೆ ಎಂದು ಸ್ಥಳೀಯ ಪೊಲೀಸ್ ಸಿಬ್ಬಂದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next