ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಬಡ್ಗಾಮ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯದ ರಾಹುಲ್ ಭಟ್ ಎಂಬ ಸರ್ಕಾರಿ ನೌಕರನನ್ನು ಉಗ್ರರು ಗುಂಡಿಟ್ಟು ಕೊಂದ ಘಟನೆಗೆ ಸಂಬಂಧಿಸಿದಂತೆ ಶುಕ್ರವಾರ ಸರ್ಕಾರಿ ನೌಕರರು ಹಾಗೂ ಕಾಶ್ಮೀರಿ ಪಂಡಿತ್ ಕುಟುಂಬದ ಸದಸ್ಯರು ಶುಕ್ರವಾರ (ಮೇ 13) ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಾಂಗ್ ನಂಬರ್ ಡಯಲ್ ಮಾಡಿ ಪೆಚ್ಚು ಮೋರೆ ಹಾಕಿದ ಡಿಕೆಶಿ; ಅಶ್ವತ್ಥ ನಾರಾಯಣ ವ್ಯಂಗ್ಯ
ಗುರುವಾರ ಚಾಡೂರಾ ನಗರದಲ್ಲಿನ ತಹಶೀಲ್ ಸರ್ಕಾರಿ ಕಚೇರಿಯೊಳಕ್ಕೆ ನುಗ್ಗಿ ಉಗ್ರರು ರಾಹುಲ್ ಭಟ್ ಎಂಬ ಕಾಶ್ಮೀರಿ ಪಂಡಿತ್ ಸರ್ಕಾರಿ ನೌಕರರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. 2010-11ನೇ ಸಾಲಿನಲ್ಲಿ ವಲಸಿಗರ ವಿಶೇಷ ಉದ್ಯೋಗ ಖಾತ್ರಿ ಯೋಜನೆಯಡಿ ರಾಹುಲ್ ಗೆ ಕ್ಲರ್ಕ್ ಹುದ್ದೆ ಸಿಕ್ಕಿರುವುದಾಗಿ ವರದಿ ತಿಳಿಸಿದೆ.
ರಾಹುಲ್ ಭಟ್ ಹತ್ಯೆಯ ನಂತರ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಡಳಿತದ ವಿರುದ್ಧ ಸರ್ಕಾರಿ ನೌಕರರು, ಕಾಶ್ಮೀರಿ ಪಂಡಿತ್ ಕುಟುಂಬಗಳು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ದಾಳಿ ನಡೆಸಿ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ.
ಕಾಶ್ಮೀರಿ ಪಂಡಿತ್ ಸಮುದಾಯದ ರಾಹುಲ್ ಹತ್ಯೆ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಬಡ್ಗಾಮ್ ಜಿಲ್ಲೆಯ ವಿಮಾನ ನಿಲ್ದಾಣ ರಸ್ತೆಯತ್ತ ತೆರಳದಂತೆ ಪೊಲೀಸರು ತಡೆದಿದ್ದರು. “ ಲೆಫ್ಟಿನೆಂಟ್ ಗವರ್ನರ್ ಅವರು ನಮಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು. ಇಲ್ಲದಿದ್ದರೆ ನಾವು ಸಾಮೂಹಿಕವಾಗಿ (350) ನಮ್ಮ ಸರ್ಕಾರಿ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಕಾಶ್ಮೀರಿ ಪಂಡಿತ್ ಸಮುದಾಯದ ಅಮಿತ್ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಹಾಗೂ ಅಶ್ರುವಾಯು ದಾಳಿ ನಡೆಸುತ್ತಾರೆ. ಆದರೆ ಕಾಶ್ಮೀರಿ ಪಂಡಿತ್ ಸಮುದಾಯದ ಸರ್ಕಾರಿ ನೌಕರರನ್ನು ಕೊಂದ ಉಗ್ರರನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.