Advertisement

ಹೊಸವರ್ಷದ ನಶೆ ಹಬ್ಬಕ್ಕೆ ಬೀಳಲಿದೆಯೇ ಬ್ರೇಕ್‌

12:44 PM Dec 28, 2020 | Suhan S |

ಪ್ರತಿ ವರ್ಷ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌, ಕೋರಮಂಗಲ ಸೇರಿ ವಿಜೃಂಭಣೆಯಿಂದ ಹೊಸವರ್ಷಾಚರಣೆ ನಡೆಯುತ್ತಿತ್ತು. ಮಾದಕ ವಸ್ತುಗಳ ಮಾರಾಟವೂ ಅಷ್ಟೇ ಪ್ರಮಾಣದಲ್ಲಿರುತ್ತಿತ್ತು. ಆದರೆ, ಈ ವರ್ಷ ಕೋವಿಡ್ ಕಾರಣದಿಂದ ಆಚರಣೆ ಇಲ್ಲ. ಆದರೆ ಡಗ್ಸ್‌ ಬಳಕೆ?(ದಂಧೆ)ಲಾಕ್‌ಡೌನ್‌ ಸಂದರ್ಭದಲ್ಲೂ ಅಟ್ಟಹಾಸಗೈದಿತ್ತು. ಈಗ ಮತ್ತೆ ಹೊಸವರ್ಷಾಚರಣೆ ಸಾರ್ವಜನಿಕ ಸಂಭ್ರಮಕ್ಕೆ ಬ್ರೇಕ್‌ ಬಿದ್ದಿದೆ. ಆದರೆ, ಡ್ರಗ್ಸ್‌ ಕೊಡು-ಕೊಳ್ಳುವಿಕೆ ಅವ್ಯಾಹತವಾಗಿ ಮುಂದುವರಿಸಿದೆ. ಡಿಸೆಂಬರ್‌ ತಿಂಗಳಲ್ಲೇ ಸುಮಾರು 15 ಡ್ರಗ್ಸ್‌ ಪ್ರಕರಣಗಳನ್ನು ಪೊಲೀಸರು ಪತ್ತೆ ಹ ಚ್ಚಿದ್ದಾರೆ! ಆ ಕಾರಣಕ್ಕಾಗಿಯೇ ಪೊಲೀಸರು ಡ್ರಗ್ಸ್‌ಚ್ಇ ದಂಧೆಕೋರರತ್ತ ಬಗ್ಗೆ ಮತ್ತಷ್ಟು ಜಾಗೃತರಾಗಿದ್ದಾರೆ.

Advertisement

ಡಿಸೆಂಬರ್‌ ತಿಂಗಳು ಮತ್ತು ಹೊಸವರ್ಷದ ಸಂಭ್ರಮ ಡ್ರಗ್ಸ್‌ ಮಾರಾಟಗಾರರಿಗೆ ಸುಗ್ಗಿಯ ಕಾಲವಾಗಿದ್ದರೆ, ವ್ಯಸನಿಗಳಿಗೆ ಭರ್ಜರಿ “ನಶೆ ಹಬ್ಬ’ ಆಗಿರುತ್ತದೆ. ಆದರೆ, ಈ ಬಂಪರ್‌ ಸುಗ್ಗಿ ಮತ್ತು ನಶೆ ಹಬ್ಬಕ್ಕೆ ಪೊಲೀಸರು “ಲಾಕ್‌ಡೌನ್‌’ ಹೇರಿದ್ದಾರೆ. ಈ ಬಾರಿ ಹೊಸವರ್ಷಾಚರಣೆ ವೇಳೆ ಯಾವುದೇ ಮೋಜು-ಮಸ್ತಿಗೆ ಅವಕಾಶವಿಲ್ಲ. ಮತ್ತೂಂದೆಡೆ ಸಾರ್ವಜನಿಕ ಪಾರ್ಟಿ, ಆಚರಣೆಗೂ ಬ್ರೇಕ್‌ ಬಿದ್ದಿದೆ. ಈ ಮಧ್ಯೆಯೂ ನಗರದಲ್ಲಿ ಡ್ರಗ್ಸ್‌ ದಂಧೆ ಸಕ್ರಿಯವಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಈ ಬಗ್ಗೆ ಪೊಲೀಸರು ಹದ್ದಿನಕಣ್ಣಿಟ್ಟಿದ್ದಾರೆ.

2018 ಮತ್ತು 2019ರ ಡಿಸೆಂಬರ್‌ಗೆ ಹೊಲಿಸಿದರೆ 2020ರ ಡಿಸೆಂಬರ್‌ನಲ್ಲಿಯೇ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. 2018-08, 2019-10 ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ ಈ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಕಾರ್ಯಾಚರಣೆ ಮುಂದುವರಿಸಿದ್ದಾರೆ. ಲಾಕ್‌ಡೌನ್‌ ದಿನಗಳಲ್ಲಿಯೂ ಶಾಲಾ-ಕಾಲೇಜುಗಳು, ಕಂಪನಿಗಳು ಇಲ್ಲದಿದ್ದರೂ ಡ್ರಗ್ಸ್‌ ಜಾಲಾ ಮಾತ್ರ ಯಥೇತ್ಛವಾಗಿ ನಡೆದಿದೆ. ಈ ವೇಳೆ ರಾಜಧಾನಿಯಲ್ಲಿ ಡ್ರಗ್ಸ್‌ ಮಾರಾಟ ಜಾಲ “ಗುಪ್ತಗಾಮಿನಿ’ಯಾಗಿ ಸಕ್ರಿಯವಾಗಿತ್ತು. ಸಿನಿಮಾನಟಿಯರು, ಸೆಲೆಬ್ರೆಟಿಗಳು, ವಿಐಪಿ ಮಕ್ಕಳು, ವಿದೇಶಿ ಪ್ರಜೆಗಳು ಪೊಲೀಸರ ಬಲೆಗೆ ಬಿದ್ದ ಮೇಲೆ ಅದರ ಬಣ್ಣ ಬಯಲಾಯಿತು. ಆದರೆ, ಇನ್ನೆಷ್ಟು “ಡ್ರಗ್ಸ್‌ ಭಯೋತ್ಪಾದಕರು ರಾಜಧಾನಿ ಬೆಂಗಳೂರನ್ನು ಮನೆ ಮಾಡಿಕೊಂಡಿದ್ದಾರೆ, ಇನ್ನೆಷ್ಟು ಅಮಾಯಕರನ್ನು “ಆಪೋಷನ’ ಪಡೆದಿದ್ದಾರೆ ಎಂಬುದು ಮುಂದಿನ ತನಿಖೆಗಳಿಂದ ಗೋಚರವಾಗಬೇಕಿದೆ.

ಜಾಲ ವಿಸ್ತರಿಸಿಕೊಂಡಿದ್ದು ಹೇಗೆ?: ಪೊಲೀಸ್‌ ಮೂಲಗಳ ಪ್ರಕಾರ ಹಿಂದಿನ ಮೂರು ವರ್ಷಕ್ಕೆ ಹೊಲಿಸಿದರೆ ಪ್ರಸಕ್ತ ವರ್ಷದಲ್ಲಿ ಡ್ರಗ್ಸ್‌ ಮಾರುಕಟ್ಟೆ ಬೇರೆ ಬೇರೆ ಮಾರ್ಗಗಳ ಮೂಲಕ ಅಧಿಕವಾಗಿದೆ. ಪ್ರಮುಖವಾಗಿ ಆನ್‌ಲೈನ್‌ ಮಾರುಕಟ್ಟೆ. ಈ ಮೊದಲು ಬಸ್‌, ವಿಮಾನ, ರೈಲು ಮಾರ್ಗಗಳ ಮೂಲಕ ಮಾದಕ ವಸ್ತುಗಳು ಬರುತ್ತಿದ್ದವು. ಆದರೆ, ಈ ಬಾರಿ ವಿದೇಶದ ಜತೆಗೆ ನೆರೆ ರಾಜ್ಯಗಳಿಂದ ಆನ್‌ ಲೈನ್‌ ಮಾರುಕಟ್ಟೆಯಲ್ಲಿ ಜಾಲ ಸಕ್ರಿಯವಾಗಿದೆ. ಮುಖ್ಯವಾಗಿ ಡಾರ್ಕ್‌ನೆಟ್‌ ವೆಬ್‌ಸೈಟ್‌ ಮತ್ತು ಇತರೆ ವೆಬ್‌ಸೈಟ್‌ಗಳು ಹಾಗೂ ವಿದೇಶಿ, ಅಂಚೆ ಕಚೇರಿಗಳ ಮೂಲಕ ಕೇರಳ, ಗೋವಾ, ಮುಂಬೈ, ಆಂಧ್ರಪ್ರದೇಶ, ತಮಿಳುನಾಡಿನಿಂದ ಡ್ರಗ್ಸ್‌ ಈಗಲೂ ಸರಬರಾಜಾಗುತ್ತಿದೆ.

 ಆನ್‌ಲೈನ್‌ ವ್ಯವಹಾರ: ಮಾರ್ಚ್‌ ಅಂತ್ಯಕ್ಕೆ ದೇಶಾದ್ಯಂತ ಲಾಕ್‌

Advertisement

ಡೌನ್‌ ಆರಂಭವಾಗಿತ್ತು. ಅದಕ್ಕೂ ಮೊದಲೇ ಕೆಲ ಪೆಡ್ಲರ್‌ಗಳು ಸಾಕಷ್ಟು ಮಾದಕ ವಸ್ತುಗಳನ್ನು ತಮ್ಮ ಬಳಿ ಸಂಗ್ರಹಿಸಿದ್ದರು. ಗಾಂಜಾ, ಎಂಡಿಎಂಎ ಸೇರಿ ಕೆಲ ಮಾದರಿಯ ಡ್ರಗ್ಸ್‌ಗಳನ್ನು ಶೇಖರಿಸಿಕೊಂಡಿದ್ದರು. ಪೆಡ್ಲರ್‌ಗಳು ತಮ್ಮ ಮಧ್ಯವರ್ತಿಗಳ ಮೂಲಕ ವಿದ್ಯಾರ್ಥಿಗಳು, ಟೆಕ್ಕಿಗಳು, ಸಾರ್ವಜನಿಕರಿಗೆ ಆನ್‌ಲೈನ್‌ ಮತ್ತು ಫ‌ುಡ್‌ಡೆಲವರಿ ಬಾಯ್‌ಗಳು ಹಾಗೂ ಮೆಡಿಕಲ್‌ ಸಿಬ್ಬಂದಿ ಸೋಗಿನಲ್ಲಿ ಪೂರೈಕೆ ಮಾಡುತ್ತಿದ್ದರು. ಹೀಗೆ ದಿನೇ ದಿನೆ ತನ್ನ ಜಾಲವನ್ನು ವಿಸ್ತರಿಸಿ ಹಂಚಲು ಮುಂದಾದರು.

ವಾಟ್ಸ್‌ ಆ್ಯಪ್‌ ಗ್ರೂಪ್‌: ಶಾಲಾ, ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು, ವ್ಯಸನಿಗಳು ತಮ್ಮದೇ ವಾಟ್ಸ್‌ಆ್ಯಪ್‌ಗ್ರೂಪ್‌ಗಳನ್ನು ರಚಿಸಿಕೊಂಡು ಕೋಡ್‌ ವರ್ಡ್‌ ಮೂಲಕ ಗಾಂಜಾವನ್ನು ನಿರ್ದಿಷ್ಟ ಸ್ಥಳಕ್ಕೆ ತರಿಸಿಕೊಳ್ಳುತ್ತಿದ್ದರು. ಮನೆ, ಹಾಸ್ಟೆಲ್‌ಗಳಿಗೆ ನೇರವಾಗಿಡ್ರಗ್ಸ್‌ ಪೂರೈಕೆಯಾಗುತ್ತಿದ್ದರಿಂದ ವ್ಯಸನಿಗಳ ಸಂಖ್ಯೆಯೂ ದ್ವಿಗುಣಗೊಂಡಿತು. ಆಹಾರ ಪದಾರ್ಥ, ಮೆಡಿಕಲ್‌ ಕಿಟ್‌ಗಳ ಜತೆ ಮಾದಕ ವಸ್ತು ಪೂರೈಕೆಯಾಗುತ್ತಿತ್ತು. ಈ ಬಗ್ಗೆ ಅಲ್ಲಲ್ಲಿ ದೂರುಗಳು ಕೇಳಿ ಬರುತ್ತಿದ್ದರೂ ಪೊಲೀಸರು ಲಾಕ್‌ಡೌನ್‌ ಭದ್ರತೆ ಯಲ್ಲಿ ನಿರತರಾಗಿದ್ದರು. ಹೀಗಾಗಿ ಅಷ್ಟೇನೂ ಪ್ರಕರಣಗಳು ದಾಖಲಾಗಿಲ್ಲ. ಆದರೂ ನಗರ ಪೊಲೀಸರು ಅಂತಹ ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಮೇಲೆ ನಿರಂತರವಾಗಿ ನಿಗಾವಹಿಸಿದ್ದರು.

ಹೋಮ್‌ ಡೆಲಿವರಿ: ಫ‌ುಡ್‌ ಡೆಲಿವರಿ ಬಾಯ್‌ವೊಬ್ಬ ಹಣದ ಆಮಿಷಕ್ಕೊಳಗಾಗಿ ನಿರಂತರವಾಗಿ ವಿದೇಶಿ ಪ್ರಜೆ ಸೇರಿ ನಾಲ್ಕೈದು ಮಂದಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿರುವುದು ಪತ್ತೆಯಾಗಿತ್ತು. ಆತನ ಬೆನ್ನುಬಿದ್ದ ಪೊಲೀಸರಿಗೆ ಸ್ಫೋಟಕ ವಿಚಾರ ಬೆಳಕಿಗೆ ಬಂದಿತ್ತು. ವಿದೇಶಿ ಪ್ರಜೆ ಸೂಚನೆ ಮೇರೆಗೆ ಡೆಲಿವರಿ ಬಾಯ್‌ ಗಾಂಜಾ ಪೂರೈಕೆ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದ. ಈ ಹಿನ್ನೆಲೆ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ 10 ದಿನಗಳಲ್ಲೇ ಬೃಹತ್‌ ಜಾಲವನ್ನು ಬೇಧಿಸಿದರು. ಪೂರ್ವ ಮತ್ತು ಆಗ್ನೇಯ ವಿಭಾಗದಲ್ಲಿ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿ, ನೈಜಿರಿಯಾ ಪ್ರಜೆಗಳು ಸೇರಿ ಹತ್ತಾರು ಮಂದಿಯನ್ನು ಬಂಧಿಸಿದ್ದರು.

ಮತ್ತೂಂದು ಪ್ರಕರಣದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಚಿಕ್ಕಮ್ಮನ ಮನೆಯ ವಿಳಾಸ ಕೊಟ್ಟು ಅಂಚೆ ಮೂಲಕ ಆಂಧ್ರಪ್ರದೇಶದಿಂದ ಗಾಂಜಾ ತರಿಸಿಕೊಂಡಿದ್ದ. ಈ ಸಂಬಂಧ ತನಿಖೆ ನಡೆಸಿದಾಗ ಈ ವಿಚಾರ ಬಯಲಾಗಿತ್ತು. ಈತನಿಗೆ ಗಾಂಜಾ ಪೂರೈಕೆ ಮಾಡಿದ ಆಂಧ್ರ ಪ್ರದೇಶದ ಎಂಎಸ್ಸಿ ವಿದ್ಯಾರ್ಥಿ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು.

ಲಾಕ್‌ಡೌನ್‌ ಬಳಿಕ ಹೆಚ್ಚು ಪ್ರಕರಣ ಪತ್ತೆ: ಎಚ್ಚೆತ್ತ ನಗರ ಪೊಲೀಸ್‌ ಆಯುಕ್ತರು ಡ್ರಗ್ಸ್‌ ಜಾಲ ಬೇಧಿಸಲು ಪ್ರತ್ಯೇಕ ತಂಡ ರಚಿಸಿದ್ದರು. ಪ್ರತಿ ಠಾಣಾ ವ್ಯಾಪ್ತಿಯಲ್ಲೂ ಅಧಿಕಾರಿ-ಸಿಬ್ಬಂದಿ ಜಾಲದ ವಿರುದ್ಧ ಕಾರ್ಯಾಚರಣೆಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಎಡೆಬಿಡದೆ ಕಾರ್ಯಾಚರಣೆ ನಡೆಸಿದರು. ಈ ಮಧ್ಯೆ ಕೇಂದ್ರ ಸರ್ಕಾರ ಸ್ವಾಮ್ಯದಎನ್‌ಸಿಬಿ ಅಧಿಕಾರಿಗಳು ಸ್ಯಾಂಡಲ್‌ವುಡ್‌ ನಟ, ನಟಿಯರಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಬೃಹತ್‌ ಜಾಲವೊಂದನ್ನು ಬೇಧಿಸಿದರು. ಜಾಲದಲ್ಲಿ ಭಾರಿ ಕುಳಗಳು ಸಿಕ್ಕಿಬಿದ್ದವು. ನಟಿ ರಾಗಿಣಿ, ಸಂಜನಾ ಗಲ್ರಾನಿ, ದೆಹಲಿಯ ಡ್ರಗ್ಸ್‌ ಪೆಡ್ಲರ್‌ ವಿರೇನ್‌ ಖನ್ನಾ, ಅಂತಾರಾಷ್ಟ್ರೀಯಪೆಡ್ಲರ್‌ಗಳು ಸೇರಿ ಸುಮಾರು 18 ಮಂದಿ ಭಾರಿ ವ್ಯಸನಿಗಳು ಹಾಗೂ ಮಾರಾಟಗಾರರನ್ನು ಬಂಧಿಸಿದ್ದರು. ಅಷ್ಟೇ ಅಲ್ಲದೆ, ಆರೇಳು ವರ್ಷಗಳ ಕಾಲ ನಗರದಲ್ಲಿ ತಮ್ಮ ಅಕ್ರಮ ದಂಧೆ ನಡೆಸುತ್ತಿದ್ದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪೆಡ್ಲರ್‌ಗಳನ್ನು ಬಲೆಗೆ ಕೆಡವಿದರು.

ಇದೇ ವೇಳೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿ, ಮತ್ತೂಬ್ಬ ಮಾಜಿ ಸಚಿವ ಜೀವರಾಜ್‌ ಆಳ್ವ ಪುತ್ರ ಆದಿತ್ಯ ಆಳ್ವ ಕೂಡ ಪ್ರಕರಣದಲ್ಲಿ ತೊಡಗಿರುವುದು ಪತ್ತೆಯಾಗಿದೆ. ಈ ಮಧ್ಯೆ ದರ್ಶನ್‌ ಲಮಾಣಿ ತಂಡದಲ್ಲಿ ಗುರುತಿಸಿಕೊಂಡು ಸರ್ಕಾರಿ ಸೇರಿ ಅನೇಕ ಗೇಮ್‌ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಹಣ ವಸೂಲಿ, ಅಂತಾರಾಷ್ಟ್ರೀಯ ಡ್ರಗ್ಸ್‌ ಡಿಲೀರ್‌ಗಳ ಜತೆ ಡಾರ್ಕ್‌ನೆಟ್‌ ಮೂಲಕ ವ್ಯವಹಾರ ನಡೆಸುತ್ತಿದ್ದ ಶ್ರೀಕೃಷ್ಣ ಅಲಿಯಾಸ್‌ ಶ್ರೀ ಕೂಡ ನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕೋವಿಡ್ ಕಾರಣದಿಂದ ಹೊಸ ವರ್ಷಕ್ಕೆ ಬ್ರೇಕ್‌ :

ಪ್ರತಿ ವರ್ಷ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌, ಕೋರಮಂಗಲ ಸೇರಿ ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ಹೊಸ ವರ್ಷಾಚರಣೆ ನಡೆಯುತ್ತಿತ್ತು. ಮಾದಕ ವಸ್ತುಗಳ ಮಾರಾಟವೂ ಅಷ್ಟೇ ಪ್ರಮಾಣದಲ್ಲಿತ್ತು. ಆದರೆ, ಈ ವರ್ಷ ಕೋವಿಡ್ ಕಾರಣದಿಂದ ಆಚರಣೆ ಇಲ್ಲ. ಜತೆಗೆ ಡ್ರಗ್ಸ್‌ ಪೂರೈಕೆಗೂ ದೊಡ್ಡ ಮಟ್ಟದಲ್ಲಿ ಬ್ರೇಕ್‌ ಬೀಳಲಿದೆ.

ಪ್ರತಿ ವರ್ಷ ಹೊಸವರ್ಷ ಆರಂಭದಲ್ಲಿ ಡ್ರಗ್ಸ್‌ ಜಾಲದ ಮೇಲೆ ನಿಗಾವಹಿಸುತ್ತಿದ್ದರು. ಆದರೆ, ಈ ಬಾರಿ ವರ್ಷದ ಮಧ್ಯದಿಂದಲೇ ಡ್ರಗ್ಸ್‌ ಜಾಲದ ವಿರುದ್ಧ ಸಮರ ಸಾರಿದ್ದಾರೆ. ಹೀಗಾಗಿ ಈ ಬಾರಿ ವರ್ಷಾಚರಣೆ ಡ್ರಗ್ಸ್‌ ಪೂರೈಕೆ ಅಥವಾ ಮಾರಾಟಕ್ಕೆ ಅವಕಾಶ ಇರುವುದಿಲ್ಲಎಂದು ಹೇಳಲಾಗುತ್ತಿದೆ. ಮತ್ತೂಂದೆಡೆ ಬೆಂಗಳೂರು ನಗರ ಪೊಲೀಸರು ಡ್ರಗ್ಸ್‌ ವಿರುದ್ಧ ಕಾರ್ಯಾಚರಣೆ ನಡೆಸಲೆಂದೆ ಸಿಸಿಬಿ, ಸ್ಥಳೀಯ ಪೊಲೀಸರ ಮಟ್ಟದಲ್ಲೇ ವಿಶೇಷ ತಂಡಗಳನ್ನು ರಚಿಸಲಾಗಿದೆ. ಪ್ರತಿ ವರ್ಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದ ಹೋಟೆಲ್‌, ಪಾರ್ಟಿ, ರೆಸ್ಟೋರೆಂಟ್‌, ರೆಸಾರ್ಟ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಜತೆಗೆ ವಿದೇಶಿ ಪ್ರಜೆಗಳು, ಸ್ಥಳೀಯ ಅನುಮಾನಿತ ಪೆಡ್ಲರ್‌ಗಳು ಮಾತ್ರವಲ್ಲ, ಕೆಲ ವ್ಯಸನಿಗಳ ಚಟುವಟಿಕೆಗಳ ಬಗ್ಗೆ ಗಮನ ಹರಿಸಲಾಗಿದೆ. ಇದರೊಂದಿಗೆ ಮುಖ್ಯವಾಗಿ ಆನ್‌ಲೈನ್‌ ಮಾರುಕಟ್ಟೆ ಮೇಲೂ ನಿಗಾವಹಿಸಲಾಗಿದೆ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

 ಮನೆಗೆ ಸಿಮೀತವಾಗ್ತಾರಾ ಸೆಲೆಬ್ರಿಟಿಗಳು? :  ಹೊಸ ವರ್ಷ ಸ್ವಾಗತಿಸಲು ಸೆಲೆಬ್ರಿಟಿಗಳು, ನಟ, ನಟಿಯರು, ಹೋಟೆಲ್‌, ರೆಸಾರ್ಟ್‌ಗಳಿಗೆ ಹೋಗುತ್ತಾರೆ. ಇನ್ನು ಕೆಲ ನಟ, ನಟಿಯರು ಶ್ರೀಲಂಕಾ,ಗೋವಾದಲ್ಲಿ ಕೆಸಿನೋಗಳಲ್ಲಿ ಹೊಸವರ್ಷಾಚರಣೆಮಾಡುತ್ತಿದ್ದರು. ಆದರೆ, ಕೊರೊನಾ ಕಾರಣ ಎಲ್ಲಿಯೂ ಹೋಗುವಂತಿಲ್ಲ. ಮತ್ತೂಂದೆಡೆ ಪೊಲೀಸರು ಕೂಡ ಕೆಲ ನಿರ್ದಿಷ್ಟ ಸೆಲೆಬ್ರಿಟಿಗಳ ಹೊಸ ವರ್ಷದ ಯೋಜನೆ ಮೇಲೆ ನಿಗಾವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮನೆಯಲ್ಲೇ ಹೊಸವರ್ಷ ಸ್ವಾಗತಿಸಲಿದ್ದಾರೆ ಎನ್ನಲಾಗಿದೆ.

ಮೂರು ವರ್ಷದಲ್ಲಿ ಹೆಚ್ಚು ಪ್ರಕರಣ : ಕಳೆದ ನಾಲ್ಕು ವರ್ಷಕ್ಕೆ ಹೊಲಿಸಿದರೆ 2020ರಲ್ಲಿಯೇ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ ಸೇರಿ ಅತೀ ಹೆಚ್ಚು ಡ್ರಗ್ಸ್‌ ಪ್ರಕರಣಗಳು ಪತ್ತೆಯಾಗಿವೆ. ವಿದೇಶಿ ಹಾಗೂ ಸ್ಥಳೀಯ ಆರೋಪಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. 2017ರಲ್ಲಿ 354, 2018ರಲ್ಲಿ 286, 2019ರಲ್ಲಿ 900 ಹಾಗೂ 2020ರಲ್ಲಿ ನವೆಂಬರ್‌ ಅಂತ್ಯದವರೆಗೆ 2500 ಪ್ರಕರಣಗಳುದಾಖಲಾಗಿವೆ. ಬಂಧಿತ ವಿದೇಶಿಯರ ಸಂಖ್ಯೆ 2017-40, 2018-60, 2019-50 ಹಾಗೂ 2020ರಲ್ಲಿ 100ಕ್ಕೂ ಅಧಿಕ ಮಂದಿ ಬಂಧಿಸಲಾಗಿದೆ. ಈ ಪೈಕೆ ನೈಜಿರಿಯಾ ಪ್ರಜೆಗಳೇ ಅಧಿಕವಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನೆರೆ ರಾಜ್ಯಗಳ ಜತೆಯೂ ಸಭೆ :  ಬೆಂಗಳೂರು ನಗರ ಪೊಲೀಸರು ಈ ಬಾರಿ ಡ್ರಗ್ಸ್‌ ಜಾಲದ ವಿರುದ್ಧ ಕಾರ್ಯಾಚರಣೆಗೆ ನೆರೆ ರಾಜ್ಯದ ಪೊಲೀಸರ ನೆರವು ಕೋರಿದ್ದಾರೆ. ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಸ್ಥಳೀಯ ಪೊಲೀಸರ ಜತೆ ನಿರಂತರ ಸಂಪರ್ಕದಲ್ಲಿದ್ದು, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಂಪೂರ್ಣವಾಗಿ ಡ್ರಗ್ಸ್‌ ಮಾರಾಟಕ್ಕೆ ನಿರ್ಬಂಧ ಹೇರಲಿದ್ದೇವೆ ಎಂದು ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ನಿಗಾ? :  ಹೋಟೆಲ್‌, ರೆಸಾರ್ಟ್‌,ರೆಸ್ಟೋರೆಂಟ್‌, ಮಾಲ್‌, ಅಂಚೆ ಕಚೇರಿ, ವಿಮಾನ ನಿಲ್ದಾಣ, ರೈಲು, ಬಸ್‌ ನಿಲ್ದಾಣ, ವಿದೇಶಿ ಪ್ರಜೆಗಳು ವಾಸವಾಗಿರುವ ಸ್ಥಳಗಳು.

ಈ ಬಾರಿಯ ಹೊಸವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಡ್ರಗ್ಸ್‌ ಮಾರಾಟ ಅಥವಾ ಬಳಕೆಗೆ ಅವಕಾಶ ಕೊಡುವುದಿಲ್ಲ. ಎಲ್ಲೆಡೆಯೂ ಅಧಿಕಾರಿ-ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ. ಕೆಲ ನಿರ್ದಿಷ್ಟ ವ್ಯಕ್ತಿಗಳು ಮತ್ತು ಪಾರ್ಟಿ ಹಾಗೂ ಇನ್ನಿತರೆ ಸ್ಥಳಗಳ ಚಟುವಟಿಕೆಗಳ ಮೇಲೂ ನಿಗಾವಹಿಸಲಾಗಿದೆ. ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ

 

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next