Advertisement

ಮೈಸೂರು ವಿವಿಯಿಂದ 4 ಚಿನ್ನದ ಪದಕ, 7 ನಗದು ಬಹುಮಾನ ಪಡೆದ ಮಹಿಳಾ ಕಾನ್‌ಸ್ಟೇಬಲ್

09:49 AM Mar 08, 2021 | Team Udayavani |

ಚಾಮರಾಜನಗರ: ನಗರದ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿರುವ ಕಾವೇರಿ, ಹಳ್ಳಿಯ ಬಡತನದಿಂದ ಒಡಮೂಡಿದ ವಿಶಿಷ್ಟ ಸಾಧಕಿ.ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪದವಿಯಲ್ಲಿ 4 ಚಿನ್ನದ ಪದಕ ಹಾಗೂ 7 ನಗದು ಬಹುಮಾನಗಳನ್ನು ಪಡೆದ ಅಪರೂಪದ ಸಾಧನೆ ಮಾಡಿದ್ದಾರೆ.

Advertisement

ಕಾವೇರಿ ಅವರು 2020ರ ಆಗಸ್ಟ್ 24ರಂದು ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಹುದ್ದೆಗೆ ಸೇರಿದರು. ತರಬೇತಿ ಪೂರ್ವದಲ್ಲಿ ನಗರದ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಮೈಸೂರಿನ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಕಾವೇರಿ ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದವರು. ಹಿಂದುಳಿದ ಉಪ್ಪಾರ ಸಮುದಾಯದ, ಕಡು ಬಡ ಕುಟುಂಬದಿಂದ ಬಂದವರು.  ತಂದೆ ಬೆಳ್ಳಶೆಟ್ಟಿ, ತಾಯಿ ಮಲ್ಲಿಗಮ್ಮ. ಸಣ್ಣ ಪ್ರಮಾಣದ ಭೂಮಿಯುಳ್ಳ, ಒಣಬೇಸಾಯ ನೆಚ್ಚಿದ ರೈತರು.

ಇದನ್ನೂ ಓದಿ:ಹುಟ್ಟಿನಿಂದ ಸಾಯುವ ತನಕ ಹೆಣ್ಣಿನ ಮಹತ್ವ ಮರೆಯುವುದುಂಟೆ

ಕಾವೇರಿ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. 2019ರ ಮೇನಲ್ಲಿ ನಡೆದ ಅಂತಿಮ ಬಿಎ ಅರ್ಥಶಾಸ್ತ್ರ ವಿಷಯದಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೇ ಅರ್ಥಶಾಸ್ತ್ರ ವಿಷಯದಲ್ಲಿ 1000 ಅಂಕಗಳಿಗೆ 910 ಅಂಕ ಗಳಿಸಿ ಇಡೀ ವಿಶ್ವ ವಿದ್ಯಾಲಯಕ್ಕೆ ಮೊದಲಿಗರಾಗಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ನಡೆದ ಮೈಸೂರು ವಿವಿ ಘಟಿಕೋತ್ಸವದಲ್ಲಿ ಅವರಿಗೆ ನಾಲ್ಕು ಚಿನ್ನದ ಪದಕ ಮತ್ತು 7 ನಗದು ಬಹುಮಾನವನ್ನು ಪ್ರದಾನ ಮಾಡಲಾಗಿದೆ.

Advertisement

ಚಿನ್ನದ ಪದಕ ಪಡೆದ ಕಾವೇರಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರು ತಮ್ಮ ಕಚೇರಿಯಲ್ಲಿ  ಸನ್ಮಾನಿಸಿದ್ದರು. ಕಾವೇರಿ ಅವರ ಸಾಧನೆಯನ್ನು ಎಸ್ಪಿಯವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದರು.

ಬಹಳ ಹಿಂದುಳಿದ ಉಪ್ಪಾರ ಸಮುದಾಯದ ಬಡ ಕುಟುಂಬದಿಂದ ಬಂದ ಹೆಣ್ಣು ಮಗಳೊಬ್ಬಳು ಪದವಿ ಪೂರೈಸುವುದೇ ಒಂದು ಸಾಹಸದ ಕೆಲಸ. ಈ ಸಮಾಜದಲ್ಲಿ ಬಾಲ್ಯ ವಿವಾಹಗಳು ಹೆಚ್ಚು. ಹೆಣ್ಣು ಮಕ್ಕಳನ್ನು ಎಸ್‌ಎಸ್‌ಎಲ್‌ಸಿವರೆಗೆ ಓದಿಸಿದರೆ ಅದೇ ಹೆಚ್ಚೆಂಬ ಭಾವನೆಯಿದೆ. ಇಂಥ ಸನ್ನಿವೇಶದಲ್ಲಿ ಕಾವೇರಿ ಅವರು ಪದವಿ ಪೂರೈಸಿ, ಅರ್ಥಶಾಸ್ತ್ರ ವಿಷಯದಲ್ಲಿ ಇಡೀ ಮೈಸೂರು ವಿವಿ ಗೆ ಪ್ರಥಮಳಾಗಿ, 4 ಚಿನ್ನದ ಪದಕ ಪಡೆಯುವುದು ಕಡಿಮೆ ಸಾಧನೆಯೇನಲ್ಲ.

ಇದನ್ನೂ ಓದಿ: Women’s Day Special: ಮನೆ ಮನೆಗೆ ಪತ್ರಿಕೆ ವಿತರಿಸುವ 4 ಛಲಗಾತಿ ಮಹಿಳೆಯರ ಬದುಕಿನ ಚಿತ್ರಣ

ತಮ್ಮ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ಕಾವೇರಿ, ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ನೋಡಿದಾಗ, ಓದಿ ಏನಾದರೂ ಸಾಧಿಸಿ ಉತ್ತಮ ಹುದ್ದೆ ಪಡೆಯಬೇಕೆಂಬ ಅಭಿಲಾಷೆ ಇತ್ತು. ಹಾಗಾಗಿ ಹೆಚ್ಚು ಶ್ರಮವಹಿಸಿ ಓದುತ್ತಿದ್ದೆ. ನಾನು ಕಷ್ಟಪಟ್ಟಿದ್ದಕ್ಕೂ ಉತ್ತಮ ಪ್ರತಿಫಲ ಬಂತು. ಪ್ರತಿ ಸೆಮಿಸ್ಟರ್‌ನಲ್ಲಿ ಅತ್ಯಧಿಕ ಅಂಕ ಪಡೆಯುತ್ತಿದ್ದೆ. ನನ್ನ ಆಸಕ್ತಿಯ ವಿಷಯ ಅರ್ಥಶಾಸ್ತ್ರ. ಇದರಲ್ಲಿ ವಿವಿಗೇ ಪ್ರಥಮ ಸ್ಥಾನ ಬಂತು. 4 ಚಿನ್ನದ ಪದಕ, 7 ನಗದು ಬಹುಮಾನ ದೊರಕಿತು. ನನ್ನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಉದ್ಯೋಗವೇ ಮುಖ್ಯ. ಪೊಲೀಸ್ ಹುದ್ದೆಯಲ್ಲೇ ಮುಂದುವರೆಯುತ್ತೇನೆ. ಹುದ್ದೆಯಲ್ಲಿದ್ದುಕೊಂಡೇ ಇಲಾಖಾ ಪರೀಕ್ಷೆ ಎದುರಿಸಿ ಪಿಎಸ್‌ಐ ಆಗುವ ಗುರಿ ಹೊಂದಿದ್ದೇನೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next