ಮುಂಬೈ: ದರೋಡೆಕೋರರು ಮತ್ತು ಮಾದಕ ವ್ಯಸನಿಗಳ ಗುಂಪೊಂದು ಪೊಲೀಸ್ ಕಾನ್ಸ್ ಟೇಬಲ್ ಗೆ ಬಲವಂತವಾಗಿ ವಿಷ ಮಿಶ್ರಿತ ಇಂಜೆಕ್ಷನ್ ಚುಚ್ಚಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೂರು ದಿನಗಳ ಬಳಿಕ ಸಾವನ್ನಪ್ಪಿರುವ ಘಟನೆ ಮುಂಬೈನ ಥಾಣೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು
ಮೃತ ಕಾನ್ಸ್ ಟೇಬಲ್ ಥಾಣೆಯ ನಿವಾಸಿಯಾಗಿದ್ದು, ವರ್ಲಿಯ ಸ್ಥಳೀಯ ಶಸ್ತ್ರಾಸ್ತ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವರದಿಯ ಪ್ರಕಾರ, ಕಾನ್ಸ್ ಟೇಬಲ್ ವಿಶಾಲ್ ಪವಾರ್ ಅವರು ಸಿವಿಲ್ ಡ್ರೆಸ್ ನಲ್ಲಿದ್ದು, ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ರಾತ್ರಿ 9.30ರ ಸುಮಾರಿಗೆ ಮಾಟುಂಗಾ ಮತ್ತು ಸೈಯಾನ್ ನಡುವೆ ರೈಲು ನಿಧಾನವಾಗುತ್ತಿದ್ದಂತೆಯೇ ಹಳಿ ಸಮೀಪ ನಿಂತಿದ್ದ ವ್ಯಕ್ತಿಯೊಬ್ಬ ಕೈಯಿಂದ ಹೊಡೆದಿದ್ದು, ಈ ಸಂದರ್ಭದಲ್ಲಿ ಪವಾರ್ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು. ಇದರ ಪರಿಣಾಮ ಮೊಬೈಲ್ ಕೆಳಗೆ ಬಿದ್ದ ತಕ್ಷಣ ಕಳ್ಳ ಅದನ್ನು ತೆಗೆದುಕೊಂಡಿದ್ದ. ರೈಲು ನಿಧಾನಕ್ಕೆ ಚಲಿಸುತ್ತಿದ್ದು, ಪವಾರ್ ಕೂಡಲೇ ಕೆಳಗಿಳಿದು ಕಳ್ಳನನ್ನು ಹಿಂಬಾಲಿಸಿದ್ದರು.
ಸ್ವಲ್ಪ ದೂರ ಹೋದ ನಂತರ ಪವಾರ್ ಸುತ್ತ-ಮುತ್ತ ದರೋಡೆಕೋರರು ಹಾಗೂ ಮಾದಕ ವ್ಯಸನಿಗಳ ಗುಂಪು ಸುತ್ತುವರಿದಿರುವುದು ಗಮನಕ್ಕೆ ಬಂದಿತ್ತು. ಆಗ ಪವಾರ್ ಅವರನ್ನು ಕಳ್ಳ ತಳ್ಳುತ್ತಿದ್ದಾಗ, ಇಡೀ ಗುಂಪು ಹಿಡಿದುಕೊಂಡುಬಿಟ್ಟಿತ್ತು. ಆಗ ವ್ಯಕ್ತಿಯೊಬ್ಬ ವಿಷಮಿಶ್ರಣದ ಇಂಜೆಕ್ಷನ್ ಚುಚ್ಚಿದ್ದ, ಮತ್ತೊಬ್ಬ ಬಾಯಿಗೆ ಬಲವಂತವಾಗಿ ಕೆಂಪು ಮಿಶ್ರಣದ ದ್ರವವನ್ನು ಸುರಿದಿದ್ದ.
ಇದಾದ ನಂತರ ಪವಾರ್ ಕುಸಿದು ಬಿದ್ದು, ಪ್ರಜ್ಞೆ ತಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮರುದಿನ ಬೆಳಗ್ಗೆ ಪ್ರಜ್ಞೆ ಬಂದಾಗ ಪವಾರ್ ಹೇಗೋ ಮನೆ ತಲುಪಿದ್ದರು ಎಂದು ವರದಿ ವಿವರಿಸಿದೆ.
ಆರೋಗ್ಯ ಹದಗೆಟ್ಟಿರುವುದನ್ನು ಗಮನಿಸಿದ ಮನೆಯವರು ಸೋಮವಾರ ಪವಾರ್ ಅವರನ್ನು ಥಾಣೆಯ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಬಗ್ಗೆ ಸ್ಥಳೀಯ ಕೋಪ್ರಿ ಪೊಲೀಸ್ ಠಾಣಾಧಿಕಾರಿ ಹೇಳಿಕೆಯೊಂದಿಗೆ ದೂರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪವಾರ್ ಬುಧವಾರ ಕೊನೆಯುಸಿರೆಳೆದಿರುವುದಾಗಿ ಡೆಪ್ಯುಟಿ ಪೊಲೀಸ್ ಕಮಿಷನರ್ ಮನೋಜ್ ಪಾಟೀಲ್ ತಿಳಿಸಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಐಪಿಸಿ ಸೆಕ್ಷನ್ 302ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಸೆರೆಹಿಡಿಯಲು ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಡಿಸಿಪಿ ಮನೋಜ್ ಪಾಟೀಲ್ ತಿಳಿಸಿದ್ದಾರೆ.