ಬೆಂಗಳೂರು : ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದು, ಭಾರೀ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದು,ಕಿಂಗ್‌ಪಿನ್ ಸಹಿತ 130 ಕ್ಕೂ ಹೆಚ್ಚು ಜನರನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಆದ ಹಿನ್ನಲೆಯಲ್ಲಿ ನಾಳೆ ನಡೆಯಬೇಕಾಗಿದ್ದ ಪರೀಕ್ಷೆಯನ್ನು ರದ್ದು ಮಾಡಿರುವುದಾಗಿ ನೇಮಕಾತಿ ವಿಭಾಗದ ಎಡಿಜಿಪಿ ಪ್ರಕಟಣೆ ಹೊರಡಿಸಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆಯ ವಿದ್ಯಾಮಂದಿರವೊಂದರ ಕೊಠಡಿಯೊಂದರಲ್ಲಿ ರಾಜ್ಯದ ವಿವಿಧೆಡೆಯಿಂದ ಪರೀಕ್ಷಾರ್ಥಿಗಳನ್ನು ಕರೆಸಿಕೊಂಡು ಪ್ರಶ್ನೆ ಪತ್ರಿಕೆ ವಿತರಿಸಲು ಸಿದ್ದತೆ ನಡೆಸಲಾಗಿತ್ತು. ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳಾದ ಬಿ.ಆರ್.ವೇಣುಗೋಪಾಲ್, ಬಿ.ಬಾಲರಾಜು ನೇತೃತ್ವದ 2 ತಂಡಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕಿಂಗ್‌ಪಿನ್ ಶಿವಕುಮಾರ್‌ನನ್ನು ಪ್ರಶ್ನೆ ಪತ್ರಿಕೆಗಳ ಸಹಿತ ಬಂಧಿಸಿದ್ದಾರೆ. ಪ್ರಶ್ನೆ ಪತ್ರಿಕೆ ಪಡೆಯಲು ಬಂದಿದ್ದ 116 ಮಂದಿ ಪರೀಕ್ಷಾರ್ಥಿಗಳು, 7 ಜನ ಚಾಲಕರು ಸೇರಿದಂತೆ ಕೆಲ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಕಿಂಗ್ ಪಿನ್ ಈ ಹಿಂದೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಶಿವಕುಮಾರ್‌ನನ್ನು ಪೊಲೀಸರು ಬಂಧಿಸಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.