ಹನೂರು: (ಚಾಮರಾಜನಗರ) ತಾಲೂಕಿನ ಕಾವೇರಿ ವನ್ಯಜೀವಿ ವಲಯದ ಶಾಗ್ಯ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಸಂಬಂಧ ತನಿಖೆಗೆ ತೆರಳಿದ್ದ ವೇಳೆ ಪೊಲೀಸ್ ಪೇದೆಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.
ಆಂತರಿಕ ಭದ್ರತಾ ವಿಭಾಗದ ಬಾಬು(38) ಮೃತ ದುರ್ದೈವಿ. ಇವರು ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದವರು.
ಘಟನೆ ವಿವರ: ತಾಲೂಕಿನ ಕಾವೇರಿ ವನ್ಯಜೀವಿ ವಲಯದ ಹೂಕುಂದ ಸಮೀಪದ ಕೌಗಲ್ಲು ವಾಚಿಂಗ್ ಟವರ್ ಸಮೀಪ ಕಳೆದ 4-5 ದಿನಗಳ ಹಿಂದೆ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಬಗ್ಗೆ ಮಾಹಿತಿ ಪಡೆದ ಚಾಮರಾಜನಗರ ಜಿಲ್ಲಾ ಪೊಲೀಸರು ತನಿಖೆಗಾಗಿ ಆಂತರಿಕ ಭದ್ರತಾ ವಿಭಾಗದ ಇನ್ಸ್‍ಪೆಕ್ಟರ್ ಚನ್ನನಾಯಕ್ ಮತ್ತು ಸಿಬ್ಬಂದಿಗಳ ತಂಡವನ್ನು ಅರಣ್ಯ ಪ್ರದೇಶಕ್ಕೆ ಕಳುಹಿಸಿದ್ದರು.ಈ ವೇಳೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಇನ್ಸ್‍ಪೆಕ್ಟರ್ ಚನ್ನನಾಯಕ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು.ಈ ವೇಳೆ ಈ ತಂಡದಲ್ಲಿದ್ದ ಪೇದೆ ಬಾಬು ದಿಢೀರ್ ಕುಸಿದುಬಿದ್ದಿದ್ದಾನೆ. ಕೂಡಲೇ ಅವರನ್ನು ಸಮೀಪದ ಬಂಡಳ್ಳಿ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆತರಲು ಪ್ರಯತ್ನಿಸಿದರಾದರೂ ಮಾರ್ಗಮಧ್ಯೆಯೇ ಅಸುನೀಗಿದ್ದಾರೆ.
ಪೊಲೀಸರಿಗೆ ತಲೆನೋವಾದ ಸ್ಯಾಟಲೈಟ್‍ಫೋನ್ ಬಳಕೆ: ಚಾಮರಾಜನಗರ ಜಿಲ್ಲೆಯಲ್ಲಿ ಆಗಾಗ ಸ್ಯಾಟಲೈಟ್ ಫೋನ್ ಬಳಕೆಯಾಗುತ್ತರುವುದು ಪೊಲೀಸ್ ಅಧಕಾರಗಳಗೆ ತಲೆ ನೋವಾಗದೆ ಪರಿಣಮಿಸಿದೆ. ಕಳೆದ 4-5 ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮ ಕೆಬ್ಬೇಪುರ ಬಳಿಯ ಕರಡಿಗುಡ್ಡ ಮತ್ತು ಚಾಮರಾಜನಗರ ತಾಲೂಕಿನ ಗಣಿಗಗೆರೆ ಸಮೀಪ ಸ್ಯಾಟಲೈಟ್ ಫೋನ್ ಬಳಕೆಯಾಗಿದ್ದು ಆಂತರಿಕ ಭದ್ರತಾ ವಿಭಾಗದಿಂದ ತನಿಖೆ ಕೈಗೊಳ್ಳಲಾಗಿದೆ. ಇದೀಗ ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದ್ದು ನಕ್ಸಲ್ ಚಟುವಟಿಕೆಯೋ ಅಥವಾ ಉಗ್ರಗಾಮಿಗಳ ಚಟುವಟಿಕೆಯೋ ಎಂಬುವ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.