ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಶನಿವಾರ ಪೊಲೀಸ್ ದೂರು ನೀಡಿದೆ.
ಶಾಸಕರಾದ ಬಿ.ಎನ್.ವಿಜಯಕುಮಾರ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿಜೆಪಿ ನಗರಾಧ್ಯಕ್ಷ ಸದಾಶಿವ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ ಮತ್ತು ಬಿಜೆಪಿ ಯುವ ಮೋರ್ಚಾ ಬೆಂಗಳೂರು ನಗರ ಘಟಕದ ಅಧ್ಯಕ್ಷ ಸಪ್ತಗಿರಿ ಗೌಡ ಅವರು ಬೆಂಗಳೂರಿನ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಸಚಿವರ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಸಹಿಸದೇ ಸಚಿವ ರೋಷನ್ ಬೇಗ್ ಅವರು ಅ. 3ರಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾನಹಾನಿಕರ ಮತ್ತು ಅಶ್ಲೀಲ ಪದಗಳನ್ನು ಬಳಸಿದ್ದಾರೆ. ಈ ಹೇಳಿಕೆ ಪ್ರಧಾನಿ ಮೋದಿ ಅವರ ಗೌರವಕ್ಕೆ ಧಕ್ಕೆ ತರುವಂತಿದೆ. ತಮಿಳಿನಲ್ಲಿ ಅಶ್ಲೀಲ ಪದ ಬಳಕೆ ಮಾಡುವ ಮೂಲಕ ಸಚಿವರು ವಾಕ್ ಸ್ವಾತಂತ್ರÂದ ಎಲ್ಲೆ ಮೀರಿದ್ದಾರೆ. ಅದ್ದರಿಂದ ರೋಷನ್ ಬೇಗ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499ರ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಬೇಕು ಎಂದು ಕೋರಿದ್ದಾರೆ. ಇದೇ ವೇಳೆ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಅವರು ಬಂಟ್ವಾಳ ನಗರ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದು, ಬೇಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಧಾನಿ ಮೋದಿ ಅವರ ವಿರುದ್ಧ ರೋಷನ್ ಬೇಗ್ ಅಶ್ಲೀಲ ಪದ ಬಳಕೆ ಮಾಡಿದ್ದರೆ, ಸಿಎಂ ಸಿದ್ದರಾಮಯ್ಯ ಪೆಟ್ರೋಲ್ ದರ ಇಳಿಸುವಂತೆ ಸಲಹೆ ನೀಡಿದ ಕೇಂದ್ರ ಪೆಟ್ರೋಲಿಯಂ ಸಚಿವರ ಕುರಿತಾಗಿ “ಯಾರ್ರೀ ಅವನು’ ಎಂದು ಲಘುವಾಗಿ ಮಾತನಾಡಿದ್ದು ಸರಿಯಲ್ಲ.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಪ್ರಧಾನಿ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿರುವ ರೋಷನ್ ಬೇಗ್ ಸಚಿವ-ಶಾಸಕರಾಗಲು ನಾಲಾಯಕ್. ತಮ್ಮ ಸಂಸ್ಕೃತಿಯನ್ನು ಅವರೇ ತೋರಿಸಿದ್ದಾರೆ. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು.
– ಜಗದೀಶ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕ