ನವದೆಹಲಿ : ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ದೆಹಲಿ ಮೂಲದ ವಕೀಲರೊಬ್ಬರು ಮೆಹಬೂಬಾ ವಿರುದ್ಧ ದೂರು ದಾಖಲಿಸಿದ್ದು, ಅವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.
ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನದ ಕುರಿತು ಮೆಹಬೂಬಾ ಅವರು ಸೋಮವಾರ ಟ್ವೀಟ್ ಮಾಡಿದ್ದಾರೆ. ಅವನ (ಆರ್ಯನ್) ಉಪನಾಮ “ಖಾನ್” ಆಗಿದ್ದರಿಂದ ಆತನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. “ಆರ್ಯನ್ ಖಾನ್ ತಮ್ಮ ಉಪನಾಮದಿಂದಾಗಿ ಹೀಗೆ ಕೇಂದ್ರೀಯ ಕಾನೂನು ಜಾರಿ ಸಂಸ್ಥೆಗಳಿಂದ ಟಾರ್ಗೆಟ್ ಆಗಿದ್ದಾರೆ. ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಬಿಜೆಪಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಆರೋಪಿಯಾಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಕೇಂದ್ರ ಸರ್ಕಾರ ಆರ್ಯನ್ ಖಾನ್ ಬೆನ್ನು ಬಿದ್ದಿದೆ ಎಂದಿದ್ದಾರೆ.
“ನಾಲ್ಕು ರೈತರನ್ನು ಕೊಂದ ಆರೋಪ ಹೊತ್ತಿರುವ ಕೇಂದ್ರ ಸಚಿವರ ಪುತ್ರನ ವಿರುದ್ಧ ತನಿಖೆ ಶುರು ಮಾಡುವ ಬದಲು, 23 ವರ್ಷದ ಯುವಕನ ಹಿಂದೆ ಬಿದ್ದಿವೆ. ಆತನ ಉಪನಾಮ “ಖಾನ್” ಎಂದು ಇರುವುದೇ ಇದಕ್ಕೆ ಮುಖ್ಯ ಕಾರಣ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ಮುಫ್ತಿ ಅವರ ಹೇಳಿಕೆಯನ್ನು ಖಂಡಿಸಿ ವಕೀಲ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಎರಡು ಸಮುದಾಯಗಳ ನಡುವೆ ಕೋಮ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸಿದ ಆರೋಪದಲ್ಲಿ ಭಾರತೀಯ ದಂಡ ಸಂಹಿತೆಯ ಹಲವು ಕಲಂಗಳಡಿ ಮುಫ್ತಿ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಅವರು ಕೋರಿದ್ದಾರೆ.