Advertisement

ಅಫ್ಘಾನ್‌ ವಿದ್ಯಾರ್ಥಿಗಳ ಆತಂಕ ಆಲಿಸಿದ ಪೊಲೀಸ್‌ ಆಯುಕ್ತ: ಸುರಕ್ಷೆಯ ಭರವಸೆ ನೀಡಿದ ಕಮಿಷನರ್‌

11:04 PM Aug 21, 2021 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅಫ್ಘಾನಿಸ್ಥಾನದ ವಿದ್ಯಾರ್ಥಿಗಳಿಗೆ ಮತ್ತವರ ಕುಟುಂಬ ಗಳಿಗೆ ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಸುರಕ್ಷೆಯ ಭರವಸೆ ನೀಡಿದ್ದಾರೆ.

Advertisement

ಮಂಗಳೂರು ವಿ.ವಿ., ನಿಟ್ಟೆ ಶಿಕ್ಷಣ ಸಂಸ್ಥೆ ಹಾಗೂ ಸಂತ ಅಲೋಶಿಯಸ್‌ ಕಾಲೇಜು ಸೇರಿದಂತೆ 3 ವಿದ್ಯಾ ಸಂಸ್ಥೆಗ ಳಲ್ಲಿ 58 ವಿದ್ಯಾರ್ಥಿಗಳು (ಪದವಿ, ಸ್ನಾತಕೋತ್ತರ, ಪಿಎಚ್‌ಡಿ) ವ್ಯಾಸಂಗ ಮಾಡುತ್ತಿದ್ದಾರೆ. ಅವರ ಜತೆಗೆ ಕೆಲವರ ಕುಟುಂಬ ಸದಸ್ಯರೂ ಇದ್ದಾರೆ.

ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆ ಯಲ್ಲಿ ಅಲ್ಲಿನ ತಮ್ಮ ಕುಟುಂಬದವರ ಬಗ್ಗೆ ಆತಂಕಕ್ಕೆ ಒಳಗಾಗಿರುವ ವಿದ್ಯಾರ್ಥಿಗಳು ಹಾಗೂ ಅವರ ಮನೆಯವರು ಶನಿವಾರ ಪೊಲೀಸ್‌ ಆಯುಕ್ತರ ಕಚೇರಿಗೆ ಭೇಟಿ ನೀಡಿ ಆತಂಕ, ಬೇಡಿಕೆಗಳನ್ನು ಮುಂದಿಟ್ಟರು. ಇಲ್ಲಿ ಶಿಕ್ಷಣ ಪಡೆಯುತ್ತಿರುವ ಕೆಲವು ವಿದ್ಯಾರ್ಥಿಗಳ ವೀಸಾ ಅವಧಿ ಸೆಪ್ಟಂಬರ್‌ನಲ್ಲಿ ಕೊನೆಗೊಳ್ಳುತ್ತಿದ್ದು, ಅದನ್ನು ವಿಸ್ತರಿಸುವ ಕುರಿತಂತೆಯೂ ಮನವಿ ಸಲ್ಲಿಸಿದರು.

ಭಾರತದ ಮೇಲೆ ಅಪಾರ ಗೌರವ :

ವಿದ್ಯಾರ್ಥಿಗಳ ಒಕ್ಕೂಟದ ಪ್ರಮುಖ ನಾಸಿರ್‌ ಅಹ್ಮದ್‌ ಮಾತನಾಡಿ, ಮಂಗಳೂರಿನಲ್ಲಿರುವ ಅಫ್ಘಾನ್‌ ವಿದ್ಯಾರ್ಥಿಗಳ ಬಗ್ಗೆ ಪೊಲೀಸ್‌ ಆಯುಕ್ತರು ಉತ್ತಮವಾಗಿ ಸ್ಪಂದಿಸಿದ್ದಾರೆ. 15 ವರ್ಷಗಳಿಂದೀಚೆಗೆ ಅಫ್ಘಾನ್‌ನ ಹಲವಾರು ವಿದ್ಯಾರ್ಥಿಗಳು ಮಂಗಳೂರಿಗೆ ಉನ್ನತ ವ್ಯಾಸಂಗಕ್ಕಾಗಿ ಆಗಮಿಸುತ್ತಿದ್ದಾರೆ. ಭಾರತದ ಬಗ್ಗೆ ಅಫ್ಘಾನ್‌ ವಿದ್ಯಾರ್ಥಿಗಳು ಹಾಗೂ ಕುಟುಂಬದವರಿಗೆ ಅಪಾರ ಗೌರವವಿದ್ದು, ಕೇಂದ್ರ ಸರಕಾರ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಸಾಕಷ್ಟು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಪ್ರಸ್ತುತ ಅಫ್ಘಾನಿನ ಬೆಳವಣಿಗೆಯಿಂದಾಗಿ ಅಲ್ಲಿರುವ ನಮ್ಮ ಕುಟುಂಬಗಳ ಬಗ್ಗೆ ಆತಂಕಿತರಾಗಿದ್ದೇವೆ. ಪೊಲೀಸ್‌ ಇಲಾಖೆಯಿಂದ ನಮಗೆ ಸುರಕ್ಷೆಯ ಭರವಸೆ ಲಭಿಸಿದೆ ಎಂದರು.

Advertisement

ಮಂಗಳೂರಿನಲ್ಲಿರುವ ಅಫ್ಘಾನ್‌ನ 58 ವಿದ್ಯಾರ್ಥಿಗಳಲ್ಲಿ 11 ಮಂದಿ ಅಫ್ಘಾನ್‌ಗೆ ತೆರಳಿದ್ದು, ಪರೀಕ್ಷೆಗಾಗಿ ಆಗಮಿಸಲು ಮನವಿ ಮಾಡಿಕೊಂಡಿದ್ದಾರೆ. ಕೆಲವರ ವೀಸಾ ಸೆಪ್ಟಂಬರ್‌ಗೆ ಕೊನೆಗೊಳ್ಳಲಿದೆ. ಇದೇ ವೇಳೆ ಸ್ವದೇಶದಲ್ಲಿನ ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಕೆಲವೊಂದು ಬೇಡಿಕೆಗಳನ್ನು ವಿದ್ಯಾರ್ಥಿಗಳು ಮಂಡಿಸಿದ್ದಾರೆ. ಅವುಗಳನ್ನು ಸಂಬಂಧಪಟ್ಟವರಿಗೆ ತಲುಪಿಸಲಾಗುವುದು. ಇಲ್ಲಿರುವ ಎಲ್ಲರೂ ಅಫ್ಘಾನಿಸ್ಥಾನದಲ್ಲಿನ ತಮ್ಮ ಕುಟುಂಬದ ಜತೆ ಸಂಪರ್ಕದಲ್ಲಿದ್ದಾರೆ. ಅಲ್ಲಿನ ಸೇನೆ, ಪೊಲೀಸ್‌, ಕಾಲೇಜು, ಮಾಧ್ಯಮ, ಮಾನವ ಹಕ್ಕು ಸೇರಿದಂತೆ ವಿವಿಧ ಹುದ್ದೆಗಳಲ್ಲಿದ್ದು, ಇಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಂದವರೂ ಇದ್ದಾರೆ.ಎನ್‌. ಶಶಿಕುಮಾರ್‌, ಮಂಗಳೂರು ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next