Advertisement

ಸಮಸ್ಯೆ ಪರಿಹಾರಕ್ಕೆ ಪೊಲೀಸ್‌ ಜನ ಸಂಪರ್ಕ ಸಭೆಯಲ್ಲಿ ಆಗ್ರಹ

08:19 PM Dec 10, 2019 | Team Udayavani |

ಕುಣಿಗಲ್‌: ಬೈಕ್‌ ವ್ಹೀಲಿಂಗ್‌, ಇಸ್ಪೀಟ್‌ ದಂಧೆ, ಟ್ರಾಫಿಕ್‌ ಸಮಸ್ಯೆ, ದೇವಾಲಯಗಳಲ್ಲಿ ಕಳ್ಳತನ, ಚಿರತೆ ಕಾಟ, ಮದ್ಯ ಅಕ್ರಮ ಮಾರಾಟ, ಎಗ್ಗಿಲ್ಲದೆ ಗಾಂಜಾ ಮಾರಾಟ, ರಾತ್ರಿ ಕಟ್ಟಿದ ದನಗಳ ಕಳವು ಸೇರಿದಂತೆ ಹಲವು ದೂರುಗಳ ಸರಮಾಲೆ ಸಾರ್ವಜನಿಕರು ಬಿಚ್ಚಿಟ್ಟರು. ಪಟ್ಟಣದ ಕಂದಾಯ ಭವನದಲ್ಲಿ ಮಂಗಳವಾರ ಡಿವೈಎಸ್‌ಪಿ ಕೆ.ಎಸ್‌.ಜಗದೀಶ್‌ ಅಧ್ಯಕ್ಷತೆಯಲ್ಲಿ ನಡೆದ ಪೊಲೀಸ್‌ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿದ ನೂರಾರು ನಾಗರಿಕರು ಅನುಭವಿಸಿದ ಹತ್ತಾರು ಸಮಸ್ಯೆ ಅಧಿಕಾರಿಗಳ ಗಮನಕ್ಕೆ ತಂದರು.

Advertisement

ಗಸ್ತು ನಡೆಸುತ್ತಿಲ್ಲ: ಪುರಸಭಾ ಸದಸ್ಯ ರಂಗಸ್ವಾಮಿ ಮಾತನಾಡಿ, ಪಟ್ಟಣದ ಹಲವು ಕಡೆ ಕೆಲ ವ್ಯಕ್ತಿಗಳು ಹದಿ-ಹರಿಯದ ಯುವಕರಿಗೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದಾರೆ. ಕುಣಿಗಲ್‌ ದೊಡ್ಡಕೆರೆ ಹಾಗೂ ಚಿಕ್ಕಕೆರೆ ಏರಿ ಹಾಗೂ ರೂಮ್‌ ಮಾಡಿ ಜೂಜಾಟದಲ್ಲಿ ತೊಡಗಿದ್ದಾರೆ. ಸಮರ್ಪಕವಾಗಿ ಪೊಲೀಸರು ಗಸ್ತು ನಡೆಸುತ್ತಿಲ್ಲ. ಆರ್‌ಟಿಐ ಹೆಸರಿನಲ್ಲಿ ಅಧಿಕಾರಿ ಹೆದರಿಸುವ ಕೆಲಸ ನಡೆಯುತ್ತಿದೆ.

ಹುಚ್ಚಮಾಸ್ತಿಗೌಡ ಹಾಗೂ ಗ್ರಾಮ ದೇವತೆ ವೃತ್ತದ ಬಳಿ ಸಂಜೆ ವೇಳೆ ಪೊಲೀಸ್‌ ಸಿಬ್ಬಂದಿ ಇರದ ಕಾರಣ ಕುಡುಕರ ಹಾಗೂ ಪುಂಡ-ಪೋಕರಿಗಳ ಹಾವಳಿ ಹೆಚ್ಚಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಪೊಲೀಸರು ಜನಪರವಾಗಿ ಕರ್ತವ್ಯ ನಿರ್ವಹಿಸಿದರೆ ಜನ ಸಂಪರ್ಕ ಸಭೆ ಅಗತ್ಯವಿರುವುದಿಲ್ಲ. ಇದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು. ಪಿಎಸ್‌ಐ ನೇತೃತ್ವದಲ್ಲಿ ಸಂಜೆ ವೇಳೆ ಗಸ್ತು ಬಿಗಿಗೊಳಿಸಲಾಗುವುದು ಎಂದು ಡಿವೈಎಸ್‌ಪಿ ಜಗದೀಶ್‌ ಭರವಸೆ ನೀಡಿದರು.

ವ್ಹೀಲಿಂಗ್‌ ಹಾವಳಿ ತಪ್ಪಿಸಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಯಾರ ಭಯವಿಲ್ಲದೆ ಪಡ್ಡೆ ಹುಡುಗರು ಅತಿ ವೇಗವಾಗಿ ವ್ಹೀಲಿಂಗ್‌ ಮಾಡುತ್ತಿದ್ದಾರೆ. ಇದರಿಂದ ಪಟ್ಟಣಕ್ಕೆ ಬಂದಿದ್ದ ಕೆಲ ರೈತರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ ದಲಿತ ಮುಖಂಡ ಬೆನವಾರ ಶೇಷಣ್ಣ, ರಾತ್ರಿ ವೇಳೆ ಬೆಂಗಳೂರಿನಿಂದ ಹಾಸನ ಹಾಗೂ ಮಂಗಳೂರು ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ ಕುಣಿಗಲ್‌ ಪಟ್ಟಣಕ್ಕೆ ಬಾರದೆ ಬೈಪಾಸ್‌ ಮಾರ್ಗದಲ್ಲಿ ಸಂಚರಿಸುತ್ತಿವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

ಮದ್ಯಕ್ಕೆ ಕಡಿವಾಣ ಹಾಕಿ: ಗುನ್ನಾಗರೆ ಗ್ರಾಮದ ಚೇತನ್‌ ಮಾತನಾಡಿ, ಸರ್ಕಾರಿ ಶಾಲಾವರಣದಲ್ಲಿ ಕೆಲ ವ್ಯಕ್ತಿಗಳು ರಾತ್ರಿ ವೇಳೆ ಮದ್ಯ ಸೇವಿಸುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ರಂಗಸ್ವಾಮಿ ಬೆಟ್ಟದ ರಸ್ತೆಯಲ್ಲಿ ಮದ್ಯ ವ್ಯಸನಿಗಳು ರಸ್ತೆಯಲ್ಲಿ ವಾಹನ ನಿಲ್ಲಿಸಿ ಮದ್ಯಪಾನ ಮಾಡುತ್ತಾರೆ. ಇದರಿಂದ ಮಹಿಳೆಯರು, ಮಕ್ಕಳು ಭಯದಿಂದ ಓಡಾಡಬೇಕಿದೆ. ಪ್ರಶ್ನಿದರೆ ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಎಂದು ದೂರಿದರು.

Advertisement

ಕ್ರೈಂ ಸಬ್‌ಇನ್ಸ್‌ಸೆಪ್ಟರ್‌ ನೇಮಿಸಿ: ಪುರಸಭೆ ಮಾಜಿ ಉಪಾಧ್ಯಕ್ಷ ಎಸ್‌ಟಿಡಿ ಶ್ರೀನಿವಾಸ್‌ ಮಾತನಾಡಿ, ಪಟ್ಟಣದ ಠಾಣೆಯಲ್ಲಿ ಅಪರಾಧ ವಿಭಾಗದ ಸಬ್‌ಇನ್ಸ್‌ಸ್ಪೆಕ್ಟರ್‌ ಇಲ್ಲದೇ ಸಮಸ್ಯೆಗಳು ಹೆಚ್ಚಾಗಿದೆ. ಮದ್ಯ ಅಕ್ರಮ ಮಾರಾಟ ಮಿತಿ ಮೀರಿದೆ. ಚೀಟಿ ಹೆಸರಿನಲ್ಲಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು. ಈ ಸಂಬಂಧ ಎಎಸ್‌ಐ ಒಬ್ಬರನ್ನು ಕ್ರೈಂ ವಿಭಾಗಕ್ಕೆ ನೇಮಿಸಲಾಗುವುದು. ಪರವಾನಗಿ ಇಲ್ಲದೆ ಚೀಟಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಡಿವೈಎಸ್‌ಪಿ ತಿಳಿಸಿದರು.

ಕ್ರಮಕ್ಕೆ ಒತ್ತಾಯ: ಪಟ್ಟಣದ ತುಮಕೂರು, ಬೆಂಗಳೂರು, ಮಂಗಳೂರು, ಮದ್ದೂರು ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ. ಹುಚ್ಚಮಾಸ್ತಿಗೌಡ ಹಾಗೂ ಗ್ರಾಮ ದೇವತೆ ವೃತ್ತದ ಅಕ್ಕಪಕ್ಕ ಎಲ್ಲೆಂದರಲ್ಲಿ ವಾಹನಗಳು ನಿಲ್ಲಿಸುವುದರಿಂದ ಟ್ರಾಫಿಕ್‌ ಸಮಸ್ಯೆ ಮಿತಿ ಮೀರಿದೆ. ಬೈಕ್‌ನಲ್ಲಿ ಮೂರು ಮಂದಿ ಕೂರಿಸಿಕೊಂಡು ಹೋಗುವುದು, ಬಸ್‌ ನಿಲ್ದಾಣ ಹಾಗೂ ಶಾಲಾ-ಕಾಲೇಜು ಬಳಿ ಹೆಣ್ಣು ಮಕ್ಕಳಿಗೆ ಚುಡಾಯಿಸುವುದು ಹೆಚ್ಚಾಗಿದೆ.

ಇದರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕೆ.ಆರ್‌.ರಂಗನಾಥ್‌, ಎಚ್‌.ಜಿ.ರಮೇಶ್‌, ರಾಮಚಂದ್ರ, ಅರುಣ್‌ ತಿಳಿಸಿದರು. ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಪುಂಡರಿಗೆ ಕಡಿವಾಣ ಹಾಕಲು ಗಸ್ತು ತೀವ್ರಗೊಳಿಸಲಾಗುವುದೆಂದು ಡಿವೈಎಸ್‌ಪಿ ತಿಳಿಸಿದರು.

ಚಿರತೆ ಹಾವಳಿ ತಪ್ಪಿಸಿ: ಚಿರತೆ ಹಾವಳಿ ಹೆಚ್ಚಾಗಿ ವ್ಯಕ್ತಿಯೋರ್ವನನ್ನು ಹಾಗೂ ಸಾಕು ಪ್ರಾಣಿಕಗಳನ್ನು ಕೊಂದು ಹಾಕಿದೆ ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಕುರುಡಿಹಳ್ಳಿ ಗ್ರಾಮದ ರಂಗರಾಮಯ್ಯ ಚಿರತೆ ಹಾವಳಿ ಕಡಿವಾಣ ಹಾಕಿ ಇಲ್ಲವಾದಲ್ಲಿ ಅವುಗಳನ್ನು ಎದರಿಸಲು ಬಂದೂಕಿಗೆ ಲೇಸನ್ಸ್‌ ಕೊಡಿ ಎಂದು ಮನವಿ ಮಾಡಿದರು. ಚಿರತೆ ಸೆರೆಗೆ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳು ಹಗಲು ಇರುಳು ಶ್ರಮಿಸುತ್ತಿದ್ದಾರೆ ಶೀಘ್ರದಲ್ಲೇ ಸೆರೆ ಹಿಡಿಯಲಾಗುವುದೆಂದು ಭರವಸೆ ನೀಡಿದರು. ಪಿಎಸ್‌ಐ ಎಸ್‌.ವಿಕಾಸ್‌ಗೌಡ ಇದ್ದರು.

31ರ ಒಳಗೆ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಿ: ರಾಜ್ಯದಲ್ಲಿ 6.23 ಕೋಟಿ ಜನಸಂಖ್ಯೆ ಇದ್ದು, ಆದರೆ ಎಲ್ಲಾ ಇಲಾಖೆ ಅಧಿಕಾರಿಗಳ ಹಾಗೂ ನೌಕರರ ಸಂಖ್ಯೆ 6.70 ಲಕ್ಷ. ಇವರಿಂದ ಎಲ್ಲಾ ಸಮಸ್ಯೆಗಳು ಪರಿಹರಿಸಲು ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕ ಸಹಕಾರ ಇದ್ದರಷ್ಟೇ ಸಮಸ್ಯೆ ಪರಿಹಾರ ಸಾಧ್ಯ. ಅಕ್ರಮವಾಗಿ ಬಿಪಿಎಲ್‌ ಪಡಿತರ ಕಾರ್ಡ್‌ ಹೊಂದಿರುವರು ಡಿ.31ರ ಒಳಗೆ ಆಹಾರ ಇಲಾಖೆ ಹಿಂದಿರುಗಿಸಿ ಎಪಿಎಲ್‌ ಕಾರ್ಡ್‌ ಅನ್ನಾಗಿ ಪರಿವರ್ತಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ ಎಚ್ಚರಿಸಿದರು.

ಅಕ್ರಮ ಮದ್ಯ ಮಾರಾಟ ಸರಿಯಲ್ಲ. ಮದ್ಯ ಮಾರಾಟ ಮುಕ್ತ ಗ್ರಾಮವನ್ನಾಗಿ ಮಾಡಲು ಪೊಲೀಸರಿಗೆ ನಾಗರಿಕರು ಸಹಕಾರ ನೀಡಬೇಕು.
-ಕೆ.ಎಸ್‌.ಜಗದೀಶ್‌, ಡಿವೈಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next