ಕಂಪ್ಲಿ: ರಾಜ್ಯ ಹೆದ್ದಾರಿ 29ರ ಮೂಲಕ ಸಂಚರಿಸುವ ಸರಕು ಲಾರಿಗಳ ಚಾಲಕರ ಮೇಲೆ ಕಂಪ್ಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಲಾರಿ ಚಾಲಕರು ತಾಲೂಕು ಕಚೇರಿಯ ಶಿರಸ್ತೇದಾರ್ ಎಸ್. ಶ್ರೀಧರ ಅವರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ತಡೆರಾತ್ರಿ ತುಂಗಭದ್ರಾ ಸೇತುವೆ ಮೂಲಕ ನಮ್ಮ ಲಾರಿ ತೆರಳಬೇಕಿತ್ತು. ಈ ವೇಳೆ ಸ್ಥಳೀಯ ಪೊಲೀಸರು ಬಂದು ವಿನಾಕರಾಣ ಹಲ್ಲೆ ನಡೆಸಿ ಮೊಬೈಲ್, ಸರಕಿಗೆ ಸಂಬಂಧಿಸಿದ ದಾಖಲೆ ಪತ್ರ ಕಸಿದುಕೊಂಡಿದ್ದಾರೆ ಎಂದು ಬಿಹಾರ ಮೂಲದ ಲಾರಿ ಚಾಲಕರಾದ ಸುಧೀರ್ ಯಾದವ್, ಸಂಜಯ್‌ರಾಯ್ ಆರೋಪಿಸಿದರು.
ತಡೆರಾತ್ರಿ ಭೇಟಿ: ಪಟ್ಟಣದ ಕೋಟೆ ಬಳಿಯ ತುಂಗಭದ್ರಾ ಸೇತುವೆ ಮೂಲಕ ಅಧಿಕ ಭಾರ ಹೊತ್ತ ಲಾರಿ ಬಿಡಲು ಕೆಲವು ಪೊಲೀಸರು ತಹಶೀಲ್ದಾರ್ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಮೊಬೈಲ್ ಗೆ ದೂರು ಬಂದ ಹಿನ್ನೆಲೆಯಲ್ಲಿ ರಾತ್ರಿ ಲಾರಿಗಳು ಸಾಗುವ ಪಟ್ಟಣದ ಹೊಸ ಬಸ್ ನಿಲ್ದಾಣದ ಸ್ಥಳಕ್ಕೆ ಭೇಟಿ ನೀಡಿದ್ದೇನೆ ಎಂದು ತಹಶೀಲ್ದಾರ್ ಶರಣಮ್ಮಕಾರಿ ತಿಳಿಸಿದರು.
ಈ ವೇಳೆಯಲ್ಲಿ ನಾಗರಿಕರು ಸೇತುವೆ ಮೂಲಕ ಲಾರಿ ಬಿಡಲು ಕೆಲ ಪೊಲೀಸರು ಚಾಲಕರಿಂದ ಹಣ ವಸೂಲಿ ಮಾಡುತ್ತಾರೆ ಎಂದು ದೂರಿದರು. ತಕ್ಷಣ ಸ್ಥಳದಲ್ಲಿದ್ದ ಪೊಲೀಸರನ್ನು ವಿಚಾರಿಸಿದಾಗ ಲಂಚ ಪಡೆದಿರುವ ಬಗ್ಗೆ ನಿರಾಕರಿಸಿದರು ಎಂದು ಮಾಹಿತಿ ನೀಡಿದರು. ಬಿಹಾರ ಮೂಲದ ಚಾಲಕರಿಬ್ಬರಿಗೆ ಪೊಲೀಸರು ಥಳಿಸಿದ್ದು, ಕ್ರಮ ಕೈಗೊಳ್ಳಬೇಕೆಂದು ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.