Advertisement
ಶಿಗ್ಗಾವಿ ಪಟ್ಟಣದ ನಿವಾಸಿ ಮಂಜುನಾಥ (ಮಲ್ಲಿಕ್) ಪಾಟೀಲ ಎಂಬ ಆರೋಪಿಯನ್ನು ಪೊಲೀಸರು ಗುರುವಾರ ಬೆಳಗಿನ ಜಾವ ಮುಂಡಗೋಡದಲ್ಲಿ ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಏ.19ರಂದು ಕೆಜಿಎಫ್-2 ಚಿತ್ರದ ರಾತ್ರಿ ಪ್ರದರ್ಶನದ ವೇಳೆ ಗುಂಡಿನ ದಾಳಿ ನಡೆಸಿದ್ದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಆತನ ಬಂಧನಕ್ಕೆ ಬಲೆ ಬೀಸಿದ್ದರು. ಮಂಜುನಾಥ ಪಾಟೀಲನ ಫೋಟೋದೊಂದಿಗೆ ಪ್ರಕಟಣೆಯೊಂದನ್ನು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹೊರಡಿಸಿ ಆತನ ಸುಳಿವು ಸಿಕ್ಕಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಲು ಮನವಿ ಮಾಡಿದ್ದರು.
Related Articles
Advertisement
ಬಳಿಕ ಆತನ ಮೊಬೈಲ್ ಲೋಕೇಷನ್ ಮೇಲೆ ನಿಗಾ ವಹಿಸಿ ಗುರುವಾರ ಬೆಳಗ್ಗೆ 6.30ರ ವೇಳೆಗೆ ಮುಂಡಗೋಡ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ ಒಂದು ಗನ್, 15 ಜೀವಂತ ಗುಂಡುಗಳು, 2 ಖಾಲಿ ಕೋಕಾ, ಒಂದು ಸ್ಕೂಟಿ ಮೋಟಾರು ಸೈಕಲ್, ಒಂದು ಮೊಬೈಲ್ ಜಪ್ತಿ ಮಾಡಲಾಗಿದೆ. ಈತ ಓಡಿ ಹೋಗಿ ಬಚ್ಚಿಟ್ಟುಕೊಳ್ಳಲು ನಗದು ಕೊಟ್ಟು ಸಹಾಯ ಮಾಡಿದ ಆರೋಪದ ಮೇಲೆ ಬಂಕಾಪುರದ ಇಸ್ಮಾಯಿಲ್ ಎಂಬಾತನನ್ನೂ ವಶಕ್ಕೆ ಪಡೆಯಲಾಗಿದೆ ಎಂದರು.
ಆರೋಪಿ ಬಂಧನಕ್ಕೆ ಎಎಸ್ಪಿ ವಿಜಯಕುಮಾರ ಪಾಟೀಲ, ಶಿಗ್ಗಾವಿ ಡಿಎಸ್‌ಪಿ ಓ.ಬಿ. ಕಲ್ಲೇಶಪ್ಪ ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಿ.ಕೆ. ಹಳಬಣ್ಣನವರ, ಪಿಐ ಸಂತೋಷ ಪಾಟೀಲ, ಪಿಐ ಎಂ.ಐ. ಗೌಡಪ್ಪಗೌಡ, ಪಿಎಸ್‌ಐ ಮಹಾಂತೇಶ, ಪಿಎಸ್‌ಐ ಶ್ರೀಶೈಲ ಪಟ್ಟಣಶೆಟ್ಟಿ, ಪಿಎಸ್‌ಐ ಪರಶುರಾಮ ಕಟ್ಟಿಮನಿ, ಸಿಬ್ಬಂದಿ ಕಾಶಿನಾಥ, ವೆಂಕಟೇಶ, ಮಂಜುನಾಥ ಲಮಾಣಿ, ಪುಟ್ಟಪ್ಪ ಬಾವಿಕಟ್ಟಿ, ಮಂಜುನಾಥ ಏರಿಶೀಮಿ, ಆನಂದ ದೊಡ್ಡಕುರುಬರ, ಮಹೇಶ ಹೊರಕೇರೆ, ಅಬುಸಲಿಯಾ ಕೋಟಿ, ಯಲ್ಲಪ್ಪ ದೊಡ್ಡಮನಿ, ಸತೀಶ ಮರಕಟ್ಟಿ, ಮಾರುತಿ ಹಾಲಬಾವಿ ಕಾರ್ಯಾಚರಣೆ ನಡೆಸಿದ್ದು, ಎಲ್ಲರಿಗೂ ಬಹುಮಾನ ನೀಡಲಾಗುವುದು ಎಂದರು.
ಶಿಗ್ಗಾವಿ ಪಟ್ಟಣದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿ ಅನ ಧಿಕೃತವಾಗಿ ಕಂಟ್ರಿ ಪಿಸ್ತೂಲ್ ಹೊಂದಿದ್ದು, ಸರ್ಕಾರದಿಂದ ಪರವಾನಗಿ ಪಡೆದಿಲ್ಲ. ಯಾವ ಉದ್ದೇಶಕ್ಕೆ ಗನ್ ತಂದಿದ್ದ, ಎಲ್ಲಿಂದ ತಂದಿದ್ದ ಎಂಬುದನ್ನು ಹೆಚ್ಚಿನ ತನಿಖೆ ಮೂಲಕ ಪತ್ತೆ ಹಚ್ಚಲಾಗುವುದು. –ಹನುಮಂತರಾಯ, ಎಸ್‌ಪಿ, ಹಾವೇರಿ