ದಂತೇವಾಡ: 10 ಪೊಲೀಸರು ಮತ್ತು ಒಬ್ಬ ನಾಗರಿಕನ ಸಾವಿಗೆ ಕಾರಣವಾದ ಛತ್ತೀಸ್‌ಗಢ ನಕ್ಸಲರ ದಾಳಿಯ ಬೆನ್ನಲ್ಲೇ ರಾಜ್ಯದ ನಕ್ಸಲ್‌ಪೀಡಿತ ಬಸ್ತಾರ್ ವಿಭಾಗದಲ್ಲಿ ಬರುವ ಎಲ್ಲ 7 ಜಿಲ್ಲೆಗಳಲ್ಲೂ ಕಟ್ಟೆಚ್ಚರ ಘೋಷಿ ಸಲಾಗಿದೆ. ವಾಹನಗಳಲ್ಲಿ ಸಂಚರಿ ಸುವಾಗ, ಐಇಡಿ ಹಾಗೂ ನೆಲಬಾಂಬುಗಳ ಶೋಧ ಕಾರ್ಯದ ವೇಲೆ ಅತ್ಯಂತ ಜಾಗರೂಕರಾಗಿರುವಂತೆ ಭದ್ರತಾಪಡೆ ಗಳಿಗೆ ಸೂಚನೆ ನೀಡಲಾಗಿದೆ ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್‌ರಾಜ್ ಪಿ. ಹೇಳಿದ್ದಾರೆ.
8 ದಿನಗಳ ಹಿಂದೆ: ಬುಧವಾರದ ದಾಳಿಗೂ 8 ದಿನಗಳ ಹಿಂದೆಯೇ ಅಂದರೆ ಎ.18 ರಂದು ಕಾಂಗ್ರೆಸ್ ಶಾಸಕರೊಬ್ಬರ ಬೆಂಗಾವಲು ಪಡೆ ಮೇಲೆ ನಕ್ಸಲರು ದಾಳಿಗೆ ನಡೆಸಿದ ಯತ್ನ ವಿಫಲವಾಗಿತ್ತು. ಶಾಸಕ ವಿಕ್ರಮ್ ಮಾಂಡವಿ ಅರು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಬಿಜಾಪುರ ಜಿಲ್ಲೆಯಲ್ಲಿ ಅವರ ಮೇಲೆ ನಕ್ಸಲರು ದಾಳಿಗೆ ಯತ್ನಿಸಿದ್ದರು. ಆದರೆ ಗುಂಡು ಹಾರಿಸುತ್ತಿದ್ದಂತೆ ನಕ್ಸಲನ ಗನ್ ಜಾಮ್ ಆಗಿತ್ತು. ಕೂಡಲೇ ಶಾಸಕರ ಚಾಲಕ ಕಾರಿನ ವೇಗವನ್ನು ಹೆಚ್ಚಿಸಿದ ಕಾರಣ ಅಂದು ಕಾರಲ್ಲಿದ್ದವರೆಲ್ಲರೂ ಪಾರಾಗಿದ್ದರು. ಹೀಗಾಗಿ ನಕ್ಸಲರು ಮತ್ತೂಂದು ದಾಳಿಗೆ ಸಂಚು ರೂಪಿಸಿದರು.
ಗ್ರಾಮಸ್ಥರ ನೆರವು: ಈ ದಾಳಿಗೆ ನಕ್ಸಲರು ಸ್ಥಳೀಯರ ನೆರವನ್ನು ಪಡೆದಿದ್ದರು ಎಂಬುದು ತಿಳಿದುಬಂದಿದೆ. ಬುಧವಾರ ಇಬ್ಬರು ನಕ್ಸಲರನ್ನು ಬಂಧಿಸಿದ್ದ ಡಿಆರ್‌ಜಿ ಕಮಾಂಡೋಗಳು, ಬಂಧಿತರೊಂದಿಗೆ ವಾಪಸಾಗುತ್ತಿದ್ದರು. ಬಂಧಿತರಿದ್ದ ವಾಹನ ವಾಪಸ್ ಆಗುತ್ತಿದ್ದಂತೆ, ಕಮಾಂಡೋಗಳಿದ್ದ ಎರಡನೇ ವಾಹನವನ್ನು ಅಡ್ಡಗಟ್ಟಿದ ಸ್ಥಳೀ ಯರು, ಆಮಾ ಉತ್ಸವಕ್ಕೆ ದೇಣಿಗೆ ಕೇಳ ತೊಡಗಿದರು. ಅಲ್ಲಿಂದ ಮುಂದೆ 200 ಮೀಟರ್ ಸಾಗುತ್ತಿದ್ದಂತೆ ಸುಧಾರಿತ ಸ್ಫೋ ಟಕ ಸ್ಫೋಟಗೊಂಡು, ಇಡೀ ವಾಹನವೇ ಛಿದ್ರಗೊಂಡಿತು. ವಾಹನದ ಚಾಲಕ ಮತ್ತು 10 ಪೊಲೀಸರು ಸ್ಥಳದಲ್ಲೇ ಅಸುನೀಗಿದರು ಎಂದು ಮೂಲಗಳು ತಿಳಿಸಿವೆ.
ವೀಡಿಯೋ ಬಹಿರಂಗ: ಬುಧವಾರದ ದಾಳಿಯದ್ದು ಎನ್ನಲಾದ ಕೆಲವು ವೀಡಿಯೋಗಳು ಗುರುವಾರ ಬಹಿರಂಗಗೊಂಡಿದೆ. ಸ್ಫೋಟಗೊಂಡ ಕೂಡಲೇ ವಾಹನದ ಹಿಂದೆ ಅಡಗಿಕೊಂಡ ಪೊಲೀಸರೊಬ್ಬರು ನಕ್ಸಲರತ್ತ ಫೈರಿಂಗ್ ಮಾಡುತ್ತಿರುವ ವೀಡಿಯೋ ಹರಿದಾಡುತ್ತಿದೆ. ಜತೆಗೆ ಸ್ಥಳೀಯನೊಬ್ಬ “ಉಡ್ ಗಯಾ, ಪೂರಾ ಉಡ್ ಗಯಾ”(ಎಲ್ಲವೂ ಪೂರ್ತಿ ಚಿಂದಿಯಾಯಿತು) ಎಂದು ಹೇಳುತ್ತಿರುವ ಧ್ವನಿಯೂ ವೀಡಿಯೋದಲ್ಲಿ ಕೇಳಿಸುತ್ತಿದೆ. ಆದರೆ, ಈ ವೀಡಿಯೋಗಳ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ.
ಶವಪೆಟ್ಟಿಗೆಗೆ ಹೆಗಲು ಕೊಟ್ಟ ಸಿಎಂ
ದಂತೇವಾಡದ ಪೊಲೀಸ್ ಲೈನ್‌ನಲ್ಲಿ ಗುರುವಾರ ಹುತಾತ್ಮ ಪೊಲೀಸರ ಪಾರ್ಥಿವ ಶರೀರಗಳಿಗೆ ಅಂತಿಮ ನಮನ ಸಲ್ಲಿಸಲಾಯಿತು. ಈ ವೇಳೆ ಅಲ್ಲೇ ಇದ್ದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಹುತಾತ್ಮರ ಶವಪೆಟ್ಟಿಗೆಗಳಿಗೆ ಹೆಗಲು ಕೊಟ್ಟರು. ಅನಂತರ ಪಾರ್ಥಿವ ಶರೀರಗಳನ್ನು ಅವರವರ ಹುಟ್ಟೂರುಗಳಿಗೆ ಕಳುಹಿಸಲಾಯಿತು. ಮೃತರಿಗೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಸಿಎಂ ಬಘೇಲ್, ನಮ್ಮ ಯೋಧರ ತ್ಯಾಗ ನಷ್ಟವಾಗಲು ಬಿಡುವುದಿಲ್ಲ. ನಕ್ಸಲರ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತದೆ ಎಂದು ಹೇಳಿದರು.