ಮಡಿಕೇರಿ: ವಿಚಾರಣೆಯ ನೆಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ ದೌರ್ಜನ್ಯ ನಡೆಸುವ ಮೂಲಕ ಎರಡು ಕಿಡ್ನಿ ವೈಫಲ್ಯ ಗೊಳ್ಳುವುದಕ್ಕೆ ಮಂಗಳೂರಿನಲ್ಲಿ ಸಿಸಿಬಿ ಪೊಲೀಸರು ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರಮುಖರು ಹಾಗೂ ಕಾರ್ಯಕರ್ತರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಖುರೇಷಿ ಎಂಬುವರನ್ನು ಬಂಧಿಸಿದ ಪೊಲೀಸರು, ಕಾನೂನಿಗೆ ವಿರುದ್ಧವಾಗಿ ಸತತ ಏಳು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ನಿರಂತರ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.
ಎರಡೂ ಕಿಡ್ನಿಗಳು ವೈಫಲ್ಯಗೊಳ್ಳುವುದಕ್ಕೆ ಕಾರಣಕರ್ತ ರಾಗಿರುವ ಎಲ್ಲ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಕಠಿನ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಕಾರರು ಒತ್ತಾಯಿ ಸಿದರು. ಯುವಕನ ಮೇಲಿನ ದೌರ್ಜನ್ಯವನ್ನು ಖಂಡಿಸಿ ನ್ಯಾಯಕ್ಕಾಗಿ ಒತ್ತಾಯಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭ ಪೊಲೀಸರು ವಿನಾಕಾರಣ ಪಿಎಫ್ಐ ಕಾರ್ಯ ಕರ್ತರನ್ನು ಬಂಧಿಸಿದ್ದಾರೆ. ಮಾಯಕ ಮುಸ್ಲಿಂ ಯುವಕರ ವಿರುದ್ಧ ಪೊಲೀಸರು ನಿರಂತರ ವಾಗಿ ದೌರ್ಜನ್ಯ ನಡೆಸುತ್ತಿದ್ದು, ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯ ಸಂದರ್ಭ ಪೊಲೀಸರ ಮೇಲೆ ಹಲ್ಲೆಯಾಗಿದೆ ಯೆಂದು ಹಿರಿಯ ಪೊಲೀಸ್ ಅಧಿಕಾರಿಗಳು ನಿರಾಧಾರ ಹೇಳಿಕೆ ಯನ್ನು ನೀಡಿದ್ದಾರೆ. ಪೊಲೀಸರ ದೌರ್ಜನ್ಯಕ್ಕೆ ದೃಶ್ಯಾವಳಿಗಳು ಸಾಕ್ಷಿಯಾಗಿದ್ದು, ಸಿಸಿ ಕೆಮರಾಗಳ ದೃಶ್ಯಾವಳಿಗಳ ಮೂಲಕ ತಪ್ಪಿತಸ್ಥ ಪೊಲೀಸರನ್ನು ಪತ್ತೆ ಹಚ್ಚಿ ಅಮಾನತುಗೊಳಿಸಬೇಕು. ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿರುವ ಖುರೇಷಿಗೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರವನ್ನು ನೀಡಬೇಕು ಹಾಗೂ ಬಂಧಿಸಲ್ಪಟ್ಟಿರುವ ಪ್ರತಿಭಟನಕಾರರನ್ನು ತತ್‌ಕ್ಷಣ ಬಿಡುಗಡೆಗೊಳಿಸಬೇಕೆಂದು ಪ್ರಮುಖರು ಒತ್ತಾಯಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನ್ಸೂರ್, ಅಮಿನ್ ಮೊಹಿಸಿನ್, ಅಬ್ದುಲ್ ಅಡಾರ್, ನೂರುದ್ದೀನ್ ಸ್ಥಳದಲ್ಲಿದ್ದರು.